ಉತ್ಪಾದಕರಿಗೆ ಮೋಸ: ಹೆದ್ದಾರಿಯಲ್ಲಿ ಹಾಲು ಸುರಿದು ಪ್ರತಿಭಟನೆ
ಮಂಡ್ಯ

ಉತ್ಪಾದಕರಿಗೆ ಮೋಸ: ಹೆದ್ದಾರಿಯಲ್ಲಿ ಹಾಲು ಸುರಿದು ಪ್ರತಿಭಟನೆ

July 10, 2018

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‍ಮುಲ್) ಉತ್ಪಾದಕರಿಂದ ಖರೀದಿಸಿದ ಹಾಲಿಗೆ ಕಡಿಮೆ ದರ ನೀಡಿ ವಂಚಿಸುತ್ತಿರುವ ಕ್ರಮ ಖಂಡಿಸಿ ರಸ್ತೆಗೆ ಹಾಲು ಸುರಿದು ಹಾಲು ಉತ್ಪಾದಕರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ನೇತೃತ್ವದಲ್ಲಿಂದು ಬೆಳಿಗ್ಗೆ ನಗರದ ಜಯಚಾಮರಾಜೇಂದ್ರ ಸರ್ಕಲ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಸ್ತೆಗೆ 150 ಲೀ. ಹಾಲು ಸುರಿದು ಮನ್‍ಮುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ರೈತ ಸಭಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ನಂತರ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದರು.

ಒಕ್ಕೂಟದ ಅಧ್ಯಕ್ಷ ಮಧುಚಂದನ್ ಮಾತನಾಡಿ, ಆಡಳಿತ ಮಂಡಳಿಯಿಂದ ಒಕ್ಕೂಟದ ನಷ್ಟಕ್ಕೆ ಕಾರಣವಾಗುವ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾ ಗುತ್ತಿದೆ. ಉತ್ಪಾದಕರಿಗೆ ಮೋಸವಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಹಾಲಿನ ದರ ಕಡಿತಗೊಳಿಸಲಾಗಿದೆ. ಒಕ್ಕೂಟದಲ್ಲಿ ನಿತ್ಯ 9 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ರೈತರಿಂದ ಲೀ. ಹಾಲನ್ನು 21 ರೂ. ಗೆ ಖರೀದಿಸಿ 35 ರೂ.ಗೆ ಮಾರಾಟ ಮಾಡ ಲಾಗುತ್ತಿದೆ. ಆದರೆ ಹೆಚ್ಚಿನ ದರ ನೀಡದೆ ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಸೇರಿ ದಂತೆ ವಿವಿಧ ಜಿಲ್ಲೆಗಳಲ್ಲಿ ಉತ್ಪಾದಕರಿಗೆ ಪ್ರತಿ ಲೀ. 28.68 ರೂ.ಗಳನ್ನು ನೀಡ ಲಾಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ರೈತರಿಗೆ ಕಡಿಮೆ ಹಣ ನೀಡುತ್ತಿರುವುದು ಖಂಡನೀಯ. ಕೂಡಲೇ ಮಂಡ್ಯ ದಲ್ಲೂ ಹಾಲಿನ ದರವನ್ನು 28 ರೂ.ಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹಾಗೂ ದಾಸ್ತಾನು ಹೆಚ್ಚಾಗಿದೆ ಎಂಬ ನೆಪವೊಡ್ಡಿ, ಮಾರುಕಟ್ಟೆ ವಿಸ್ತರಿಸದೇ ದಾಸ್ತಾನು ಹೆಚ್ಚಾಗಿದೆ ಎಂಬೆಲ್ಲ ಕಾರಣಗಳನ್ನು ನೀಡಿ ಬರುವ ಲಾಭವನ್ನೆಲ್ಲ ಆಡಳಿತ ಮಂಡಳಿಯೇ ಅನೇಕ ಪರ್ಯಾಯ ಮಾರ್ಗಗಳ ಮೂಲಕ ಹಣ ದೋಚುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟದ ಆಡಳಿತ ಮಂಡಳಿ ಹಾಲು ಉತ್ಪಾದಕರ ವಿರೋಧಿ ನೀತಿಯಿಂದಾಗಿ, ಸ್ವಾರ್ಥ, ಭ್ರಷ್ಟಾಚಾರ, ದುರಾಡಳಿತ ದಿಂದಾಗಿ ಕಳೆದ 2017ರ ಡಿ.30ರಂದು ನಡೆದ 357ನೇ ಸಭೆಯ ತೀರ್ಮಾನದಂತೆ ನವೆಂಬರ್ 2017ರ ಅಂತ್ಯಕ್ಕೆ 17.82 ಕೋಟಿ ರೂ. ನಷ್ಟ ಹೊಂದಿದೆ ಎಂದು ಹೇಳಿದರು.

ಒಕ್ಕೂಟದ ದುರಾಡಳಿತದ ಫಲವಾಗಿ ಕಳೆದ 4 ವರ್ಷಗಳಲ್ಲಿ 2 ಬಾರಿ ನೇಮ ಕಾತಿ ಪ್ರಕಿಯೆ ಮಾಡಿಕೊಂಡಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ದೇಶದ ಹಲವು ರಾಜ್ಯ ಗಳಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ನೇಮ ಕಾತಿ ಪ್ರಕ್ರಿಯೆಯಲ್ಲಿ ಶೇ.50ರಷ್ಟು ಮೀಸಲಿಟ್ಟಿರುವ ನಿಯಮಗಳನ್ನು ನಮ್ಮ ಒಕ್ಕೂಟ ಗಾಳಿಗೆ ತೂರಿದೆ. ಮತ್ತೆ 120 ಜನರನ್ನು ನೇಮಕಾತಿ ಮಾಡಿಕೊಳ್ಳಲು ಹುನ್ನಾರ ನಡೆಸಲು ಮುಂದಾಗಿದೆ. ನಷ್ಟದಲ್ಲಿರುವ ಹಾಲು ಒಕ್ಕೂಟಕ್ಕೆ ಈ ನೇಮಕಾತಿ ಅಗತ್ಯವಿದೆಯೇ? ಈ ನೇಮ ಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಉತ್ಪಾದ ಕರ ಹಿತ ಕಾಪಾಡಲು ಹಾಲಿನ ದರ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಕಾರಸವಾಡಿ ಮಹದೇವು, ಕೃಷ್ಣ, ವರಲಕ್ಷ್ಮಿ, ಶಿವಲಿಂಗಯ್ಯ, ಯಶೋಧ, ನಿಂಗಮ್ಮ, ಶಿಲ್ಪ, ಮಂಗಳ, ಶಶಿಕಲಾ, ರೂಪ, ತಿಮ್ಮನಹೊಸೂರು ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »