ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ
ಮೈಸೂರು

ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ

July 9, 2018

ಮೈಸೂರು:  ತಮ್ಮ ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ ಎಂದು ಅರ್ಬನ್ ಪ್ರಾಪರ್ಟಿ ಓನರ್‍ಶಿಪ್ ರೆಕಾರ್ಡ್ (ಯುಪಿಓಆರ್) ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ ತಿಳಿಸಿದರು.

ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ತು ಕಚೇರಿಯಲ್ಲಿ ನಡೆದ ಮೈಗ್ರಾಪ ಸಾಮಾನ್ಯ ಸಭೆಯಲ್ಲಿ ‘ಆಸ್ತಿ ಹಕ್ಕು’ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ ಜಾರಿಗೆ (ಯುಪಿಓಆರ್) ತಂದಿದೆ. ಆಸ್ತಿದಾರರಿಗೆ ಇನ್ನು ಮುಂದೆ `ಡಿಜಿಟಲ್ ಆಸ್ತಿ ಕಾರ್ಡ್’ ಪ್ರತಿಯೊಬ್ಬರಿಗೂ ಕಡ್ಡಾಯವಾಗಲಿದೆ ಎಂದರು.

ಕಂದಾಯ ಇಲಾಖೆಯ ಅಂಗ ಸಂಸ್ಥೆ ಯಾದ ಭೂ ಮಾಪನ ಇಲಾಖೆ ಮೂಲಕ ಬೆಂಗಳೂರು, ಮೈಸೂರು ಸೇರಿದಂತೆ ಇತರೆ ನಗರಗಳಲ್ಲಿ ಪ್ರಾಯೋಗಿಕವಾಗಿ ಯುಪಿಓಆರ್ ಯೋಜನೆಯನ್ನು ಅನು ಷ್ಠಾನಗೊಳಿಸಿದೆ. ಅದರಂತೆ ಮೈಸೂರು ನಗರ ದಲ್ಲೂ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಈ ಯೋಜನೆ ಕಡ್ಡಾಯವಾಗಲಿದೆ. ಈ ವ್ಯಾಪ್ತಿಯಲ್ಲಿ ಮೈಸೂರು ನಗರ, ರಿಂಗ್ ರೋಡ್ ಆಸು-ಪಾಸು ಸೇರಿದಂತೆ 46 ಗ್ರಾಮ ಗಳನ್ನೊಳಗೊಂಡಂತೆ ಈ ಯೋಜನೆ ಯನ್ನು ಹಲವು ವರ್ಷಗಳ ಹಿಂದೆಯೇ ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಬಹುತೇಕ ಸರ್ಕಾರಿ, ಖಾಸಗಿ ಸೇರಿದಂತೆ ಸಾರ್ವಜ ನಿಕರ ಆಸ್ತಿಗಳ ಮಾಲೀಕತ್ವವನ್ನು ಗುರುತಿಸ ಲಾಗಿದೆ. ಸರ್ವೆ ನಡೆದ ಜಾಗಗಳಿಗೆ ಡ್ರಾಫ್ಟ್ ಪಿಆರ್ ಕಾರ್ಡ್(ಆಸ್ತಿ ದಾಖಲೆಯ ಕರಡು ಪತ್ರ) ನೀಡಲಾಗುತ್ತಿದೆ ಎಂದರು.

ಯುಪಿಓಆರ್‍ನಿಂದ ಅನುಕೂಲ ಗಳೇನು?: ಈ ಯೋಜನೆಯಿಂದ ಸಮಾಜಕ್ಕೆ ಏನು ಅನುಕೂಲವಿದೆ ಎಂದು ಮೈಗ್ರಾಪ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ, ಯೋಜನಾ ಧಿಕಾರಿ ಪ್ರಸಾದ್ ಕುಲಕರ್ಣಿ ಉತ್ತರಿಸಿ, ಸಾರ್ವಜನಿಕರ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಜಾಗವನ್ನು ಭೂಗಳ್ಳರಿಂದ ರಕ್ಷಿಸಲು ಯೋಜನೆ(ಯುಪಿಓಆರ್) ಸಹ ಕಾರಿಯಾಗಲಿದೆ. ಅಲ್ಲದೆ, ಪ್ರತಿ ಆಸ್ತಿ ದಾಖಲೆಗೆ ಸಂಬಂಧಿಸಿದ ಮಾಲೀಕರ ಎರಡು ಕೈಗಳ ಹಸ್ತದ ಬಯೋಮೆಟ್ರಿಕ್ ವ್ಯವಸ್ಥೆ ದೊರೆಯಲಿದ್ದು, ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಡಲಿದೆ. ಜೊತೆಗೆ ಆಸ್ತಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಉಲ್ಲೇಖವಿದ್ದು, ಆಸ್ತಿ ಹಿನ್ನೆಲೆ ಹಾಗೂ ಅಳತೆ ಮಾನದಂಡದೊಂದಿಗೆ ದಾಖಲೆ ಸಿದ್ಧಗೊಳ್ಳಲಿದೆ ಎಂದು ಸಭೆಗೆ ಯೋಜನೆ ಯ ಪೂರ್ಣ ವಿವರ ನೀಡಿದರು.

ಹಳ್ಳಿ ಪ್ರದೇಶಗಳನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿರುವ ಖಾಲಿ ನಿವೇಶನ, ಕಟ್ಟಡ, ವಾಸದ ಮನೆಗಳನ್ನು ಅಧಿಕಾರಿ ಗಳು ಇಟಿಎಸ್ ಮತ್ತು ಡಿಜಿಪಿಎಸ್ ಉಪಕರಣಗಳ ಮೂಲಕ ಅಳತೆ ಮಾಡಿ, ಮಾಲೀಕರು ಹೆಸರು, ಆಸ್ತಿಯ ಸ್ವರೂಪ ಮ್ಯುಟೇಷನ್ ಸಂಖ್ಯೆ ಸೇರಿ, ನಗರ ಪಾಲಿಕೆ, ಮುಡಾ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗೆ ನೀಡಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ದತ್ತಾಂಶ ಕ್ರೋಢೀಕರಣ ಮಾಡಲಾಗುತ್ತದೆ. ಅಲ್ಲದೆ, ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿ, ಅಂತಿಮವಾಗಿ ‘ಡಿಜಿಟಲ್ ಆಸ್ತಿ ಕಾರ್ಡ್‍ನಲ್ಲಿ’ ಸಂಪೂರ್ಣ ಮಾಲೀಕತ್ವದ ವಿವರಗಳು ಅಡಕವಾಗಿರುತ್ತವೆ ಎಂದರು.

ಆಸ್ತಿ ವ್ಯಾಜ್ಯಗಳು ಇಳಿಮುಖ: ಯುಪಿ ಓಆರ್ ಯೋಜನೆ ಕಂದಾಯ ಇಲಾಖೆಯ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆ ಜಾರಿಗೊಂಡಿರುವುದರಿಂದ ನಾನಾ ರೂಪದ ಆಸ್ತಿ ವ್ಯಾಜ್ಯಗಳು ಬಹುತೇಕ ಇಳಿಮುಖವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು, ಆಸ್ತಿಗೆ ಸಂಬಂಧಿಸಿದ ತಿದ್ದುಪಡಿ, ಅಕ್ರಮ ದಾಖಲೆ ಪರಭಾರೆ ಮಾಡುವುದು ತಪ್ಪಲಿದೆ. ಒಮ್ಮೆ ಕಂಪ್ಯೂಟರ್ ನಲ್ಲಿ ದಾಖಲೆ ಸ್ಕ್ಯಾನ್ ಆದರೆ, ಮುಂದೆ ಯಾವುದೇ ಕಾರಣಕ್ಕೂ ನಕಲಿ ದಾಖಲೆ ಸೃಷ್ಟಿಗೆ ಜಾಗವಿಲ್ಲ ಎಂದರು.

ಭೂ ಅಕ್ರಮಕ್ಕೆ ಬ್ರೇಕ್: ಯುಪಿಓಆರ್ ಯೋಜನೆಯಿಂದ ಸರ್ಕಾರಿ ಭೂಮಿಯನ್ನು ಸ್ಪಷ್ಟ ಮತ್ತು ನಿಖರವಾಗಿ ಗುರುತಿಸಬಹುದು. 2011 ರಿಂದ ಇಲ್ಲಿಯವರೆಗೆ ನೂರಾರು ಎಕರೆ ಸರ್ಕಾರಿ ಒತ್ತುವರಿ ಭೂಮಿಯನ್ನು ಗುರುತಿಸಿ, ಮರಳಿ ಸರ್ಕಾರದ ವಶಕ್ಕೆ ಪಡೆಯ ಲಾಗಿದೆ. ಅಂದಾಜು ನೂರಾರು ಎಕರೆ ಅಕ್ರಮ ಆಸ್ತಿ ಬಯಲಿಗೆ ಬಂದಿದೆ ಎಂದರು.

ಆಸ್ತಿಗಳ ವಿಂಗಡಣೆ: ಈ ಯೋಜನೆಯಲ್ಲಿ ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿ ವಿಂಗ ಡಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಜಾಗವನ್ನು ಸರ್ವೆ ಮಾಡುವ ಮಾಲೀಕರ ಮಾಹಿತಿ, ಆಸ್ತಿಯ ವಿಸ್ತೀರ್ಣದ ಅಳತೆ, ದಿಕ್ಕುಗಳು, ನಕ್ಷೆ ಸೇರಿದಂತೆ ನಿಖರ ದತ್ತಾಂಶ ದಾಖಲಾಗಲಿದೆ. ಈ ಮಾಹಿತಿ ಯನ್ನು ಸಂಗ್ರಹಿಸಿ ಆನ್‍ಲೈನ್‍ನಲ್ಲಿ ನಮೂದಿಸಿದ ಬಳಿಕ ಅಂತಿಮ `ಡಿಜಿಟಲ್ ಆಸ್ತಿ ಕಾರ್ಡ್’ಗಳು ಲಭ್ಯವಾಗುತ್ತದೆ ಎಂದು ಪ್ರಸಾದ್ ತಿಳಿಸಿದರು.

ಆಸ್ತಿ ಕಾರ್ಡ್ ದಾಖಲೆ ನಿರ್ವಹಣೆ ಹೇಗೆ?: ಪಿಪಿಪಿ ಅಡಿ ಭೂ ದತ್ತಾಂಶ ನಿರ್ವ ಹಣೆಯ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಮೈಸೂರಿನ ಯುಪಿಓಆರ್ ಅನುಷ್ಠಾನ ಗೊಳ್ಳುತ್ತಿದೆ. ನಗರದ ಆಸ್ತಿಗಳನ್ನು ಮುಡಾ, ಗ್ರಾಮಠಾಣಾ, ಆಶ್ರಯ ಬಡಾವಣೆ ಸೇರಿದಂತೆ ಹಲವು ರೀತಿಯಲ್ಲಿ ವರ್ಗೀಕರಣ ಗೊಂಡಿದ್ದು, ಆಯಾಯ ವರ್ಗೀಕರಣಕ್ಕೆ ತಕ್ಕಂತೆ ಮಾಲೀಕರು, ನಿಗದಿಗೊಳಿಸಿದ ದಾಖಲೆಗಳನ್ನು ಸಲ್ಲಿಸಿ, ಅಂತಿಮ ಪ್ರಮಾಣ ಪತ್ರ ಪಡೆಯಬಹುದು. ಹೆಚ್ಚಿನ ವಿವರಗಳಿಗೆ http://www.upor.karnataka.gov.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಇನ್ಮುಂದೆ ಮೈಸೂರು ನಗರದಲ್ಲಿ ಆಸ್ತಿಯ ಎಲ್ಲಾ ವ್ಯವಹಾರಗಳಿಗೆ ಯುಪಿಓಆರ್‍ನ ಎನ್‍ಓಸಿ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮೈಗ್ರಾಪ ಸದಸ್ಯರು ಚಾಮುಂಡಿಬೆಟ್ಟದ ಬಹುಮಹಡಿ ಕಟ್ಟಡದ ವಾಹನ ನಿಲ್ದಾಣ ವಿವಾದ, ಮೈಸೂರು-ಹುಣಸೂರು ರಸ್ತೆಯಲ್ಲಿ ಜಲದರ್ಶಿನಿಯಿಂದ ಪಡುವಾರಹಳ್ಳಿ ವೃತ್ತದವರೆಗೆ ರಸ್ತೆ ನೇರಗೊಳಿಸುವ ಕಾಮಗಾರಿ ಹೋರಾಟದ ವಿವಿಧಹಂತದ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ಬಾಮಿ ವಿ.ಶೆಣೈ, ಎಸ್.ಡಿ.ಸಾಹುಕಾರ್, ಎಸ್.ಎಸ್.ನಾರಾಯಣ್, ಬಿ.ಆರ್. ಶ್ರೀಕಂಠಯ್ಯ, ರಘುಪತಿ, ಗಂಗಾಪ್ರಸಾದ್, ಎ.ಕೆ.ಕೃಷ್ಣನ್, ಅಸಿಫ್ ಅಲಿ ಖಾನ್, ಪಿ.ಎಂ. ಭಟ್, ಸಿ.ಆರ್. ಅಶ್ವತ್ಥನಾರಾಯಣ್, ಎಲ್.ಮುರುಳಿ, ಡಾ.ಕೆ.ಆರ್.ಜೋಶಿ, ಥಾಮಸ್ ಆಳ್ವಾ, ಟಿ.ಮಹೇಂದ್ರ, ಎಂ. ಜಾನಕಿ ರಾಮನ್, ಶ್ರೀಮತಿ ಹರಿಪ್ರಸಾದ್, ರವಿಚಂದ್ರ ಬೆಕಲ್, ಕೊ.ಸು.ನರಸಿಂಹಮೂರ್ತಿ, ಯು.ಬಿ. ಆಚಾರ್ಯ, ಸುರೇಶ್ ಎಸ್.ನಾಯಕ್, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ಕೆ.ಎಸ್.ವೆಂಕಟೇಶ್, ಮೈಗ್ರಾಪ ಕಾರ್ಯಾ ಧ್ಯಕ್ಷೆ ಎಸ್. ಶೋಭನಾ, ಎ.ಮಂಜು, ಉಷಾ ನಾರಂಗ್ ಸೇರಿದಂತೆ ಇತರರಿದ್ದರು.

ಕುರುಬಾರಹಳ್ಳಿ ಸರ್ವೆ ನಂ.4ರ ಆಸ್ತಿ ಕಾರ್ಡ್ ವಿತರಣೆ ಇಲ್ಲ

ಕುರುಬಾರ ಹಳ್ಳಿ ಸರ್ವೆ 4ರ ವ್ಯಾಪ್ತಿಯ ಜಮೀನಿನ ವಿವಾದ ಕೋರ್ಟ್ ನಲ್ಲಿರುವ ಕಾರಣ, ಈ ಸರ್ವೆ ನಂಬರ್ ವ್ಯಾಪ್ತಿಯ ಬಡಾವಣೆಗಳಿಗೆ `ಡಿಜಿಟಲ್ ಆಸ್ತಿ ಕಾರ್ಡ್’ ವಿತರಣೆ ಸದ್ಯಕ್ಕೆ ಸಾಧ್ಯವಿಲ್ಲ.ಕೆ.ಸಿ, ಜೆಸಿ, ಸಿದ್ದಾರ್ಥ ಬಡಾವಣೆ, ತೆರಿಗೆ ಇಲಾಖೆ ಬಡಾವಣೆ ಹಾಗೂ ಆಲನಹಳ್ಳಿ ಬಡಾವಣೆಯ ಆಸ್ತಿ ಮಾಲೀಕತ್ವದ ಬಗ್ಗೆ ಸರ್ಕಾರದ ಅಂತಿಮ ನಿರ್ಧಾರ, ನಮ್ಮ ಇಲಾಖೆಗೆ ತಲುಪಿಲ್ಲ. ಈ ಆದೇಶ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮೈಗ್ರಾಪ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

Translate »