ಮನೆ ಖಾತೆ ವರ್ಗಾವಣೆಗೆ ಲಂಚ ಸ್ವೀಕಾರ
ಮೈಸೂರು

ಮನೆ ಖಾತೆ ವರ್ಗಾವಣೆಗೆ ಲಂಚ ಸ್ವೀಕಾರ

September 20, 2018

ಎಸಿಬಿ ಬಲೆಗೆ ಬಿದ್ದ ಪಾಲಿಕೆ ರೆವಿನ್ಯೂ ಇನ್ಸ್‍ಪೆಕ್ಟರ್
ಮೈಸೂರು: ಮನೆ ಖಾತೆ ವರ್ಗಾ ವಣೆ ಮಾಡಲು 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ರೆವಿನ್ಯೂ ಇನ್ಸ್‍ಪೆಕ್ಟರ್ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಾಲಿಕೆ ವಲಯ ಕಚೇರಿ-8(ಉದಯಗಿರಿ)ರ ರೆವಿನ್ಯೂ ಇನ್ಸ್‍ಪೆಕ್ಟರ್(ಆರ್‍ಐ) ಪಿ.ಕುಮಾರ ಸ್ವಾಮಿ ಎಸಿಬಿ ಬಲೆಗೆ ಬಿದ್ದವರು. ಉದಯಗಿರಿ ನಿವಾಸಿ ಲಕ್ಷ್ಮಿಬಾಯಿ ಎಂಬುವರು ಮನೆ ಖಾತೆ ವರ್ಗಾವಣೆಗಾಗಿ ವಲಯ ಕಚೇರಿ 8ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್‍ಐ ಕುಮಾರಸ್ವಾಮಿ ಖಾತೆ ವರ್ಗಾವಣೆ ಮಾಡಿಕೊಡಲು ಇಲ್ಲದ ಸಬೂಬು ಹೇಳಿ ಸತಾಯಿಸುತ್ತಿದ್ದರು.

ಇದರಿಂದ ಮನನೊಂದ ಲಕ್ಷ್ಮಿಬಾಯಿ, ಪರಿಚಯಸ್ಥರಾದ ಪವಿತ್ರಕುಮಾರ್ ಅವರ ಬಳಿ ತಮ್ಮ ಮನೆ ಖಾತೆ ವರ್ಗಾಯಿಸಲು ಸಹಾಯ ಮಾಡುವಂತೆ ಕೋರಿದ್ದರು. ಇವರ ಸಹಾಯಕ್ಕೆ ಧಾವಿಸಿದ ಪವಿತ್ರಕುಮಾರ್, ಪಿ.ಕುಮಾರಸ್ವಾಮಿ ಬಳಿ ಈ ಮನೆ ಖಾತೆ ವರ್ಗಾವಣೆ ಮಾಡಿಕೊಡಲು ಮನವಿ ಮಾಡಿದ್ದರು. ಈ ವೇಳೆ ಕುಮಾರಸ್ವಾಮಿ 2,500 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಪವಿತ್ರಕುಮಾರ್ ಅವರು ಎಸಿಬಿಗೆ ದೂರು ನೀಡಿದ್ದರು. ಇಂದು ಪವಿತ್ರಕುಮಾರ್ ಅವರಿಂದ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಡಿವೈಎಸ್ಪಿ ಉಮೇಶ್ ಜಿ.ಸೇಠ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಎಸಿಬಿ ಬಲೆಗೆ ಸಿಕ್ಕಿಬಿದ್ದರು.

Translate »