ಸಿಎಂ ಕುಮಾರಸ್ವಾಮಿ ಮಾತು ತಪ್ಪಿ ರೈತರನ್ನು ವಂಚಿಸಿದ್ದಾರೆ: ರೈತ ಸಂಘ, ಹಸಿರು ಸೇನೆ ಕಿಡಿ
ಮೈಸೂರು

ಸಿಎಂ ಕುಮಾರಸ್ವಾಮಿ ಮಾತು ತಪ್ಪಿ ರೈತರನ್ನು ವಂಚಿಸಿದ್ದಾರೆ: ರೈತ ಸಂಘ, ಹಸಿರು ಸೇನೆ ಕಿಡಿ

July 9, 2018

ಮೈಸೂರು: ರಾಜ್ಯ ರೈತರ ಬೆಳೆಸಾಲದ ಒಟ್ಟು 53 ಸಾವಿರ ಕೋಟಿ ರೂ. ಅನ್ನು ಪೂರ್ಣವಾಗಿ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸುಸ್ತಿ ಉಳಿಸಿಕೊಂಡ ರೈತರ 2 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾ ಮಾಡುವ ಘೋಷಣೆ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯವನ್ನು ವಂಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಿಡಿಕಾರಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಮುಖ್ಯಮಂತ್ರಿ ಆದ ನಂತರ ರಾಜ್ಯದ ರೈತರ ಬೆಳೆಸಾಲದ ಒಟ್ಟು ಮೊತ್ತ 53 ಸಾವಿರ ಕೋಟಿ ರೂ. ಅನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕೇವಲ 2 ಲಕ್ಷ ರೂ.ವರೆಗಿನ ಸುಸ್ತಿ ಬೆಳೆಸಾಲ ಮಾತ್ರ ಮನ್ನಾ ಮಾಡುವುದಾಗಿ ತೀರ್ಮಾನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಮಾತನ್ನು ನಂಬಿ, ಭಾರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಭ್ರಮನಿರಸನವಾಗಿದೆ. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಚಿಕ್ಕಸ್ವಾಮಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸಿಎಂ ಕುಮಾರಸ್ವಾಮಿ ಅವರೇ ನೇರ ಹೊಣೆಗಾರರು ಎಂದು ಸಂಘ ಆರೋಪಿಸುತ್ತದೆ. ಅಲ್ಲದೆ, ವಿಜಯಪುರ ಜಿಲ್ಲೆಯ ಸಂಗಣ್ಣ ಸಂಗಬಸಪ್ಪ ಕಪನೂರ ಮತ್ತು ಬಾಗಲಕೋಟೆ ಜಿಲ್ಲೆಯ ರಾಮಪ್ಪ ಅಂಬಿ ಎಂಬ ರೈತರೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಕೂಡಲೇ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರೈತ ಸಂಘ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಜೊತೆಗೆ 2009ರ ಏ.1ರಿಂದ 2017ರ ನ.31ರವರೆಗೆ ಸೀಮಿತಗೊಳಿಸಿರುವುದು ಸರಿಯಲ್ಲ. ಈ ಷರತ್ತನ್ನು ಕೈಬಿಡುವ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸಿ ಮಾತು ಕೊಟ್ಟಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಇಸ್ರೇಲ್ ಬೇಸಾಯ ಪದ್ಧತಿ ಬೇಡ: ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಗೆ ಒತ್ತು ನೀಡಲು ಬಜೆಟ್‍ನಲ್ಲಿ ಘೋಷಿಸಿರುವುದನ್ನು ಸಂಘ ಸ್ವಾಗತಿಸುತ್ತದೆ. ಆದರೆ ಅಗ್ರಿ ಬಿಸಿನೆಸ್ ಲಾಭಿಯಾಗಿರುವ ಇಸ್ರೇಲ್ ಕೃಷಿ ಪದ್ಧತಿಯನ್ನು ಜಾರಿಗೆ ತರುವುದರಿಂದ ರೈತ ಸಮುದಾಯ ಸಂಕಟಕ್ಕೆ ಸಿಲುಕುತ್ತದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಕೃಷಿ ಪದ್ದತಿ ಕೈಬಿಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆ ಮುಚ್ಚಿದರೆ ಹೋರಾಟ: ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿದ್ದಾರೆಂಬ ಕಾರಣಕ್ಕೆ 28 ಸಾವಿರಕ್ಕಿಂತಲೂ ಹೆಚ್ಚಿನ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ತೀರ್ಮಾನವನ್ನು ಕೈ ಬಿಡಬೇಕು. ಈ ತೀರ್ಮಾನದಿಂದ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಲಿದೆ. ಆದುದರಿಂದ ತೀರ್ಮಾನ ಕೈಬಿಡದಿದ್ದಲ್ಲಿ ಸಾಹಿತಿಗಳು, ಬರಹಗಾರರು, ಕನ್ನಡ ಪರ ಚಳವಳಿಗಾರರು ಮತ್ತು ಜನಪರ ಹೋರಾಟಗಾರ ಒಗ್ಗೂಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳು ಉಚಿತ ಪಾಸ್ ನೀಡಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಹಲವು ಯೋಜನೆಗಳನ್ನು ಮುಂದುವರಿಸುತ್ತಿದ್ದು, ಹಿಂದಿನ ಬಜೆಟ್‍ನಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವಂತೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದ್ದು ವಿಜೃಂಭಣೆಯಷ್ಟೇ: ಕೇಂದ್ರ ಸರ್ಕಾರ ವೈಜ್ಞಾನಿಕ ಬೆಲೆ ಜಾಸ್ತಿಗೊಳಿಸಿದೆ ಎಂದು ಹೇಳಾಗುತ್ತಿದೆ. ಆದರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹೊಸದೇನಲ್ಲ. ಸಿಎಪಿಸಿ (ಸೆಂಟ್ರಲ್ ಅಗ್ರಿಕಲ್ಚರ್ ಪ್ರೈಸ್ ಕಮಿಟಿ) ವರ್ಷದಿಂದ ವರ್ಷಕ್ಕೆ ಬೆಳೆಗಳಿಗೆ ಬೆಲೆ ನಿಗದಿ ಮಾಡುವಾಗ ಹೆಚ್ಚಳ ಮಾಡುವುದು ವಾಡಿಕೆ. ಅದರಂತೆ ಬೆಲೆ ನಿಗದಿಯಾಗಿದ್ದು, ಇದನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ವಿಜೃಂಭಿಸಲಾಗುತ್ತಿದೆ ಎಂದರು. ಸಂಘದ ಪದಾಧಿಕಾರಿಗಳಾದ ಪಿ.ಮರಂಕಯ್ಯ, ಹೊಸಕೋಟೆ ಬಸವರಾಜ್, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜೇಂದ್ರ ಗೋಷ್ಠಿಯಲ್ಲಿದ್ದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾದ ಷರತ್ತುಗಳು ಹಾಗೂ ನಡೆವಳಿಕೆಗಳ ಬಗ್ಗೆ ಸಂಘವು ಯಾವ ರೀತಿ ಮುಂದುವರೆಯಬೇಕೆಂಬ ಬಗ್ಗೆ ತೀರ್ಮಾನಿಸಲು ಜು.9ರಂದು ಬೆಂಗಳೂರಿನಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. – ಬಡಗಲಪುರ ನಾಗೇಂದ್ರ

Translate »