ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ
ಮೈಸೂರು

ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ

January 8, 2019

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ಮೇಲ್ವರ್ಗದ ಜಾತಿ ಮತ್ತು ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಯನ್ನು ಮೋದಿ ಸರ್ಕಾರ ಘೋಷಿಸುವ ಮೂಲಕ ಮೇಲ್ವರ್ಗ ದವರ ಮತ ಬ್ಯಾಂಕ್‍ಗಳನ್ನು ಸೆಳೆಯಲು ಮುಂದಾಗಿದ್ದಾರೆ.

ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೇಲ್ಜಾತಿ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದ್ದು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ಮಾದರಿಯಲ್ಲೇ ಮೇಲ್ವರ್ಗದವರಿಗೆ ಈ ಮೀಸಲಾತಿ ನೀಡಿ ಮೋದಿ ಹೊಸ ವರ್ಷದ ಆರಂಭದಲ್ಲೇ ಈ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳ ಜನತೆಗೆ ಸರ್ಕಾರದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಕೇಂದ್ರ ಸಂಪುಟ ಇಂದು ಸಮ್ಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ಜಾತಿಯ ವಿವಿಧ ವರ್ಗಗಳಿಗೆ ಈ ಮೀಸಲಾತಿಯು ವರದಾನವಾಗಲಿದೆ. ಈ ಮೂಲಕ ಮೋದಿ ಚುನಾವಣೆಗೂ ಮುನ್ನ ಮತ್ತೊಂದು ಮಹತ್ವದ ದಾಳ ಉರುಳಿಸಿದ್ದು 2019ರಲ್ಲಿ ಮತ್ತೆ ಪಟ್ಟಕ್ಕೇರುವ ಪ್ಲಾನ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್‍ನ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.50 ರಷ್ಟನ್ನು ಮೀರುವಂತಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಕೈಗೊಂಡಿರುವ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ನಿರ್ಧಾರದಿಂದ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.60 ಕ್ಕೆ ಏರಿಕೆಯಾಗಲಿದೆ, ಹೊಸ ಮೀಸಲಾತಿ ನಿಯಮ ಜಾರಿಗೆ ಬರಬೇಕಾದ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ತಿದ್ದುಪಡಿ ತರುವುದು ಅತ್ಯಗತ್ಯವಾಗಿದ್ದು, ಜ. 8 ರಂದೇ ಸಂಸತ್‍ನಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇಷ್ಟೆಲ್ಲಾ ಕುತೂಹಲ ಮೂಡಿಸಿರುವ ಮೇಲ್ಜಾತಿಯ ಬಡವರ ಮೀಸಲಾತಿಗೆ ಅರ್ಹತಾ ಮಾನದಂಡಗಳು ಹೀಗಿವೆ:

  • ಶಿಕ್ಷಣ, ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಮೇಲ್ಜಾತಿಯ ಬಡವರ ಮೀಸಲಾತಿಯ ವ್ಯಾಪ್ತಿಯಲ್ಲಿ ಬರಬೇಕಾದರೆ ಆರ್ಥಿಕವಾಗಿ ಹಿಂದುಳಿದವ ರಾಗಿರಬೇಕು, ಅಂದರೆ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಮ್ಮಿ ಇರಬೇಕು.
  • 1,000 ಚದರ ಅಡಿಗಿಂತಲೂ ಕಡಿಮೆ ಇರುವ ಮನೆ (ರೆಸಿಡೆನ್ಷಿಯಲ್ ಪ್ರಾಪರ್ಟಿ) ಇದ್ದ ಮೇಲ್ವರ್ಗದವರೂ ಸಹ ಮೀಸಲಾತಿಗೆ ಅರ್ಹರು 5 ಹೆಕ್ಟೇರ್‍ಗಿಂತಲೂ ಕಡಿಮೆ ಕೃಷಿ ಭೂಮಿ ಹೊಂದಿರುವ ಮೇಲ್ಜಾತಿಯವರೂ ಮೀಸಲಾತಿಗೆ ಅರ್ಹರು
  • ನಿಗದಿತ ಪುರಸಭೆ ವ್ಯಾಪ್ತಿಯಲ್ಲಿ109 ಯಾರ್ಡ್‍ಗಳಿಗಿಂತ ಕಡಿಮೆ ವಸತಿ ಸ್ಥಳ ಹಾಗೂ ನಿಗದಿಯಾಗದ ಪುರಸಭೆ ವ್ಯಾಪ್ತಿಯಲ್ಲಿ 209 ಯಾರ್ಡ್‍ಗಿಂತ ಕಡಿಮೆ ವಸತಿ ಸ್ಥಳ ಹೊಂದಿರುವವರೂ ಮೀಸಲಾತಿಗೆ ಅರ್ಹರಾಗಿದ್ದಾರೆ.
  • ಶೇ. 10 ರಷ್ಟು ಮೀಸಲಾತಿಗೆ ಅರ್ಹವಾದ ವರ್ಗಗಳು: ಠಾಕೂರ್, ಬ್ರಾಹ್ಮಣ, ರಜಪೂತ್, ಬನಿಯಾ, ಜಾಟ್, ಪಟೇಲ್.

ಕಾಂಗ್ರೆಸ್ ಟೀಕೆ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೂ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಚುನಾವಣಾ ಗಿಮಿಕ್ ಅಷ್ಟೇ ಎಂದು ಕಾಂಗ್ರೆಸ್ ಟೀಕಿಸಿದೆ. ಕೇಂದ್ರ ಸಚಿವ ಸಂಪುಟ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಮನು ಸಿಂಘ್ವಿ, ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ 4 ವರ್ಷಗಳಿಂದ ಯೋಚನೆ ಮಾಡಿರಲಿಲ್ಲ. ಆದರೆ 2019ರ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿ ಯಾಗುವ ಕೆಲವೇ ತಿಂಗಳುಗಳ ಮುನ್ನ ಈ ಮೀಸಲಾತಿಯನ್ನು ಜಾರಿಗೆ ತಂದಿದೆ. ಇದೊಂದು ಚುನಾವಣಾ ಗಿಮಿಕ್ ಅಷ್ಟೇ ಎಂದು ಹೇಳಿದ್ದಾರೆ.

Translate »