ವಿವಿಧ ಚೆಕ್‍ಪೋಸ್ಟ್‍ಗಳಿಗೆ ಮಧ್ಯರಾತ್ರಿ ಡಿಸಿ ದಿಢೀರ್ ಭೇಟಿ, ಪರಿಶೀಲನೆ
ಚಾಮರಾಜನಗರ

ವಿವಿಧ ಚೆಕ್‍ಪೋಸ್ಟ್‍ಗಳಿಗೆ ಮಧ್ಯರಾತ್ರಿ ಡಿಸಿ ದಿಢೀರ್ ಭೇಟಿ, ಪರಿಶೀಲನೆ

April 18, 2020

ಚಾಮರಾಜನಗರ, ಏ.17- ಕೋವಿಡ್-19 ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಗುರುವಾರ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಅವರೊಂದಿಗೆ ಮಧ್ಯ ರಾತ್ರಿ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‍ಪೋಸ್ಟ್, ಕೊಳ್ಳೇಗಾಲ ತಾಲೂಕಿನ ಟಗರಪುರ ಹಾಗೂ ಸತ್ತೇಗಾಲ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ನಿರ್ವಹಿಸಲಾಗುತ್ತಿರುವ ಕಾರ್ಯ ವೀಕ್ಷಿಸಿದರು. ಅಂತರ ಜಿಲ್ಲೆ ಸಂಪರ್ಕಿಸುವ ಪ್ರಮುಖ ಚೆಕ್ ಪೋಸ್ಟ್‍ಗಳಿಗೆ ಯಾವ ಸುಳಿವು ನೀಡದೇ ಅನಿರೀಕ್ಷಿತವಾಗಿ ಮಧ್ಯರಾತ್ರಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಭೇಟಿ ನೀಡಿದ ವೇಳೆ ಚೆಕ್‍ಪೋಸ್ಟ್‍ಗಳಿಗೆ ನಿಯೋಜಿತರಾಗಿದ್ದ ರಾತ್ರಿ ಪಾಳೀಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಅತ್ಯಂತ ಶಿಸ್ತುಬದ್ಧವಾಗಿ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂತು.

ಪ್ರತಿ ಚೆಕ್‍ಪೋಸ್ಟ್‍ನಲ್ಲಿಯೂ ಯಾವ ವಾಹನಗಳು ಸಂಚರಿಸಿವೆ? ಯಾವ ಬಗೆಯಲ್ಲಿ ನಿಗಾ ವಹಿಸಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಯವರಿಗೆ ಚೆಕ್‍ಪೋಸ್ಟ್ ಅಧಿಕಾರಿಗಳು ಮಾಹಿತಿ ನೀಡಿದರು.

ರಾಮನಗರ, ಕನಕಪುರ ಇತರೆ ಪ್ರಮುಖ ಪಟ್ಟಣಗಳಿಂದ ವಿಶೇಷವಾಗಿ ಸತ್ತೇಗಾಲ ಚೆಕ್‍ಪೋಸ್ಟ್ ಮೂಲಕ ರೇಷ್ಮೆಗೂಡಿನ ವಹಿವಾಟಿಗೆ ಸಂಬಂಧಿಸಿದ ಉತ್ಪನ್ನಗಳು ವಾಹನಗಳು ಹಾದು ಹೋಗುವುದರಿಂದ ವಾಹನಗಳ ತಪಾಸಣೆ, ಸ್ಯಾನಿಟೈಜೇಷನ್ ಕೆಲಸ ಹೇಗೆ ನಿರ್ವಹಿಸಲಾಗುತ್ತಿದೆ? ಎಂಬ ಬಗ್ಗೆ ಜಿಲ್ಲಾಧಿಕಾರಿ ವ್ಯಾಪಕ ವಾಗಿ ಪರಿಶೀಲಿಸಿದರು. ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿಯೂ ಕಾರ್ಯ ನಿರ್ವಹಣೆ ಕುರಿತು ಪರಿಶೀಲಿಸಿದ ವೇಳೆ ವೈದ್ಯಕೀಯ ಕಾರಣಗಳಿ ಗಾಗಿ ಅನುಮತಿ ಪಡೆದಿರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಬೇಕು. ಅಗತ್ಯ ವಸ್ತುಗಳ ಸಾಗಣೆ ವಾಹನಗಳನ್ನು ಪರಿಶೀಲಿಸಿ ಸಂಚರಿಸಲು ಅನುಮತಿಸಬೇಕು. ಉಳಿದಂತೆ ಯಾವ ವಾಹನಗಳ ಸಂಚಾರಕ್ಕೂ ಆಸ್ಪದ ನೀಡದಂತೆ ಸೂಚಿಸಿದರು.

ಚೆಕ್‍ಪೋಸ್ಟ್‍ಗಳಲ್ಲಿ ನಿಮಗೆ ತೊಂದರೆ ಇದೆಯೇ? ಊಟ, ಉಪಹಾರ, ಕುಡಿಯುವ ನೀರು ಸೌಲಭ್ಯ ಇದೆಯೇ? ಎಂಬ ಬಗ್ಗೆ ಕೇಳಿ ತಿಳಿದುಕೊಂಡರು. ಯಾವುದೇ ಸೌಲಭ್ಯಕ್ಕೆ ತೊಂದರೆ ಇದ್ದಲ್ಲಿ ಕೂಡಲೇ ನೋಡೆಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ವೈಯಕ್ತಿಕ ಆರೋಗ್ಯ, ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವ ಹಿಸುವಂತೆ ಸಲಹೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳು ಅಧಿಕಾರಿ, ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು. ಜನರ ಆರೋಗ್ಯ ಕಾಳಜಿಯಿಂದ ಹಗಲು ರಾತ್ರಿ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟೆಚ್ಚರದಿಂದ ಕಾಯುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಸೇವೆ ನಿಜಕ್ಕೂ ಮೆಚ್ಚುಗೆ ಹಾಗೂ ಅಭಿನಂದನಾರ್ಹ. ಇಡೀ ಜಿಲ್ಲೆಯ ಆರೋಗ್ಯ ಸುರಕ್ಷತೆ ರಕ್ಷಣೆಗಾಗಿ ತೊಡಗಿಕೊಂಡಿರುವ ಈ ಎಲ್ಲರ ಸೇವೆ ಮಾದರಿ ಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

Translate »