ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ
ಮೈಸೂರು

ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ

June 14, 2018

ಮೈಸೂರು: ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಹಕ್ಕು ಖಾತರಿಗೊಳ್ಳಬೇಕೆ? ಅಳತೆಯ ಬಗ್ಗೆ ಸ್ಪಷ್ಟ ದಾಖಲಾತಿ ಬೇಕೇ? ಹಾಗಾದರೆ, ನಗರ ಆಸ್ತಿ ಮಾಲೀಕತ್ವ ಯೋಜನೆಯಡಿ (ಯುಪಿಓಆರ್) ಪ್ರಮಾಣಪತ್ರ ಪಡೆದುಕೊಳ್ಳಬೇಕು. ಮತ್ತೊಂದು ಗಮನಾರ್ಹ ಅಂಶವೆಂದರೆ, ನಗರ ಪ್ರದೇಶದ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ಯುಪಿಓಆರ್ ಪ್ರಾಯೋಗಿಕ ಯೋಜನೆಯಾಗಿ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೈಸೂರು ನಗರದಲ್ಲೂ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದು ಕಡ್ಡಾಯವಾಗಲಿದೆ. ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳಗೊಂಡಂತೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಒಟ್ಟಾರೆ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ನಡೆಸಿದ್ದು, ಇದರಲ್ಲಿ ಸರ್ಕಾರಿ ಭೂಮಿ, ಆಸ್ತಿಗಳೂ ಒಳಗೊಂಡಿವೆ. 1 ಲಕ್ಷದ 56 ಸಾವಿರದ 496 ಆಸ್ತಿಗಳಿಗೆ ಈಗಾಗಲೇ ಡ್ರಾಫ್ಟ್ ಪಿಆರ್ ಕಾರ್ಡ್ (ಆಸ್ತಿ ದಾಖಲೆಯ ಕರಡು ಪತ್ರ) ನೀಡಲಾಗಿದೆ. 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ನೀಡುವಲ್ಲಿಯೂ ಸಫಲತೆ ಕಾಣಲಾಗಿದೆ.

ಆಸ್ತಿಯ ಹಕ್ಕು ಖಾತರಿಗೆ ಹಾಗೂ ಅಳತೆ ನಿಖರತೆಗೆ ನಗರ ಆಸ್ತಿ ಮಾಲೀಕತ್ವ ಯೋಜನೆಯಡಿ (ಯುಪಿಓಆರ್) ಪಡೆಯುವ ಪ್ರಮಾಣಪತ್ರ ಸಹಕಾರಿ. ಇದರೊಂದಿಗೆ ಆಸ್ತಿಗೆ ಸಂಬಂಧಿಸಿದ ಕಂದಾಯ ಸಂಗ್ರಹದಲ್ಲೂ ಸ್ಪಷ್ಟತೆ ಮೂಡಲಿದ್ದು, ಜೊತೆಗೆ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಭಾಗಶಃ ಇಳಿಮುಖವಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.

ಏಷ್ಯಾದಲ್ಲೇ ಪ್ರಥಮ: ಯುಪಿಓಆರ್ ಏಷ್ಯಾದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೊಂಡಿದೆ. ವಿಶೇಷ ಎಂದರೆ ಶಿವಮೊಗ್ಗ ಮತ್ತು ಮಂಗಳೂರು ನಗರಗಳಿಗಿಂತ ಹೆಚ್ಚು ಆಸ್ತಿಗಳನ್ನು ಹೊಂದಿರುವ ಮೈಸೂರು ನಗರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ದಾಪುಗಾಲು ಇರಿಸುತ್ತಿದ್ದೇವೆ. ಇದು ವಿದ್ಯುನ್ಮಾನ ನಗರ ಪ್ರದೇಶದ ಆಸ್ತಿ ನಿರ್ವಹಣಾ ವ್ಯವಸ್ಥೆಯಾಗಿದ್ದು, ಆಸ್ತಿ ಪ್ರಮಾಣಪತ್ರಕ್ಕೆ ನೀಡುವ ಸಂಖ್ಯೆ ಪುನರಾವರ್ತನೆ ಆಗುವುದಿಲ್ಲ. ಹೀಗಾಗಿ ಇದೊಂದು ಯುನಿಕ್ ನಂಬರ್ ಎನ್ನುತ್ತಾರೆ ಮೈಸೂರು ಯುಪಿಓಆರ್ ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ.

ಯುಪಿಓಆರ್ ಯೋಜನೆಯಡಿ ಪ್ರತಿ ಆಸ್ತಿ ದಾಖಲೆಗೆ ಬಯೋಮೆಟ್ರಿಕ್ ವ್ಯವಸ್ಥೆ ದೊರೆಯಲಿದ್ದು, ಮಾಲೀಕರ ಆಧಾರ್ ಸಂಖ್ಯೆಯ ಜೋಡಿಸಲ್ಪಡಲಿದೆ. ಜೊತೆಗೆ ಆಸ್ತಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಉಲ್ಲೇಖಗೊಳ್ಳಲಿದ್ದು, ಆಸ್ತಿ ಹಿನ್ನೆಲೆ ಹಾಗೂ ವಿಸ್ತೀರ್ಣದೊಂದಿಗೆ ದಾಖಲೆ ಸಿದ್ಧಗೊಳ್ಳಲಿದೆ.

ಭೂ ವಿವಾದಗಳು ಇಳಿಮುಖ: ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರು ಯುಪಿಓಆರ್ ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ, ಇದು ಕಂದಾಯ ಇಲಾಖೆಯ ಒಂದು ಪ್ರತಿಷ್ಠಿತ ಯೋಜನೆಯಾಗಿದೆ. ಇದರ ಅನುಷ್ಠಾನದಿಂದ ಬಹುಬಗೆಯಲ್ಲಿ ಪ್ರಯೋಜನಗಳು ಲಭ್ಯವಾಗಲಿವೆ. ಮಾಲೀಕರ ಆಸ್ತಿಗೆ ಭದ್ರತೆ ಕಲ್ಪಿಸುವಲ್ಲಿ ಪರಿಣಾಮಕಾರಿಯಾಗಲಿದ್ದು, ಸರ್ಕಾರಿ ಭೂಮಿಯ ಅತಿಕ್ರಮಣಕ್ಕೆ ಕಡಿವಾಣ ಬೀಳಲಿದೆ. ಬಹುಮುಖ್ಯವಾಗಿ ಭೂ ವಿವಾದಗಳು ಇಳಿಮುಖವಾಗುವ ಮೂಲಕ ಸಿವಿಲ್ ಕೋರ್ಟ್ ಮೇಲಿನ ಒತ್ತಡ ಶೇ.90ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.

ಅತಿಕ್ರಮಿಸಿದ್ದ 300 ಎಕರೆ ವಶ: ಯುಪಿಓಆರ್‍ನಿಂದ ಅತಿಕ್ರಮಣಗೊಂಡ ಸರ್ಕಾರಿ ಭೂಮಿಯನ್ನು ಸ್ಪಷ್ಟ ಮತ್ತು ನಿಖರವಾಗಿ ಗುರುತಿಸಲು ಸಾಧ್ಯವಿದೆ. 2011ರಲ್ಲಿ ಯೋಜನೆ ಮೈಸೂರಿನಲ್ಲಿ ಆರಂಭಗೊಂಡಿತು. ಅಂದಿನಿಂದ ಇಲ್ಲಿಯವರೆಗೆ ಅತಿಕ್ರಮಣಗೊಂಡಿದ್ದ 300 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ವಶಪಡಿಸಿಕೊಳ್ಳಲಾಗಿದೆ. ಯುಪಿಓಆರ್ ಪ್ರಮಾಣಪತ್ರ ಪಡೆಯಲು ದಾಖಲೆ ಸಲ್ಲಿಸಿದ ಬಳಿಕ ಆಸ್ತಿಯ ವಿಚಾರಣಾ ಪ್ರಕ್ರಿಯೆ ಆರಂಭವಾಗಲಿದೆ. ಆ ಬಳಿಕ ಕರಡು ನಗರ ಆಸ್ತಿ ಮಾಲೀಕತ್ವದ ದಾಖಲೆಯ ಸಿದ್ಧಗೊಳ್ಳಲಿದೆ. 9 ಪುಟಗಳ ಕರಡು ದಾಖಲೆ ಪಡೆದ ಬಳಿಕ ಆಕ್ಷೇಪಣೆ ಸಲ್ಲಿಸಲು 33 ದಿನಗಳ ಕಾಲಾವಕಾಶ ದೊರೆಯಲಿದೆ. ಯಾವುದೇ ಆಕ್ಷೇಪಣೆ ಇಲ್ಲವಾದಲ್ಲಿ 6 ಪುಟಗಳ ಅಂತಿಮ ಪ್ರಮಾಣಪತ್ರ ಸಿದ್ಧಗೊಳ್ಳಲಿದೆ. ಇದನ್ನು ಪಡೆಯಲು ಸರ್ಕಾರ ನಿಗದಿಗೊಳಿಸಿರುವ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. 30×40 ವಿಸ್ತೀರ್ಣದ ಆಸ್ತಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದು ಪ್ರಸಾದ್ ವಿ.ಕುಲಕರ್ಣಿ ವಿವರಿಸಿದರು.

ಮೈಸೂರಿನಲ್ಲಿ ನಗರೀಕೃತ ಪ್ರದೇಶಗಳಾಗಿ ಅಭಿವೃದ್ಧಿಗೊಂಡಿರುವ ಬೋಗಾದಿ, ಕುರುಬಾರಹಳ್ಳಿ, ಪಡುವಾರಹಳ್ಳಿ, ಮೇಟಗಳ್ಳಿ, ಕ್ಯಾತಮಾರನಹಳ್ಳಿ, ಕುಕ್ಕರಹಳ್ಳಿ, ಶ್ರೀರಾಂಪುರ, ಲಿಂಗಾಂಬುದಿ, ಮಂಡಕಳ್ಳಿ, ಕೆಸರೆ, ಹೆಬ್ಬಾಳ್, ದಟ್ಟಗಳ್ಳಿ, ಲಲಿತಾದ್ರಿಪುರ ಸೇರಿದಂತೆ ಒಟ್ಟಾರೆ 42 ಹಳ್ಳಿಗಳನ್ನು ಯುಪಿಓಆರ್ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು.

ಪಿಪಿಪಿ ಅಡಿ ಭೂ ದತ್ತಾಂಶ ನಿರ್ವಹಣೆಯ ಖಾಸಗಿ ಸಂಸ್ಥೆಯಾದ `ಸೆಕಾನ್’ ಸಹಭಾಗಿತ್ವದಲ್ಲಿ ಮೈಸೂರಿನ ಯುಪಿಓಆರ್ ಅನುಷ್ಠಾನಗೊಳ್ಳುತ್ತಿದೆ. ನಗರದ ಆಸ್ತಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ, ಗ್ರಾಮ ಠಾಣಾ, ಆಶ್ರಯ ಬಡಾವಣೆ ಸೇರಿದಂತೆ ಹಲವು ರೀತಿಯಲ್ಲಿ ವಿಂಗಡಿಸಲಾಗಿದ್ದು, ಆಯಾಯ ವಿಂಗಡಣೆಗಳಿಗೆ ನಿಗದಿಗೊಳಿಸಿದ ದಾಖಲೆಗಳನ್ನು ಸಲ್ಲಿಸಿ ಯುಪಿಓಆರ್‍ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯುಪಿಓಆರ್ ಪಡೆಯುವ ವಿಧಾನ ಸೇರಿದಂತೆ ಅಂತಿಮ ಪ್ರಮಾಣ ಪತ್ರದ ವಿವರಗಳಿಗೆ  http://www.upor.karnataka.gov.in ಟಿ ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಜೊತೆಗೆ ಯುಪಿಓಆರ್ ನಗರ ಮಾಪನ ಕಚೇರಿ, ಸರ್ಕಾರಿ ಅತಿಥಿಗೃಹದ ಹತ್ತಿರ, ನಜರ್‍ಬಾದ್, ಮೈಸೂರು-570010 ಇಲ್ಲಿಗೆ ಭೇಟಿ ನೀಡಬಹುದು (ದೂ.ಸಂ. 0821-2434540).

ಈ ಹಿಂದೆ ಆಸ್ತಿ ಸರ್ವೇಗಾಗಿ ಇದ್ದ ಸಿಟಿ ಸರ್ವೇ ಘಟಕಕ್ಕಿಂತ ಉನ್ನತ ತಂತ್ರಜ್ಞಾನದ ವಿಧಾನಗಳನ್ನು ಯುಪಿಓಆರ್‍ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಯೋಜನೆ ಪ್ರತಿ ಆಸ್ತಿಗೂ ನಿಖರವಾದ ಭೌಗೋಳಿಕ ಮಾಹಿತಿ ಹಾಗೂ ಹಕ್ಕು ದಾಖಲೆ ಮಾಹಿತಿಯನ್ನು ಒದಗಿಸಲಿದೆ. ಮಾಲೀಕರ ಮಾಹಿತಿ, ಆಸ್ತಿಯ ವಿಸ್ತೀರ್ಣದ ಅಳತೆ, ದಿಕ್ಕುಗಳು, ನಕ್ಷೆ ಸೇರಿದಂತೆ ನಿಖರ ದತ್ತಾಂಶ ದಾಖಲಾಗಲಿದೆ. ಮೈಸೂರು ನಗರದಲ್ಲಿ ಆಸ್ತಿಯ ಎಲ್ಲಾ ವ್ಯವಹಾರಗಳಿಗೆ ಯುಪಿಓಆರ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದನ್ನು ತಾಂತ್ರಿಕವಾಗಿ ಅಳವಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸಾದ್ ವಿ.ಕುಲಕರ್ಣಿ , ಮೈಸೂರು ಯುಪಿಓಆರ್ ಯೋಜನಾಧಿಕಾರಿಗಳು.

Translate »