ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ
ಮಂಡ್ಯ

ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ

June 8, 2018

ಕೆ.ಆರ್.ಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ(ಆದಿಜಾಂಬವ) ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರಾದ ಸಂಸದ ಕೆ.ಹೆಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್‍ಗೆ ಕಡೇ ಗಳಿಗೆಯಲ್ಲಿ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ ಆರ್.ಬಿ.ತಿಮ್ಮಾಪೂರ್ ಅಥವಾ ಮೈಸೂರಿನ ಪ್ರಭಾವಿ ನಾಯಕ ಧರ್ಮಸೇನಾ ಅವರಿಗಾದರೂ ಸಚಿವ ಸ್ಥಾನ ನೀಡುವ ಮೂಲಕ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸÀಬೇಕಾಗಿತ್ತು. ಆದರೆ ರಾಜ್ಯದ ದಲಿತ ಕೋಮಿನಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯದ ಯಾರನ್ನೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡದಿರುವುದು ಸಮುದಾಯದ ಬಂಧುಗಳಾದ ನಮ್ಮಲ್ಲಿ ಆತಂಕ ಸೃಷ್ಟಿಸಿದೆ. ಇನ್ನಾದರೂ ಉಳಿದಿರುವ ಸಚಿವ ಸ್ಥಾನವನ್ನು ಸಮುದಾಯದ ಏಕೈಕ ಶಾಸಕಿ ರೂಪಾ ಶಶಿಧರ್ ಅಥವಾ ವಿಧಾನ ಪರಿಷತ್ ಸದಸ್ಯರಾದ ಆರ್.ಬಿ. ತಿಮ್ಮಾಪೂರ್, ಧರ್ಮಸೇನಾ ಅವರಿಗೆ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಎನ್.ಆರ್. ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ಕಾರ್ಯದರ್ಶಿ ಕಾಂತರಾಜು, ಪುಟ್ಟರಾಜು, ಉಪಾಧ್ಯಕ್ಷ ನಾಗಯ್ಯ, ಸುರೇಶ್, ಜನಾಂಗದ ಮುಖಂಡರಾದ ನಾಗರಾಜು, ಎನ್.ಬಿ.ಲೋಕೇಶ್, ಸುರೇಶ್, ನಿವೃತ್ತ ಸೈನಿಕ ಜಯರಾಂ ಮತ್ತಿತರರಿದ್ದರು.

Translate »