ಮನ್ನಾ ಆಗದ ರೈತರ ಸಾಲ, ಬಿಡದ ಬ್ಯಾಂಕ್‍ಗಳು
ಮಂಡ್ಯ

ಮನ್ನಾ ಆಗದ ರೈತರ ಸಾಲ, ಬಿಡದ ಬ್ಯಾಂಕ್‍ಗಳು

September 20, 2018

ಮಂಡ್ಯ: ರಾಜ್ಯದ ಸಮ್ಮಿಶ್ರ ಸರ್ಕಾರ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿತು. ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿದ್ದ ಸಾಲ ಮನ್ನಾ ಮಾಡೇಬಿಟ್ಟಿತು ಎಂಬ ಆಸೆ ಯನ್ನು ರೈತರಲ್ಲಿ ಹುಟ್ಟು ಹಾಕಿತು. ಆದರೆ ಈಗ ಆ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಸಾಲ ಮನ್ನಾ ಘೋಷಣೆಯಾಯಿತಾದರೂ, ಬ್ಯಾಂಕ್‍ಗಳಿಗೆ ಯಾವುದೇ ಸೂಚನಾ ಪತ್ರ ತಲುಪಿಲ್ಲ. ಹಾಗಾಗಿ, ಆರ್‌ಬಿಐನಿಯ ಮಾವಳಿ ಪ್ರಕಾರ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಇದರಿಂದ ರೈತರು ಗೊಂದಲದಲ್ಲಿದ್ದಾರೆ. ರೈತರು ಮಾತ್ರವಲ್ಲ ಬ್ಯಾಂಕ್‍ಗಳೂ ಸಹ ಗೊಂದಲದಲ್ಲಿವೆ. ರೈತರ ಸಾಲ ಮನ್ನಾ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣವೇ ಸಿಗದೆ ಒದ್ದಾಡುತ್ತಿವೆ. ಯಾವ ಮಾನದಂಡ ಮತ್ತು ಮಾರ್ಗಸೂಚಿ ಅನುಸರಿಸಿ ರೈತರ ಸಾಲ ಮನ್ನಾ ಮಾಡಬೇಕು ಎನ್ನುವ ಗೊಂದಲ ದಲ್ಲೇ ಬ್ಯಾಂಕ್ ಅಧಿಕಾರಿಗಳು ಇದ್ದಾರೆ.

ಮಂಡ್ಯ ಡಿಸಿಸಿ ಬ್ಯಾಂಕ್ ಸೇರಿದಂತೆ ಜಿಲ್ಲೆ ಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ ಗಳಿಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರೈತರ ಸಾಲ ಮನ್ನಾ ವಿಷಯದಲ್ಲಿ ಕೈಗೊಂಡಿ ರುವ ಅಸ್ಪಷ್ಟ ನಿರ್ಧಾರಗಳು ದೊಡ್ಡ ಸಮಸ್ಯೆ ಯಾಗಿ ಕಾಡುತ್ತಿವೆ. ಈ ಹಿಂದೆ ಸಿದ್ದ ರಾಮಯ್ಯ ನೇತೃತ್ವದ ಸರ್ಕಾರ ಸಹಕಾರಿ ವಲಯದ ರೈತರ 50 ಸಾವಿರ ರೂ. ವರೆ ಗಿನ ಸಾಲ ಮಾಡಿತ್ತು. ಆ ಹಣವೇ ಇನ್ನೂ ಡಿಸಿಸಿ ಬ್ಯಾಂಕ್‍ಗೆ ಪಾವತಿ ಆಗಿಲ್ಲ್ಲ. ಆದರೆ ಇದರ ನಡುವೆಯೇ ಮತ್ತೊಂದು ಸಾಲ ಮನ್ನಾ ನಿರ್ಧಾರ ಹಾಗೂ ಅನುಷ್ಠಾನದ ಕ್ರಮಗಳು ಬ್ಯಾಂಕ್‍ಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ರೈತರ ಸಾಲ ಮನ್ನಾ ವಿಷಯವಾಗಿ ಬ್ಯಾಂಕ್‍ಗಳೊಂದಿಗೆ ನಡೆಸುತ್ತಿರುವ ಹಗ್ಗ – ಜಗ್ಗಾಟ ನಿತ್ಯವೂ ಮುಂದುವರೆದಿದೆ.

ರೈತರ ಸಾಲ ಮನ್ನಾ ವಿಚಾರದಲ್ಲಿ ಹೆಚ್ ಡಿಕೆ ನೇತೃತ್ವದ ಸರ್ಕಾರದ ನಿಲುವಿನಲ್ಲಿ ಸ್ಪಷ್ಟತೆ, ನಿರ್ದಿಷ್ಟ ಮಾರ್ಗಸೂಚಿಗಳೇ ಇಲ್ಲ. ರೈತರ ಸಾಲ ಸರ್ಕಾರದ ಹೇಳಿದ ರೀತಿ ಯಲ್ಲಿ ಮನ್ನಾ ಮಾಡಲು ಸಾಧ್ಯವಿಲ್ಲ. ರಾಷ್ಟ್ರೀ ಕೃತ ಬ್ಯಾಂಕ್‍ಗಳು ನೀತಿ ನಿಯಮಗಳು ಸುತಾ ರಾಂ ಒಪ್ಪುವುದಿಲ್ಲ. ಹೀಗಾಗಿ ರೈತರ ಸಾಲ ಮನ್ನಾ ಸಂಗತಿ ಗೊಂದಲದ ಗೂಡಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 2018ರ ಜು. 10 ರವರೆಗೆ ರೈತರು ಪಡೆದಿರುವ 1 ಲಕ್ಷ ರೂ. ಚಾಲ್ತಿ ಸಾಲವನ್ನು 4 ಹಂತ ಗಳಲ್ಲಿ ನಾಲ್ಕು ವರ್ಷ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ. ಕುಮಾರ ಸ್ವಾಮಿ ಜುಲೈ 12ರಂದು ಘೋಷಣೆ ಮಾಡಿ ದರು. ಅದಕ್ಕೂ ಮುನ್ನ 2009ರ ಏಪ್ರಿಲ್ 1ರಿಂದ 2017ರ ಡಿಸೆಂಬರ್ 31 ರವರೆಗೆ ರೈತರು ಪಡೆದಿರುವ 2 ಲಕ್ಷ ರೂ.ವರೆಗಿನ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತ ದಲ್ಲಿ ಮನ್ನಾ ಮಾಡುವುದಾಗಿಯೂ ಹಾಗೂ ರೈತರು ಹೊಸ ಸಾಲ ಪಡೆ ಯಲು ಅನುಕೂಲವಾಗುವಂತೆ ಸುಸ್ತಿ ಸಾಲ ಮನ್ನಾ ಮಾಡಿ ಋಣಮುಕ್ತ ಪತ್ರ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ, ಇಲ್ಲಿಯವರೆಗೆ ಸಾಲ ಮನ್ನಾ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿ ಸೂತ್ರಗಳನ್ನು ಸಿದ್ಧ ಪಡಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವೇ ಆಗಿಲ್ಲ.

ಸಾಲವನ್ನು ನಾಲ್ಕು ವರ್ಷ ನಾಲ್ಕು ಹಂತಗಳಲ್ಲಿ ಪಡೆಯುವುದಕ್ಕೆ ಹಾಗೂ ಬಡ್ಡಿಯನ್ನು ಮನ್ನಾ ಮಾಡುವುದಕ್ಕೆ ಬ್ಯಾಂಕ್ ಗಳು ಒಪ್ಪುತ್ತಿಲ್ಲ. ಪರಿಣಾಮ ರೈತರ ಸಾಲ ಮನ್ನಾ ಗೊಂದಲದಲ್ಲೇ ಉಳಿಯು ವಂತಾ ಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ 1 ಲಕ್ಷ ರೂ. ಸಾಲವನ್ನು ಪ್ರತಿ ವರ್ಷ 25 ಸಾವಿರ ರೂ.ನಂತೆ ನಾಲ್ಕು ಕಂತು ಗಳಲ್ಲಿ ನಾಲ್ಕು ವರ್ಷ ಪಾವತಿಸುತ್ತಾರೆ. ಈ ಸಾಲದ ಹಣಕ್ಕೆ ಬ್ಯಾಂಕ್‍ಗಳು ಯಾವುದೇ ಬಡ್ಡಿ ವಿಧಿಸಬಾರದು ಎಂಬುದು ಸರ್ಕಾರದ ನಿಲುವಾಗಿದೆ. ಸರ್ಕಾರದ ಈ ನಿರ್ಧಾರ ವನ್ನು ಬ್ಯಾಂಕ್‍ಗಳು ಒಪ್ಪುತ್ತಿಲ್ಲ. ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಕ್ಕೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಹಿಂದೇಟು ಹಾಕು ತ್ತಿವೆ. ವರ್ಷಕ್ಕೆ ರೈತರು 25 ಸಾವಿರ ರೂ. ಹಣ ಕಟ್ಟಿದರೂ ಅದು ಬಡ್ಡಿಗೆ ವಜಾ ಮಾಡಿ ಕೊಳ್ಳಲೇಬೇಕು ಎಂಬುದು ಬ್ಯಾಂಕ್ ಅಧಿಕಾರಿಗಳು ಹೇಳುವ ಮಾತು.

ಅಲ್ಲದೆ, ಬ್ಯಾಂಕ್‍ಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಯಾವುದೇ ಅಧಿಕಾರವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳ ನಿರ್ಧಾರವೇ ಅಂತಿಮ ಎಂದು ಹೇಳಿವೆ.

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಆದೇಶ ಅಥವಾ ನಿರ್ದೇಶನ ನಮಗೆ ಈವರೆಗೆ ಬಂದಿಲ್ಲ. ರೈತರಿಗೆ ಯಾವ ಮಾದರಿಯ ಸಾಲ ಮನ್ನಾ ಮಾಡಬೇಕು. ಎಷ್ಟು ಲಕ್ಷದವರೆಗೆ ಮನ್ನಾ ಮಾಡಬೇಕು. ಕೃಷಿ, ಒಡವೆ, ಹೈನುಗಾರಿಕೆ ಇತರೆ ಸಾಲ ಮನ್ನಾ ಮಾಡಬೇಕೆಂಬ ಮಾರ್ಗಸೂಚಿಯೂ ಬಂದಿಲ್ಲ. ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಘೋಷಣೆ ಬಳಿಕ ಸಾಲ ವಸೂಲಾತಿ ವ್ಯವ ಹಾರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ 680 ಕೋಟಿ ಯಷ್ಟು ಸುಸ್ತಿ ಸಾಲವೇ ಇದೆ, ಅಂದಾಜು 3000 ಕೋಟಿಯಷ್ಟು ರೈತರ ವಿವಿಧ ವರ್ಗಗಳ ಸಾಲವಿದೆ, ಸಾಲಮನ್ನಾ ಮಾಹಿತಿ ಕೇಳಿಕೊಂಡು ಬರುವ ರೈತರಿಗೂ ಉತ್ತರ ನೀಡಲಾಗದ ಸಂದಿಗ್ದ ಸ್ಥಿತಿ ನಮ್ಮದು. – ಪ್ರಭುದೇವ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು. ಮಂಡ್ಯ

3 ವರ್ಷಗಳ ಹಿಂದೆ ಹೊಳಲು ಗ್ರಾಮದ ಎಸ್‍ಬಿಐ ಶಾಖೆಯಲ್ಲಿ ಕೊಳವೆ ಬಾವಿ ಕೊರೆ ಸಲು ಮತ್ತು ಕೃಷಿಗಾಗಿ ಒಡವೆ ಹಾಗೂ ಆರ್‍ಟಿಸಿ ಇಟ್ಟು 3 ಲಕ್ಷ ಸಾಲ ಪಡೆದಿದ್ದೆ. ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ಮಳೆಯೂ ಇಲ್ಲದೆ, ಕೆಆರ್ ಎಸ್‍ನಲ್ಲಿ ನೀರೂ ಇಲ್ಲದೆ ಕಬ್ಬು ಸೇರಿದಂತೆ ಯಾವುದೇ ಬೆಳೆಯನ್ನೂ ಬೆಳಯೋಕಾಗಲಿಲ್ಲ. ಸಾಲವನ್ನೂ ಕಟ್ಟೋಕೆ ಆಗಲಿಲ್ಲ. ಪ್ರಸ್ತುತ ಕುಮಾರ ಸ್ವಾಮಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲ ಮನ್ನಾ ಮಾಡುವ ಭರವಸೆ ನೀಡಿದೆ ಆದರೆ, ಅದು ಇನ್ನೂ ಜಾರಿಯಾಗಿಲ್ಲ. ಇತ್ತ ಬ್ಯಾಂಕ್‍ನವರು ನಮ್ಮ ಒಡವೆಗಳನ್ನೆಲ್ಲಾ ಹರಾಜು ಹಾಕುವುದನ್ನು ನಿಲ್ಲಿಸುತ್ತಿಲ್ಲ. ಇದರಿಂದ ದಿಕ್ಕೆ ತೋಚದಂತೆ ಆಗಿದೆ. – ಬಳ್ಳಾರಿಗೌಡ, ಹೊಳಲು ರೈತ

ಹಳೇ ಸಾಲದ ಹಣ ಎಷ್ಟಿದೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2017ರಲ್ಲಿ ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಯೋಜನೆಯಿಂದ ಜಿಲ್ಲೆಯ 1,15,272 ರೈತರು ಪ್ರಯೋಜನ ಪಡೆದುಕೊಂಡಿದ್ದರು. ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ ಒಟ್ಟು 462 ಕೋಟಿ ರೂ. ಸಾಲ ಮನ್ನಾ ಆಗಿತ್ತು. ಈ ಪೈಕಿ ಸರ್ಕಾರ ಈವರೆಗೆ 409 ಕೋಟಿ ಹಣವನ್ನು ಮಾತ್ರ ಬ್ಯಾಂಕ್‍ಗಳ ಖಾತೆಗೆ ತುಂಬಿದೆ. ಇನ್ನೂ 52.79 ಕೋಟಿ ರೂ. ಹಣ ಪಾವತಿಸಬೇಕಿದೆ.

ಒಟ್ಟು ಸಾಲದ ಹಣದಲ್ಲಿ 424 ಕೋಟಿ ಅಸಲಿಗೆ 37.68 ಕೋಟಿ ಬಡ್ಡಿ ಸೇರಿ 462 ಕೋಟಿ ರೂ. ಹಣ ಪಾವತಿಸಬೇಕಿತ್ತು. ಆದರೆ, ಸರ್ಕಾರ 406 ಕೋಟಿ ಅಸಲು ಹಣಕ್ಕೆ 2.89 ಕೋಟಿ ರೂ. ಬಡ್ಡಿ ಸೇರಿ 409 ಕೋಟಿ ರೂ. ಮಾತ್ರ ಪಾವತಿಸಿದೆ. ಇನ್ನೂ 52.79 ಕೋಟಿ ರೂ. ಹಣವನ್ನು ಬ್ಯಾಂಕ್‍ಗಳ ಖಾತೆಗೆ ತುಂಬಬೇಕಿದೆ.

ಬ್ಯಾಂಕ್ ಸಾಲ ಎಷ್ಟು ?

ಕಳೆದ ನಾಲ್ಕು ವರ್ಷಗಳಿಂದಲೂ ಅನೇಕ ರೈತರು ಸಾಲವನ್ನು ಮರು ಪಾವತಿ ಮಾಡಿಲ್ಲ. ಜಿಲ್ಲೆಯಲ್ಲಿ ಡಿಸಿಸಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸುಮಾರು 1.75 ಲಕ್ಷಕ್ಕೂ ಹೆಚ್ಚು ರೈತರು ಸಾಲಪಡೆದಿದ್ದಾರೆ. ಅಸಲು ಬಡ್ಡಿ ಸೇರಿ ಅಂದಾಜು 3000 ಕೋಟಿಯಷ್ಟು ಹಣ ರೈತರಿಂದ ಬ್ಯಾಂಕಿಗೆ ಬರಬೇಕಿದೆ.

ಒಂದು ವೇಳೆ ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆಯ ಪತ್ರವನ್ನು ಬ್ಯಾಂಕ್ ಗಳಿಗೆ ರವಾನಿಸಿದರೆ, ಎಷ್ಟೋ ರೈತರ ಜೀವ ರಕ್ಷಿಸಬಹುದಾಗಿದೆ. ಆದರೆ ಸರ್ಕಾರ ಇದು ವರೆಗೂ ಯಾವುದೇ ಪತ್ರ ವ್ಯವಹಾರವನ್ನು ಬ್ಯಾಂಕ್‍ಗಳ ಜೊತೆ ಮಾಡೇ ಇಲ್ಲ. ಇದು ಬ್ಯಾಂಕ್ ಅಧಿಕಾರಿಗಳಲ್ಲೂ ಗೊಂದಲ ಮೂಡಿಸಿದೆ. ಒಂದು ವೇಳೆ ಸರ್ಕಾರ ಪತ್ರ ವ್ಯವಹಾರ ಮಾಡಿದರೆ ರೈತರ ಮಾನಸಿಕ ರೋಗಕ್ಕೆ ಔಷಧಿ ನೀಡಿದಂತಾಗುತ್ತದೆ. ಇದು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ.

ರೈತರ ಒಡವೆಗಳ ಹರಾಜು

ರೈತರ ಸಾಲಮನ್ನಾ ಘೋಷಣೆಯ ನಡುವೆಯೂ ಸರ್ಕಾರದ ಮಾತಿಗೆ ಕಿಮ್ಮತ್ತು ನೀಡದ ಬ್ಯಾಂಕ್‍ಗಳ ಅಧಿಕಾರಿಗಳೀಗ ರೈತರು ಕೃಷಿ ಸಾಲಕ್ಕಾಗಿ ಅಡವಿಟ್ಟಿದ್ದ ಒಡವೆ ಗಳನ್ನು, ಸಾಲದ ರೂಪದಲ್ಲಿ ಪಡೆಯಲಾಗಿದ್ದ ವಾಹನಗಳನ್ನೆಲ್ಲಾ ಹರಾಜು ಮಾಡುತ್ತಿದ್ದಾರೆ.

ಹರಾಜಿನಿಂದ ಬಂದ ಹಣವನ್ನು ರೈತರ ಸಾಲದ ಹಣಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಎಸ್‍ಬಿಐ, ಎಸ್‍ಬಿಎಂ, ವಿಜಯಾ ಬ್ಯಾಂಕ್ ಮತ್ತು ಸಹ ಕಾರಿ ಬ್ಯಾಂಕ್‍ಗಳು ರೈತರ ಒಡವೆ, ವಾಹನಗಳನ್ನು ಹರಾಜು ಮಾಡಲು ಹೊರಟ್ಟಿದ್ದನ್ನು ತಾಲೂಕು ಶಾಖೆಗಳ ಮಟ್ಟದಲ್ಲಿ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಡೆಹಿಡಿ ಯಲಾಗಿತ್ತು. ಆದರೆ, ಈಗ ತಾಲೂಕು ಕೇಂದ್ರಗಳನ್ನು ಬಿಟ್ಟು ಜಿಲ್ಲಾ ಕೇಂದ್ರದ ಶಾಖೆ ಗಳ ಮೂಲಕ ರೈತರ ಒಡವೆಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಿವೆ. ಸಾಲ ಮರುಪಾವತಿ ಮಾಡಿ ಇಲ್ಲದಿದ್ದಲ್ಲಿ ಹರಾಜು ಹಾಕುತ್ತೇವೆ ಎಂದು ನೊಟೀಸ್‍ಗಳನ್ನೂ ದಿನಪತ್ರಿಕೆಗಳ ಮೂಲಕ ಪ್ರಕಟಿಸಲಾಗುತ್ತಿದೆ.

ಬ್ಯಾಂಕ್‍ಗಳಿಂದ ನಿಲ್ಲದ ನೋಟಿಸ್ ಜಾರಿ

ಬ್ಯಾಂಕ್‍ಗಳು ಸರ್ಕಾರದ ಸಾಲಮನ್ನಾ ಘೋಷಣೆಯಿಂದಾಗಿ ರೈತರು ಬೆಳೆ ಸಾಲ ಮರು ಪಾವತಿ ಮಾಡುವುದಕ್ಕೆ ಹಿಂದೇಟು ಹಾಕು ತ್ತಿವೆ. ಸಾಲ ಮರು ಪಾವತಿಸುವಂತೆ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುತ್ತಲೇ ಇವೆ. ಬ್ಯಾಂಕ್‍ಗಳ ಕ್ರಮದ ವಿರುದ್ಧ ರೈತರು ಆಕ್ರೋಶಗೊಂಡು ನೋಟಿಸ್ ಸುಟ್ಟು ಆಕ್ರೋಶ ವ್ಯಕ್ತಪಡಿ ಸುವುದು, ಸಾಲ ಮರು ಪಾವತಿಯಿಂದ ದೂರವೇ ಉಳಿದಿರು ವುದು ಬ್ಯಾಂಕ್‍ಗಳ ಆರ್ಥಿಕ ವಹಿವಾಟಿನ ಮೇಲೆ ಭಾರೀ ಪರಿಣಾಮವನ್ನೇ ಬೀರಿದೆ.

Translate »