ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು
ಹಾಸನ

ಹಾಸನ ತಾಲೂಕಿನಲ್ಲಿ 3 ಮನೆಗಳವು: 11.07 ಲಕ್ಷ ರೂ. ಆಭರಣ ಕಳ್ಳರ ಪಾಲು

December 26, 2018

ಹಾಸನ: ತಾಲೂಕಿನ ಅಗಿಲೆ ಗ್ರಾಮದಲ್ಲಿ ಸರಣಿ ಯೋಪಾದಿಯಲ್ಲಿ 3 ಮನೆಗಳಲ್ಲಿ ಕಳವು ನಡೆದಿದ್ದು, ಒಟ್ಟು 11.07 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.ಕಳವು 1: ಅಗಿಲೆ ಗ್ರಾಮದ ಸಣ್ಣೇಗೌಡ ಅವರು ಮನೆಗೆ ಬೀಗ ಹಾಕಿ ಮಂಗಳೂರಿಗೆ ಹೋಗಿದ್ದಾಗ ಡಿ.22ರ ಮಧ್ಯಾಹ್ನ 3 ಗಂಟೆ ವೇಳೆ ಕಳ್ಳರು ಮನೆ ಹಿಂಬದಿ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿದ್ದಾರೆ. ರೂಮುಗಳ ವಾರ್ಡ್‍ರೋಬ್ ಗಳಲ್ಲಿದ್ದ 8,06,750 ರೂ. ಬೆಲೆಯ ಚಿನ್ನ ಮತ್ತು ಬೆಳ್ಳಿ ಆಭರಣ ಗಳನ್ನು ಹೊತ್ತೊಯ್ದಿದ್ದಾರೆ. ಈ ಬಗ್ಗೆ ಸಣ್ಣೇಗೌಡ ಅವರು ಹಾಸನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕಳವು 2: ಅಗಿಲೆ ಗ್ರಾಮದ ನಾಗೇಂದ್ರ ಅವರು ಮನೆಗೆ ಬೀಗ ಹಾಕಿಕೊಂಡು ಡಿ.22ರಂದು ಮಧ್ಯಾಹ್ನ 3 ಗಂಟೆಗೆ ಕುಟುಂಬದವರೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಡಿ.23 ರಂದು ಸಂಜೆ 7 ಗಂಟೆಗೆ ಮನೆಗೆ ವಾಪಸಾದಾಗ ಮುಂಬಾಗಿಲು ಅರ್ಧ ತೆರೆದಿದ್ದು ಕಂಡಿತು. ಪರಿಶೀಲಿಸಿದಾಗ ಕಳ್ಳರು ಮನೆಯ ಮುಂಬಾಗಿಲನ್ನು ಹಾರೆಯಿಂದ ಮೀಟಿ, ಡೋರ್ ಲಾಕ್ ಮುರಿದು ಒಳಪ್ರವೇಶಿಸಿ ಕೊಠಡಿಗಳ ವಾರ್ಡ್ ರೋಬ್‍ನಲ್ಲಿದ್ದ 2,76,600 ರೂ. ಬೆಲೆಯ ಚಿನ್ನ ಮತ್ತು ಬೆಳ್ಳಿಯ ಆಭರಣ ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿತು. ಈ ಸಂಬಂಧ ನಾಗೇಂದ್ರ ಅವರು ಡಿ.24ರಂದು ಹಾಸನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳವು 3: ಬಿ.ಕಾಟೀಹಳ್ಳಿಯ ಜಯ ಇಂಟರ್‍ನ್ಯಾಷನಲ್ ಸ್ಕೂಲ್ ಮುಂಭಾಗದ ಧನಲಕ್ಷ್ಮಿ ಅವರ ಮನೆಯಲ್ಲಿಯೂ ಕಳವು ನಡೆದಿದೆ.
ಧನಲಕ್ಷ್ಮಿ ಅವರ ಕುಟುಂಬದವರೆಲ್ಲಾ ಸಂಬಂಧಿಕರ ಮದುವೆ ಗೆಂದು ಧರ್ಮಸ್ಥಳಕ್ಕೆ ತೆರಳಿದ್ದು. ಮದುವೆ ಮುಗಿಸಿಕೊಂಡು ಡಿ.24ರಂದು ಬೆಳಿಗ್ಗೆ 11 ಗಂಟೆಗೆ ವಾಪಸಾದಾಗ ಮನೆಯ ಹಿಂಬದಿ ಬಾಗಿಲನ್ನು ಮೀಟಿ ಒಳಪ್ರವೇಶಿಸಿರುವ ಕಳ್ಳರು, ರೂಮಿನಲ್ಲಿದ್ದ ಗಾಡ್ರೇಜ್ ಬೀರುವನ್ನು ಜಖಂಗೊಳಿಸಿ ಅದರಲ್ಲಿದ್ದ 24 ಸಾವಿರ ರೂ. ಬೆಲೆಯ ಚಿನ್ನದ ಆಭರಣ ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡಿದೆ. ಧನಲಕ್ಷ್ಮಿ ಅವರ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Translate »