ಮೈಸೂರಿನ 12 ಮಂದಿ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ
ಮಂಡ್ಯ, ಮೈಸೂರು

ಮೈಸೂರಿನ 12 ಮಂದಿ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ

July 4, 2018
  • ನೇಪಾಳದಲ್ಲಿ ಭಾರೀ ಮಳೆಗೆ ಸಿಲುಕಿರುವ ಮೈಸೂರು ಯಾತ್ರಾರ್ಥಿಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ, ಸುರಕ್ಷಿತವಾಗಿ ಕರೆತರಲು ನಿರಂತರ ಪ್ರಯತ್ನ

ಮೈಸೂರು: ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂ ರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತ ದೃಢಪಡಿಸಿಕೊಂಡಿದೆ.

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಒಟ್ಟು 290 ಮಂದಿ ನೇಪಾಳದ ಸಿಮಿಕೋಟ್‍ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿ ಪರದಾಡುತ್ತಿದ್ದಾರೆಂಬ ಮಾಹಿತಿ ಸೋಮವಾರ ರಾತ್ರಿ ಸಿಕ್ಕಿತ್ತು. ಆ ಪೈಕಿ ಮೈಸೂರಿನ 12 ಮಂದಿ ಯಾತ್ರಾರ್ಥಿ ಗಳೂ ನೇಪಾಳದ ಸಿಮಿಕೋಟ್‍ನಲ್ಲಿ ಸಿಲುಕಿ ದ್ದಾರೆಂಬ ಮಾಹಿತಿಯನ್ನು ಮೈಸೂರು ಜಿಲ್ಲಾಡಳಿತ ಪಡೆದುಕೊಂಡಿದೆ. ಮೈಸೂ ರಿನ ರಾಮಕೃಷ್ಣ ನಗರ ‘ಹೆಚ್’ ಬ್ಲಾಕ್ ನಿವಾಸಿ ಗಳಾದ ಸುಧೀರ್ ಪ್ರಭಾಕರ್, ಜಗದೀಶ್ವರಿ ಸುಧೀರ್, ಕುವೆಂಪುನಗರದ ಶಾಂತಿಸಾಗರ ಬಳಿಯ ಅಮೃತ, ಸಿದ್ದಾರ್ಥ ಬಡಾವಣೆಯ ಡಾ. ಪ್ರೇಮಾ, ಗಿರೀಶ್, ಚೈತ್ರಾಗಿರೀಶ್, ಪೂರ್ಣಿಮಾ, ತೇಜಸ್ವಿನಿ, ಜಯಶ್ರೀ, ಮಂಜೇಗೌಡ ಹಾಗೂ ಚಂದ್ರಕಲಾ, ಮಾನಸ ಸರೋವರ ಯಾತ್ರೆಗೆ ಹೋಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು, ತಾವು ನೇಪಾಳ ಎಂಬಸಿಯವರೊಂದಿಗೆ ಸಂಪರ್ಕದಲ್ಲಿದ್ದು, ಮೈಸೂರು ಯಾತ್ರಾರ್ಥಿಗಳಾರೂ ತೊಂದರೆಗೆ ಸಿಲುಕಿಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದೇವೆ ಎಂದರು.

525 ಮಂದಿ ಸಿಮಿಕೋಟ್‍ನಲ್ಲಿ, 550 ಮಂದಿ ಹಿಲ್ಸಾದಲ್ಲಿ ಹಾಗೂ 500 ಮಂದಿ ಟಿಬೆಟ್‍ನಲ್ಲಿರುವ ಬಗ್ಗೆ ಭಾರತದ ರಾಯಭಾರಿಯಿಂದ ಮಾಹಿತಿ ಬಂದಿದೆ. ಎಲ್ಲಾ ಯಾತ್ರಾರ್ಥಿಗಳಿಗೆ ಆಹಾರ, ವಸತಿ ಸೌಲಭ್ಯ ಒದಗಿಸಲಾಗಿದ್ದು ಸುರಕ್ಷಿತವಾಗಿದ್ದಾರೆಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ಪೂರೈಕೆ, ಆರೈಕೆ ಕ್ರಮಗಳು ನಡೆಯುತ್ತಿವೆ. ವೈದ್ಯಕೀಯ ಮತ್ತು ನಾಗರಿಕ ಸೌಲಭ್ಯ ಒದಗಿಸಿ, ಯಾತ್ರಾರ್ಥಿಗಳನ್ನು ಸುರಕ್ಷಿತ ಮಾರ್ಗಗಳ ಮೂಲಕ ಕರೆಸಿಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಜೊತೆಗೆ ತುರ್ತು ಪರಿಸ್ಥಿತಿ ಇರುವೆಡೆ ನೇಪಾಳ ಆರ್ಮಿ ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿಗಳೂ ಸಹ ಬಂದಿದೆ. ಆದ್ದರಿಂದ ಯಾರೂ ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಮೈಸೂರಿನವರಾದ 9 ಮಂದಿ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ನಾಳೆ ಸಂಜೆಯೊಳಗಾಗಿ ಮೈಸೂರು ತಲುಪಬಹುದೆಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ತಿಳಿಸಿದ್ದು, ಅವರೆಲ್ಲರೂ, ಮುಂಬೈ ಮೂಲದ ಪ್ರಾಣ ಚಿಕಿತ್ಸಾ ಕೇಂದ್ರದ ಖಾಸಗಿ ಸಂಸ್ಥೆ ಮೂಲಕ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. ಮಂಜೇಗೌಡ ಮತ್ತು ಚಂದ್ರಕಲಾ ಎಂಬುವರು ಮಾತ್ರ ಸಿಮಿಕೋಟ್‍ನಲ್ಲಿ ಭಾರೀ ಮಳೆಗೆ ಸಿಲುಕಿದ್ದು, ಅವರಿಗೆ ಆಶ್ರಯ ನೀಡಿ, ಸುರಕ್ಷತಾ ಕ್ರಮಗಳನ್ನು ನೇಪಾಳ ಸರ್ಕಾರ ಕೈಗೊಂಡಿದೆ ಎಂಬ ಮಾಹಿತಿ ಭಾರತದ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ ಎಂದು ಎಡಿಸಿ ಯೋಗೇಶ್ ತಿಳಿಸಿದ್ದಾರೆ.

ಮಂಡ್ಯದ 35 ಯಾತ್ರಾರ್ಥಿಗಳು ಸೇಫ್.!

ಮಂಡ್ಯ: ಮಾನಸ ಸರೋವರ ಯಾತ್ರೆ ಕೈಗೊಂಡಿ ರುವ ಮಂಡ್ಯ ಜಿಲ್ಲೆಯ ಸುಮಾರು 35ಕ್ಕೂ ಹೆಚ್ಚು ಯಾತ್ರಾರ್ಥಿ ಗಳು ಸುರಕ್ಷಿತವಾಗಿದ್ದಾರೆ. ಯಾತ್ರಾರ್ಥಿಗಳು ಸಂಪರ್ಕಕ್ಕೆ ಸಿಗದೇ ಸಂಕಷ್ಟದಲ್ಲಿದ್ದಾರೆಂದು ರಾಜ್ಯದೆಲ್ಲೆಡೆ ಸುದ್ದಿ ಹರಡಿತ್ತು. ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಶಿವಸ್ವಾಮಿ, ಗೀತಾ, ಮಂಜುನಾಥ ಸ್ವಾಮಿ, ಪೂರ್ಣಿಮಾ ಸೇರಿದಂತೆ ವಿವಿಧೆಡೆಯ ಸುಮಾರು 35ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತರಾಗಿದ್ದಾರೆಂದು ಯಾತ್ರಾರ್ಥಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಅಧಿಕೃತ ಮಾಹಿತಿ ಇಲ್ಲ: ಮಂಡ್ಯ ಜಿಲ್ಲೆಯಿಂದ ಎಷ್ಟು ಯಾತ್ರಾರ್ಥಿ ಗಳು ಮಾನಸ ಸರೋವರ ಯಾತ್ರೆಗೆ ತೆರಳಿದ್ದಾರೆ ಎಂಬುದಕ್ಕೆ ತಮ್ಮಲ್ಲಿ ಅಧಿಕೃತ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಖಾಸಗಿಯಾಗಿ ತೆರಳಿರುವ ಬಗ್ಗೆಯೂ ನಮಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ಮಾನಸ ಸರೋವರ ಯಾತ್ರೆಗೆ ತೆರಳಿರುವವರ ಕುಟುಂಬದವರು ಮಾಹಿತಿ ನೀಡಿದರೆ ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆಯೂ ಯಾರೂ ಕೂಡ ತಮ್ಮಲ್ಲಿಗೆ ಬಂದಿಲ್ಲ. ಮಾಹಿತಿಯನ್ನೂ ನೀಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಾತ್ರಾರ್ಥಿಗಳ ಸಹಾಯಕ್ಕಾಗಿ ಹಾಟ್‍ಲೈನ್ ವ್ಯವಸ್ಥೆ

ಮೈಸೂರು: ಮಾನಸ ಸರೋವರ ಯಾತ್ರೆಯಲ್ಲಿರು ವವರು ಹಾಗೂ ಅವರ ಸಂಬಂಧಿಕರ ಮಾಹಿತಿಗಾಗಿ ಹಾಟ್‍ಲೈನ್ ವ್ಯವಸ್ಥೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆ ತಿಳಿದಿರುವ ಸಿಬ್ಬಂದಿಗಳು ಅಗತ್ಯ ಮಾಹಿತಿ ನೀಡಲು ನಿಯೋಜಿತರಾಗಿದ್ದು, ಈ ಕೆಳಕಂಡ ಫೋನ್ ನಂಬರ್‍ಗಳ ಮೂಲಕ ಕೌನ್ಸಿಲರ್‍ಗಳನ್ನು ಸಂಪರ್ಕಿಸಿ, ಮಾಹಿತಿ ಪಡೆಯಬಹುದೆಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರವಣ್ ಗಣೇಶ, ಫಸ್ಟ್ ಸೆಕ್ರೆಟರಿ +977-9851107006, ತಶಿಖಂಪ, ಸೆಕೆಂಡ್ ಸೆಕ್ರೆಟರಿ +977-9851155007, ತರುಣ್ ರಹೇಜ, ಅಟಾಚೆ +977-9851107021, ರಾಜೇಶ್ ಜಾ, ಎಎಸ್‍ಓ +977-9818832398, +977-9851165140, ಯೋಗಾನಂದ (Hotline-Kannada) + 977-9823672371, ಪಿಂಡಿ ನರೇಶ (Hotline-Telugu) +977-9808082292, ಆರ್. ಮುರುಗನ್ (Hot line-Tamil) +977-9808500642, ಸಿ.ರಂಜಿತ್ (Hotline-Malayalam) +977-9808500644.

Translate »