ಮೈಸೂರು ಬಾಲಭವನದಲ್ಲಿ 15 ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
ಮೈಸೂರು

ಮೈಸೂರು ಬಾಲಭವನದಲ್ಲಿ 15 ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

April 27, 2018

ಮೈಸೂರು: ಮೈಸೂರಿನ ಬನ್ನಿಮಂಟಪದ ಜಿಲ್ಲಾ ಜವಾಹರ್ ಬಾಲಭವನ, ಶಿಶು ಆಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಬಾಲಭವನದ ಸಭಾಂಗಣದಲ್ಲಿ 15 ದಿನಗಳ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು. ಮೈಸೂರಿನ ಪ್ರಪ್ರಥಮ ಮಹಿಳಾ ಮಾತನಾಡುವ ಗೊಂಬೆ ಕಲಾ ವಿದೆ, ಬಿಗ್‍ಬಾಸ್ ಖ್ಯಾತಿಯ ಸುಮಾ ರಾಜ್‍ಕುಮಾರ್ ಅವರು ಶಿಬಿರದ ಮಕ್ಕ ಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿರುವ ಎಲ್ಲಾ ಮಕ್ಕಳು ಮುಂದೆ ದೊಡ್ಡ ಹುದ್ದೆ ಅಲಂಕರಿಸಿ, ಇತರರಿಗೆ ಆಟೋಗ್ರಾಫ್ ನೀಡುವಂತಾಗ ಬೇಕು ಎಂದು ಶುಭ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ದಿವಾ ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಆಸಕ್ತಿಯಿಂದ ಕಲಿತು ತಮ್ಮ ಪ್ರತಿಭೆ, ಕೌಶಲ್ಯದಲ್ಲಿ ಪರಿಣತರಾಗಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಅವರು, ಕೊಣ ನೂರು ಸಂತೆಗೆ ಹೋಗಬೇಕಂತೆ.., ಅಪ್ಪನಿಗೂ ಅಮ್ಮನಿಗೂ ಚಿಂತೆಯೋ ಚಿಂತೆ.. ಅದು ಯಾಕಂತೆ… ಎಂದು ಮಕ್ಕಳಿಗೆ ಹಾಡು ಹೇಳಿಕೊಟ್ಟು ಖುಷಿ ಪಡಿಸಿದರು.

ಮೈಸೂರು ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ 7ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿರುವ ಬೇಸಿಗೆ ಶಿಬಿರದಲ್ಲಿ 105 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆ, ಸಂಗೀತ, ಆರೋಗ್ಯ ರಕ್ಷಣೆ ಇನ್ನಿತರ ವಿಷಯಗಳ ಕುರಿತಂತೆ ತರಬೇತಿ ನೀಡಲಾಗುವುದು. ಅಗ್ನಿ ಆಕಸ್ಮಿಕ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಇತ್ಯಾದಿ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು. ಅಲ್ಲದೆ ತರಬೇತಿ ಅವಧಿಯಲ್ಲಿ ಮೈಸೂರು ಹಾಲಿನ ಡೈರಿಗೆ ಕರೆದೊಯ್ದು ಹಾಲಿನ ಸಂಸ್ಕರಣೆ ಮತ್ತು ಉತ್ಪನ್ನಗಳ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು. ಈ ಸಂದರ್ಭದಲ್ಲಿ ಬಾಲಭವನದ ಪ್ರಧಾನ ಸಂಘಟಕ ಕೆ.ವಿ.ಕೃಷ್ಣ ಮೂರ್ತಿ, ಸಂಪನ್ಮೂಲ ಅಧಿಕಾರಿ ಎಸ್. ಶ್ಯಾಮಲಾಬಾಯಿ ಇನ್ನಿತರರು ಉಪಸ್ಥಿತರಿದ್ದರು.

Translate »