ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ
ಮೈಸೂರು

ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ

July 9, 2018

ಮೈಸೂರು: `ಶ್ರೀಗರಿ’ ಸಿನಿಮಾದ ಧ್ವನಿಸುರಳಿಯನ್ನು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಅಂಕಣಕಾರ ಡಾ.ಎಂ.ಆರ್.ರವಿ ಬಿಡುಗಡೆಗೊಳಿಸಿದರು.

ಕರ್ನಾಟಕ ಕಾವಲು ಪಡೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಹೇಶ್ವರ್ ವಿದ್ಯಾರಣ್ಯಂ ಅವರ ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನವಿರುವ `ಶ್ರೀಗರಿ’ ಕನ್ನಡ ಸಿನಿಮಾದ ಧ್ವನಿ ಸುರಳಿಯನ್ನು ಡಾ.ಎಂ. ಆರ್.ರವಿ ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚಿನ ಚಿತ್ರಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಆದ್ಯತೆ ಇಲ್ಲವಾಗಿದ್ದು, ಪರಿಣಾಮ ಪ್ರೇಕ್ಷಕ ರನ್ನು ಗೆಲ್ಲುವಲ್ಲಿ ಸಿನಿಮಾಗಳು ವಿಫಲ ವಾಗುತ್ತಿವೆ ಎಂದು ವಿಷಾದಿಸಿದರು.

ಸಾಮಾಜಿಕ ಕಳಕಳಿಯುಳ್ಳ ಕಥಾ ಹಂದರವಿರುವ ಸಿನಿಮಾಗಳು ಸಮಾಜ ಕ್ಕೊಂದು ಸಂದೇಶ ರವಾನಿಸಲಿವೆ. ಈ ನಿಟ್ಟಿನಲ್ಲಿ ಇಂತಹ ಸಿನಿಮಾಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣವಾಗುವ ಅಗತ್ಯವಿದೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಉದಯೋನ್ಮುಖ ಪ್ರತಿಭೆಗಳು ವಿಶೇಷ ಅಭಿಯನದೊಂದಿಗೆ ಪ್ರೇಕ್ಷಕರನ್ನು ಒಲಿಸಿಕೊಳ್ಳಬೇಕು ಎಂದ ಅವರು, ಕರ್ನಾಟಕ ಕಾವಲು ಪಡೆ ಪ್ರತಿಭಾವಂತರಿಗೆ ಈ ರೀತಿಯ ಉತ್ತೇಜನ ನೀಡುತ್ತಿರುವುದು ಶ್ಲಾಘ ನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಅನ್ಯ ಭಾಷೆಗಳ ಚಿತ್ರಗಳೇ ಪ್ರದರ್ಶನ ಕಾಣುವಂತಾಗಿದೆ. ಆದರೆ ಕನ್ನಡದ ಚಿತ್ರಗಳು ಬೇರೆ ರಾಜ್ಯಗಳಲ್ಲಿ ತೆರೆ ಕಾಣವುದು ತೀರಾ ವಿರಳ. ಪರಿಣಾಮ ಕನ್ನಡ ಭಾಷೆಯ ಚಿತ್ರಗಳು ಜನರ ನೆನಪಲ್ಲಿ ಉಳಿಯದೇ ಮರೆ ಯಾಗುತ್ತಿವೆ ಎಂದು ವಿಷಾದಿಸಿದರು.
ಇದೇ ವೇಳೆ ಚಿತ್ರದ ಹಾಡುಗಳನ್ನು ಯು- ಟ್ಯೂಬ್‍ಗೆ ಅಪ್ಲೋಡ್ ಮಾಡಲಾಯಿತು. `ಶ್ರೀಗರಿ’ ಸಿನಿಮಾ ನಿರ್ದೇಶಕ ಗ್ರಹೇಶ್ವರ್ ವಿದ್ಯಾರಣ್ಯಂ, ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‍ಕುಮಾರ್ ಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಮತ್ತು ಸಾಹಿತಿ ಟಿ.ಸತೀಶ್ ಜವರೇಗೌಡ ಮತ್ತಿತರರು ಹಾಜರಿದ್ದರು.

Translate »