ಮಹಿಳೆ ಪ್ರಜ್ಞೆ ತಪ್ಪಿಸಿ 5 ಲಕ್ಷ ನಗದು, ಚಿನ್ನಾಭರಣ ಕಳವು
ಮೈಸೂರು

ಮಹಿಳೆ ಪ್ರಜ್ಞೆ ತಪ್ಪಿಸಿ 5 ಲಕ್ಷ ನಗದು, ಚಿನ್ನಾಭರಣ ಕಳವು

July 9, 2018

ಮೈಸೂರು: ವಂಚಕಿಯೊಬ್ಬಳು ಸಹಾಯ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಪ್ರಜ್ಞೆ ತಪ್ಪಿಸಿ, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಭಾನುವಾರ ಹಾಡಹಗಲೇ ನಡೆದಿದ್ದು, ನಾಗರಿಕರ ಬೆಚ್ಚಿ ಬೀಳಿಸಿದೆ.

ಮೈಸೂರಿನ ಕನಕಗಿರಿ ಬಡಾವಣೆಯ ನಿವಾಸಿ ನಾಗರಾಜು ಅವರ ಪತ್ನಿ ಲಕ್ಷ್ಮೀ (40) ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಹೊಂಚು ಹಾಕಿದ್ದ ವಂಚಕಿ, ಸಹಾಯ ಕೇಳುವ ನೆಪದಲ್ಲಿ ಬಂದು, ಸುಮಾರು 300 ಗ್ರಾಂ ತೂಕದ ಚಿನ್ನಾಭರಣ ಹಾಗೂ 5 ಲಕ್ಷ ರೂ. ಹಣವನ್ನು ದೋಚಿ ಕೊಂಡು ಪರಾರಿಯಾಗಿದ್ದಾಳೆ.

ಭಾನುವಾರ ಮಧ್ಯಾಹ್ನ ಸುಮಾರು 12.30ರ ವೇಳೆಯಲ್ಲಿ ಲಕ್ಷ್ಮೀ ಅವರು ಒಬ್ಬರೇ ಇದ್ದಾಗ, ಮನೆಯ ಬಾಗಿಲಿಗೆ ಬಂದ ಅಪರಿಚಿತ ಮಹಿಳೆ, ನನ್ನ ಮಗು ವಿನ ಕಿವಿ ಚುಚ್ಚಿಸಬೇಕು ಒಂದೈದು ರೂಪಾಯಿ ಸಹಾಯ ಮಾಡು ತಾಯಿ ಎಂದು ಅಂಗಲಾಚಿದ್ದಾಳೆ. ಮಹಿಳೆಯನ್ನು ಕಂಡು ಮರುಗಿದ ಲಕ್ಷ್ಮೀ ಅವರು, ಒಂದು ನಿಮಿಷ ಇಲ್ಲೇ ಇರಮ್ಮ ಬರುತ್ತೇನೆಂದು ಹೇಳಿ, ಹಣ ತರಲೆಂದು ಕೋಣೆಯೊಳಗೆ ಹೋಗಿದ್ದಾರೆ. ಇದಕ್ಕಾಗಿ ಹೊಂಚು ಹಾಕಿದ್ದ ವಂಚಕಿ, ಲಕ್ಷ್ಮೀ ಅವರನ್ನು ಹಿಂಬಾಲಿಸಿ, ಪ್ರಜ್ಞೆ ತಪ್ಪಿಸುವ ಔಷಧಿ ಸಿಂಪಡಿಸಿದ್ದ ಬಟ್ಟೆಯನ್ನು ಅವರ ಮುಖಕ್ಕೆ ಒತ್ತಿದ್ದಾಳೆ. ಪರಿಣಾಮ ಲಕ್ಷ್ಮೀ ಅವರು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ವಂಚಕಿ ಮನೆಯ ಬಾಗಿಲ ಚಿಲಕ ಹಾಕಿಕೊಂಡು, ಕೊಠಡಿಯ ಬೀರುವಿನಲ್ಲಿದ್ದ ಸುಮಾರು 300 ಗ್ರಾಂ ತೂಕದ ಚಿನ್ನಾಭರಣ ಹಾಗೂ 5 ಲಕ್ಷ ರೂ. ಹಣವನ್ನು ದೋಚಿಕೊಂಡು ಕಾಲ್ಕಿತ್ತಿದ್ದಾಳೆ.

ಪ್ರಜ್ಞೆ ತಪ್ಪಿದ್ದ ಲಕ್ಷ್ಮೀ ಅವರಿಗೆ ಸುಮಾರು 2 ಗಂಟೆಯ ನಂತರ ಎಚ್ಚರವಾಗಿದೆ. ಆಗ ಕೊಠಡಿಗೆ ಹೋಗಿ ನೋಡಿದಾಗ ಬೀರು ವಿನ ಬಾಗಿಲು ತೆರೆದಿದ್ದನ್ನು ಕಂಡು, ಆತಂಕ ದಿಂದ ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ತಮ್ಮ ಪತಿ ನಾಗರಾಜು ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಲಕ್ಷ್ಮೀ ಅವರ ದೂರಿ ನನ್ವಯ ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಕೃಷ್ಣರಾಜ ಉಪವಿಭಾಗದ ಎಸಿಪಿ ಧರ್ಮಪ್ಪ ಅವರು, ತನಿಖಾಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು, ವಂಚಕಿ ಪತ್ತೆಗೆ ಶೋಧ ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಲಕ್ಷ್ಮೀ ಅವರ ಮನೆಯ ಆಸು-ಪಾಸಿನಲ್ಲಿರುವ ಮನೆಗಳು, ಅಂಗಡಿಗಳ ಬಳಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳ ಫುಟೇಜ್ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಯ ನೆಮ್ಮದಿ ಕೆಡಿಸುವ ದುಷ್ಕೃತ್ಯಗಳು ಮರುಕಳಿ ಸುತ್ತಲೇ ಇವೆ. ವಂಚಕರು, ಪೊಲೀಸರ ಹದ್ದಿನ ಕಣ್ಣನ್ನೂ ತಪ್ಪಿಸಿ, ವಿಭಿನ್ನ ಸೋಗಿ ನಲ್ಲಿ ಸಾರ್ವಜನಿಕರ ದೋಚುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕುವೆಂಪುನಗರ ಬಸ್ ಡಿಪೋ ರಸ್ತೆಯ ಲೀಲಾದೇವಿ ಅವರ ಮನೆಗೆ ನಗರ ಪಾಲಿಕೆ ಅಧಿಕಾರಿ ಗಳ ಸೋಗಿನಲ್ಲಿ ಹೋಗಿ ಸುಮಾರು 280 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದರು. ಪ್ರಭಾ ಚಿತ್ರಮಂದಿರ ಸಮೀಪದ ಗಲ್ಲಿಯೊಂದರಲ್ಲಿ ಪುಟ್ಟಮ್ಮ ಎಂಬುವವರಿಗೆ ವಂಚಿಸಿದ ಅಪರಿಚಿತ ಮಹಿಳೆಯೊಬ್ಬಳು, ನಕಲಿ ಚಿನ್ನಾಭರಣ ನೀಡಿ, ಸುಮಾರು 38 ಗ್ರಾಂ ತೂಕದ ಅಸಲಿ ಚಿನ್ನಾಭರಣವನ್ನು ದೋಚಿ ಪರಾರಿ ಯಾಗಿದ್ದಾಳೆ. ಹಾಗೆಯೇ ಇಂದು ಸಹಾಯ ಕೇಳುವ ನೆಪದಲ್ಲಿ ಬಂದು ಲಕ್ಷ್ಮೀ ಅವರ ಪ್ರಜ್ಞೆ ತಪ್ಪಿಸಿ, ಚಿನ್ನಾಭರಣ ಹಾಗೂ ಹಣ ವನ್ನು ದೋಚಲಾಗಿದೆ. ವೃದ್ಧೆಯರು, ಒಂಟಿಯಾಗಿರುವ ಮಹಿಳೆಯರನ್ನೇ ಹೊಂಚು ಹಾಕಿ ವಂಚಿಸಲಾಗುತ್ತಿದೆ.

ಮಕ್ಕಳ ಹೆಸರಲ್ಲಿ ಸಹಾಯ ಬೇಡುವುದು, ವಸ್ತುಗಳನ್ನು ಮಾರುವುದು, ಸಹಾಯಕ್ಕೆ ಬರುವುದು ಹೀಗೆ ವಿವಿಧ ನೆಪದಲ್ಲಿ ಅಮಾಯಕ ಮಹಿಳೆಯರನ್ನು ವಂಚಿಸುವವರು ಹೆಚ್ಚಾಗುತ್ತಿದ್ದಾರೆ. ಇಂತಹವರ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರೂ ಫಲ ನೀಡಿಲ್ಲ.

ಕೆ.ಆರ್.ಆಸ್ಪತ್ರೆ ಸೇರಿದಂತೆ ಅಮಾಯಕರನ್ನು ಹೆಚ್ಚಾಗಿ ವಂಚಿಸುವ ಸ್ಥಳಗಳಲ್ಲಿ ಮಹಿಳಾ ಪೊಲೀಸರು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಿದರೂ ವಂಚಕಿಯರು ಬಲೆಗೆ ಬೀಳುತ್ತಿಲ್ಲ. ಆದರೆ ಒಂದಿಲ್ಲೊಂದು ದಿನ ವಂಚಕರನ್ನು ಹೆಡೆಮುರಿ ಕಟ್ಟುತ್ತೇವೆಂಬ ವಿಶ್ವಾಸ ಪೊಲೀಸರಲ್ಲಿದೆ. ಅದು ಆದಷ್ಟು ಬೇಗ ಸಾಕಾರವಾಗಿ, ನಾಗರಿಕರಿಗೆ ನೆಮ್ಮದಿ ದೊರಕಿಸಬೇಕು.

ಇದಕ್ಕೂ ಮುಖ್ಯವಾಗಿ ಅಪರಿಚಿತರ ಬಗ್ಗೆ ಸಾರ್ವಜನಿಕರು ಹುಷಾರಾಗಿರಬೇಕು. ಚಿಂದಿ ಬಟ್ಟೆ ತೊಟ್ಟ ಭಿಕ್ಷುಕರು ಅಥವಾ ಗರಿಗರಿ ಉಡುಗೆ ಹಾಕಿಕೊಂಡ ಅಧಿಕಾರಿಗಳ ಸೋಗಿನಲ್ಲೂ ಕೈಚಳಕ ಮೆರೆಯಬಹುದು. ಮನೆಯಲ್ಲಿ ಒಬ್ಬರೇ ಇದ್ದಾಗ ಪೂರ್ವಾಪರ ತಿಳಿಯದೆ ಯಾರಿಗೂ ಮನೆಯೊಳಗೆ ಪ್ರವೇಶ ನೀಡಬೇಡಿ. ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ.

Translate »