ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ
ಮೈಸೂರು

ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ

July 10, 2018

ಮೈಸೂರು:  ಹನ್ನೆರಡನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಶಂಭುಲಿಂಗಪ್ಪ ತಿಳಿಸಿದರು.

ಅಮೇರಿಕಾದ ಮೆರಿಲ್ಯಾಂಡ್‍ನಲ್ಲಿ ನಡೆದ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುತ್ತೂರು ಮಠ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿಸಿದರು.

ಅಮೇರಿಕಾದ ಮಿಷಿಗನ್‍ನಲ್ಲಿ 1999ರಲ್ಲಿ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ ಪ್ರಾರಂಭವಾಯಿತು. 2006ರಲ್ಲಿ ಮೆರಿಲ್ಯಾಂಡ್‍ನಲ್ಲಿ ಜೆಎಸ್‍ಎಸ್ ಮಿಷನ್‍ನ ಕೇಂದ್ರ ತೆರೆಯಲಾಯಿತು. 52 ಎಕರೆ ಜಾಗವಿರುವ ಈ ಕೇಂದ್ರದಲ್ಲಿ ಶಿವಲಿಂಗ, ಗಣಪತಿ, ಚಾಮುಂಡೇಶ್ವರಿ, ವೆಂಕಟೇಶ್ವರ ಹಾಗೂ ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನಿತ್ಯವೂ ಪೂಜೆ, ಅರ್ಚನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಪ್ರಾದೇಶಿಕ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಇತ್ಯಾದಿ ಭಾಷೆಗಳನ್ನು ಕಲಿಸುವುದರ ಜೊತೆಗೆ ಯೋಗ, ನೃತ್ಯ ಇನ್ನಿತರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾದಕೋಕಿಲ ತಂಡದ 30ಕ್ಕೂ ಹೆಚ್ಚು ಕಲಾವಿದರು ಶ್ರೀಮತಿ ಉಷಾಚಾರ್ ಅವರ ಮಾರ್ಗದರ್ಶನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನ್ಯೂಜೆರ್ಸಿಯಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶೈಲನಾಥ ಸ್ವಾಮೀಜಿ, ಆಲಮಟ್ಟಿ ಶ್ರೀ ರುದ್ರಮುನಿ ಸ್ವಾಮೀಜಿ, ಶ್ರೀ ಜಯರಾಜೇಂದ್ರ ನಾವಿಕ, ಅಕ್ಕ, ಕಾವೇರಿ ಕನ್ನಡ ಕೂಟ, ವಿಎಸ್‍ಎನ್‍ಎ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »