ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್
ಹಾಸನ

ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್

June 2, 2019

ಹಾಸನ ಹಾಲು ಒಕ್ಕೂಟದಿಂದ 50 ಲಕ್ಷ ರೂ. ಕೊಡುಗೆ: ಸಚಿವ ರೇವಣ್ಣ ವಿತರಣೆ
ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ ನಗರದಲ್ಲಿನ ಪ್ರಧಾನ ಹಾಲು ಉತ್ಪಾದನಾ ಘಟಕದಲ್ಲಿ ವಿಶ್ವ ಹಾಲು ದಿನವನ್ನು ಶನಿವಾರ ಆಚರಿಸಲಾಯಿತು. ಇದೇ ವೇಳೆ ಜಿಲ್ಲೆಯ ವಿವಿಧ ಸರಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್‍ಗಳನ್ನು ಒಕ್ಕೂಟದ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ವಿತರಿಸಿದರು.

ನಂತರ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ನಿಟ್ಟಿನಲ್ಲಿ ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ 125 ಕಂಪ್ಯೂಟರ್ ಗಳನ್ನು ನೀಡಲಾಗಿದೆ ಎಂದರು.

ಒಕ್ಕೂಟಕ್ಕೆ ನಿತ್ಯ 10 ಲಕ್ಷ ಲೀ. ಹಾಲು ಬರುತ್ತಿದೆ. ಒಕ್ಕೂಟದಲ್ಲಿ ಸದ್ಯ 750 ಕೋಟಿ ರೂ. ವೆಚ್ಚದ ವಿವಿಧ ಯೋಜನೆ ಗಳು ಚಾಲನೆ ಪಡೆದಿವೆ. ಇದರಲ್ಲಿ 250 ಕೋಟಿ ರೂ.ಗಳ ಯೋಜನೆ ಈಗಾಗಲೇ ಮುಕ್ತಾಯಗೊಂಡಿದೆ. ಉಳಿದ ಕಾಮ ಗಾರಿಗಳು ಪ್ರಗತಿಯಲ್ಲಿವೆ. ಸರಕಾರಿ ಕಾಲೇಜುಗಳಿಗೆ ಮೂಲ ಸೌಕರ್ಯ ಕೊರತೆಯಾಗಿದ್ದರೆ ಪ್ರಾಂಶುಪಾಲರ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಕಳೆದ ಏಪ್ರಿಲ್ ಅಂತ್ಯಕ್ಕೆ ಹಾಸನ ಹಾಲು ಒಕ್ಕೂಟ 12 ಕೋಟಿ ರೂ. ಲಾಭ ಗಳಿಸಿದೆ. ಹಾಲು ಉತ್ಪಾದಕರಿಗೂ ಪ್ರತಿ ಲೀ.ಗೆ 1 ರೂ.ನಂತೆ ಖರೀದಿ ದರ ಹೆಚ್ಚಿಸುವ ಮೂಲಕ ಲಾಭಾಂಶವನ್ನು ಹಂಚಿಕೆ ಮಾಡಲಾಗು ತ್ತಿದೆ. ಜತೆಗೆ ಹಾಲು ಉತ್ಪಾದಕರ ಕುಟುಂಬಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರತಿ ಕುಟುಂಬ 250 ರೂ. ನೀಡಿ ವಿಮೆ ಪಡೆದರೆ ಹಾಲು ಒಕ್ಕೂಟ 250 ರೂ. ಭರಿಸಲಿದೆ. ಕುಟುಂಬದಲ್ಲಿ ಯಾರಾದರೂ ಮೃತರಾದರೆ 1 ಲಕ್ಷ ರೂ. ಪರಿಹಾರ ಧನ ದೊರೆಯುವಂತೆ ಮಾಡಲಾಗಿದೆ ಎಂದು ವಿವರಿಸಿದರು.

ಜಾನುವಾರುಗಳಿಗೆ ವರ್ಷಕ್ಕೆ 900 ರೂ. ಕಂತಿನ ವಿಮೆ ಸೌಲಭ್ಯವಿದೆ. ಹಸು ವಿನ ಮಾಲೀಕರು 450 ರೂ. ಕಟ್ಟಿದರೆ, ಒಕ್ಕೂಟ 450 ರೂ. ಪಾವತಿಸುತ್ತದೆ. ಜಾನುವಾರು ಮೃತಪಟ್ಟರೆ 50 ಸಾವಿರ ರೂ. ವಿಮೆ ಹಣ ಹಸುವಿನ ಮಾಲೀಕ ರಿಗೆ ಸಿಗುತ್ತದೆ ಎಂದರು.
ಕೌಶಿಕದ ಹೊರವಲಯದಲ್ಲಿ 50 ಎಕರೆಯಲ್ಲಿ 40 ಮೆಟ್ರಿಕ್ ಟನ್ ಉತ್ಪಾದನಾ ಸಾಮಥ್ರ್ಯದ ಮೆಗಾ ಡೈರಿ ನಿರ್ಮಿಸಲು ಉದ್ಧೇಶಿಸಿದ್ದು, ಸರಕಾರದಿಂದ ಮಂಜೂ ರಾತಿಯೂ ದೊರೆತಿದೆ ಎಂದರು.

ಕಲ್ಯಾಣಕ್ಕೆ ಸೌಲಭ್ಯ: ನಗರದಲ್ಲಿ ಕೆಎಂ ಎಫ್ ನಿರ್ಮಿಸುತ್ತಿರುವ ಸಮುದಾಯ ಭವನವನ್ನು ಹಾಸನ ಹಾಲು ಒಕ್ಕೂಟದ ವಶಕ್ಕೆ ಪಡೆದಿದ್ದು, ಭವನಕ್ಕೆ ಶೀಘ್ರವೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸ ಲಾಗುವುದು. ಹಾಲು ಉತ್ಪಾದಕರ ಮಕ್ಕಳ ಮದುವೆಗೆ ಅನುಕೂಲವಾಗಲೆಂದು ಕಡಿಮೆ ಬಾಡಿಗೆಗೆ ಭವನ ನೀಡಲಾಗುವುದು ಎಂದರು. ಈ ಸಂದರ್ಭ ನೂತನ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಹಾಸನ ಹಾಲು ಒಕ್ಕೂಟದ ಗೋಪಾಲಯ್ಯ, ಹೊನ್ನವಳ್ಳಿ ಸತೀಶ್ ಮತ್ತಿತರರಿದ್ದರು.

108 ಆಂಬ್ಯುಲೆನ್ಸ್ ವಾಹನದಲ್ಲಿ ಕರೆತರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ ಆ ವಾಹನದ ಚಾಲಕ ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿಸಲಾಗುವುದು -ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ

Translate »