ನಾನು ಡಿಸಿಎಂ ಆಗಬೇಕೆನ್ನುವುದು ಜನರ ಬಯಕೆ: ಶ್ರೀರಾಮುಲು
ಹಾಸನ

ನಾನು ಡಿಸಿಎಂ ಆಗಬೇಕೆನ್ನುವುದು ಜನರ ಬಯಕೆ: ಶ್ರೀರಾಮುಲು

January 30, 2020

ಹಾಸನ, ಜ.29-ನಾನು ಉಪ ಮುಖ್ಯಮಂತ್ರಿ(ಡಿಸಿಎಂ) ಆಗಬೇಕೆಂಬುದು ನನ್ನ ಬೇಡಿಕೆಯಲ್ಲ. ಅದು ಸಮುದಾಯದ ಜನರ ಬಯಕೆ. ಈ ವಿಚಾರವಾಗಿ ಯಾರೊಂದಿಗೂ ನಾನು ಪ್ರಸ್ತಾಪ ಮಾಡಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಖಾಸಗಿ ಕಾರ್ಯಕ್ರಮ ನಿಮಿತ್ತ ಚನ್ನರಾಯಪಟ್ಟಣದ ಪಿ.ಯು. ಕಾಲೇಜು ಮೈದಾನದ ಹೆಲಿಪ್ಯಾಡ್‍ನಲ್ಲಿ ಬುಧವಾರ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲರೂ ಒಟ್ಟಾಗಿ ದುಡಿದಿದ್ದೇವೆ. ನಾನು ಡಿಸಿಎಂ ಆಗಬೇಕು ಎಂಬುದು ಜನರ ಬೇಡಿಕೆ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಬದ್ಧ. ಮುಂದಿನ 2-3 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದರು.

ಡಿಸಿಎಂ ನಿರೀಕ್ಷೆಯಲ್ಲೇ ನಾನು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎ.ಹೆಚ್.ವಿಶ್ವನಾಥ್‍ಗೆ ಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್‍ಗೆ ಬಿಟ್ಟ ವಿಷಯ. ಸಚಿವ ಸಂಪುಟ ವಿಸ್ತರಣೆಯಾದರೆ ಸ್ಫೋಟ ಆಗಲ್ಲ. ಸಿದ್ದರಾಮಯ್ಯ ಅವರಿಗೆ ಈಗ ಅಧಿಕಾರ ಇಲ್ಲ. ಹಾಗಾಗಿ ಅವರಿಂದ ಇಂಥ ಹೇಳಿಕೆ ಸಹಜ ಎಂದು ತಿರುಗೇಟು ನೀಡಿದರು.

ಸಚಿವ ಸ್ಥಾನ ತ್ಯಾಗ ಬಗ್ಗೆ ಮಾಧುಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಅವರು ಹಿರಿಯ ನಾಯಕರು, ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ವೈದ್ಯರ ನೇಮಕ: ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಅದಕ್ಕಾಗಿ ಲೋಕಸೇವಾ ಆಯೋಗದ ಬದಲು ನೇರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ಮೂರು ತಿಂಗಳೊಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಒಂದೇ ಕಾರ್ಯಕ್ರಮಕ್ಕೆ ಪ್ರತ್ಯೇಕ ಹೆಲಿಕಾಪ್ಟರ್‍ನಲ್ಲಿ ಆಗಮಿಸಿದ ಅಶ್ವತ್ಥ್ ನಾರಾಯಣ್, ಶ್ರೀರಾಮುಲು
ಹಾಸನ, ಜ.29-ಒಂದೇ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಪ್ರತ್ಯೇಕ ಹೆಲಿಕಾಪ್ಟರ್‍ನಲ್ಲಿ ಆಗಮಿದ ಪ್ರಸಂಗ ಬುಧವಾರ ಜರುಗಿತು.

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿನ ಖಾಸಗಿ ಪೆಟ್ರೋಲ್ ಬಂಕ್‍ವೊಂದರ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಅಶ್ವತ್ಥ್ ನಾರಾಯಣ್ ಹಾಗೂ ಶ್ರೀರಾಮುಲು ಪ್ರತ್ಯೇಕ ಹೆಲಿಕಾಪ್ಟರ್‍ನಲ್ಲಿ ಆಗಮಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ನಾಯಕರಿಬ್ಬರೂ ಸಚಿವ ಸಂಪುಟವಿಸ್ತರಣೆ ವಿಷಯವಾಗಿ ಮುನಿಸಿಕೊಂಡಿರಬಹುದು. ಹಾಗಾಗಿ ಸರ್ಕಾರದ ಹಣದಲ್ಲಿ ಪ್ರತ್ಯೇಕ ಹೆಲಿಕಾಪ್ಟರ್‍ನಲ್ಲಿ ಆಗಮಿಸಿರಬಹುದೆಂಬ ಮಾತುಗಳು ಕೇಳಿಬಂದವು.

ಸಾರ್ವಜನಿಕರ ಟೀಕೆಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ನಾಯಕರಿಬ್ಬರು, ನಾವು ಒಂದೇ ಹೆಲಿಕಾಪ್ಟರ್‍ನಲ್ಲಿಯೇ ಬರುತ್ತೇವೆ ಎಂದು ಹೇಳಿದ್ದೇವು. ಆದರೆ ಬಂಕ್ ಮಾಲೀಕ ಪ್ರತ್ಯೇಕ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಟ್ಟರು. ಇಲ್ಲದಿದ್ದರೆ ನಾವು ಕಾರ್‍ನಲ್ಲಿಯೇ ಬರುತ್ತಿದ್ದೆವು. ಹೆಲಿಕಾಪ್ಟರ್‍ಗೆ ವ್ಯಯಿಸಿದ ಹಣವನ್ನೇ ನಮಗೆ ಕೊಟ್ಟಿದ್ದರೆ ಬಡವರಿಗೆ ಸಹಾಯ ಮಾಡಬಹುದಿತ್ತು ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

Translate »