ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿ
ಮೈಸೂರು

ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿ

November 25, 2018

ಮಂಡ್ಯ: ವಿಶ್ವೇಶ್ವರಯ್ಯ ಉಪನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿಯಾಗಿರುವ ದಾರುಣ ಘಟನೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ಶನಿವಾರ ಸಂಭವಿಸಿದ್ದು, ಅದೃಷ್ಟ ವಶಾತ್ ಓರ್ವ ಬಾಲಕ ಹಾಗೂ ಯುವಕ ಬದುಕುಳಿದಿದ್ದಾರೆ.

ಮಂಡ್ಯ-ಪಾಂಡವಪುರ ಮಾರ್ಗದ ಕನಗನಮರಡಿ ಹಾಗೂ ವದೇಸಮುದ್ರ ಗ್ರಾಮಗಳ ನಡುವಿನ ವಿಶ್ವೇಶ್ವರಯ್ಯ ಉಪನಾಲೆಗೆ ಶನಿವಾರ ಮಧ್ಯಾಹ್ನ 12.15 ಗಂಟೆ ಸುಮಾರಿಗೆ `ರಾಜ್ ಕುಮಾರ್’ ಖಾಸಗಿ ಬಸ್, ಉರುಳಿ ಬಿದ್ದು, 15 ಮಹಿಳೆಯರು, 6 ಪುರುಷರು ಹಾಗೂ 9 ಮಕ್ಕಳು ಸೇರಿದಂತೆ ಒಟ್ಟು 30 ಮಂದಿ ಅಸುನೀಗಿ ದ್ದಾರೆ. ವದೇಸಮುದ್ರದ ಲೋಹಿತ್ ಹಾಗೂ ಗಿರೀಶ್ ಪವಾಡಸದೃಶ ರೀತಿಯಲ್ಲಿ ಜವರಾಯನಿಂದ ಬಚಾವಾಗಿದ್ದಾರೆ. ಬಸ್‍ನ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೃತರ ವಿವರ: ಚಿಕ್ಕಮರಳಿ ಚಂದ್ರು(35), ವದೇಸಮುದ್ರದ ಕರಿಯಪ್ಪ(65), ಚಿಕ್ಕಯ್ಯ(60), ಚಿಕ್ಕಕೊಪ್ಪಲು ಪಾಪಣ್ಣಗೌಡ, ಚಿಕ್ಕಕೆಂಪಯ್ಯ(50), ಬೇಬಿಯ ಈರಯ್ಯ(60), ಚಿಕ್ಕಾಡೆ ಸೌಮ್ಯ(30), ಕನಗನಮರಡಿಯ ರತ್ನಮ್ಮ(50), ದೊಡ್ಡಕೊಪ್ಪಲು ಜಯಮ್ಮ(50), ಬೂಕನಕೆರೆ ಸಾವಿತ್ರಮ್ಮ(40), ಡಾಮಡಹಳ್ಳಿ ಮಂಜುಳಮ್ಮ(40), ಹುಲ್ಕೆರೆ ಸುಮಲತಾ(35), ಚಿಕ್ಕಕೊಪ್ಪಲು ದಿವ್ಯ, ಗುಡಗನಹಳ್ಳಿ ರಾಧ, ಹಾತೂರು ತೇಜು, ವದೇಸಮುದ್ರದ ರತ್ನಮ್ಮ(60), ಕಮಲಮ್ಮ(55), ಶಶಿಕಲಾ(45), ಕಟ್ಟೇರಿಯ ಶಿವಮ್ಮ(50), ಕನÀಗನಮರಡಿ ನಿಂಗಮ್ಮ (70), ಹುಲ್ಕೆರೆ ಕೊಪ್ಪಲು ಮಣಿ(35), ಕೋಡಿಶೆಟ್ಟಿಪುರದ ಕಲ್ಪನಾ (11), ಸೌಮ್ಯ(5), ಭುಜವಳ್ಳಿಯ ಪ್ರೀತಿ(15), ಗಾಣದಹೊಸೂರು ಅನುಷಾ(17), ಗುಡಗನಹಳ್ಳಿ ಲಿಖಿತ(5), ವದೇಸಮುದ್ರದ ಪವಿತ್ರ(11), ಡಾಮಡಹಳ್ಳಿ ಪ್ರೇಕ್ಷಾ(2), ವದೇಸಮುದ್ರದ ರವಿಕುಮಾರ್(12), ಪ್ರಶಾಂತ(15) ಮೃತಪಟ್ಟ ದುರ್ದೈವಿಗಳು.

ಜವರಾಯನ ಅಟ್ಟಹಾಸ: ನಿತ್ಯವೂ ಮಂಡ್ಯ-ಪಾಂಡವಪುರ ಮಾರ್ಗವಾಗಿ ಸಂಚರಿಸುತ್ತಿದ್ದ `ರಾಜ್‍ಕುಮಾರ್’ ಖಾಸಗಿ ಬಸ್ (ಕೆಎ-19, ಎ-5676)ಗಾಗಿ ಇಂದು ನಾಲೆಯ ಬಳಿ ಕಾದು ಕುಳಿತಿದ್ದ ಜವರಾಯ, 30 ಜನರ ಬಲಿ ಪಡೆದು ಅಟ್ಟಹಾಸ ಮೆರೆದಿದ್ದಾನೆ. ಕನಗನಮರಡಿಯಲ್ಲಿ ಜನರನ್ನು ಹತ್ತಿಸಿ ಕೊಂಡು ವದೇಸಮುದ್ರದತ್ತ ಸಾಗುತ್ತಿದ್ದಾಗ, ಸುಮಾರು 12 ಅಡಿಗೂ ಹೆಚ್ಚು ಆಳವಿರುವ ವಿಶ್ವೇಶ್ವರಯ್ಯ ಉಪ ನಾಲೆಗೆ ಉರುಳಿದೆ. ಎಡಭಾಗಕ್ಕೆ ಮಗುಚಿದ್ದಲ್ಲದೆ, ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದರಿಂದ ಪ್ರಯಾಣಿಕರು ಪಾರಾಗಲು ಸಾಧ್ಯವಾಗಿಲ್ಲ.

ಅಪಾಯದ ಮುನ್ಸೂಚನೆ ಅರಿತ ಚಾಲಕ ಹಾಗೂ ನಿರ್ವಾಹಕ ಬಚಾವಾಗಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಜವರಾಯನ ಬರಸೆಳೆತಕ್ಕೆ ಬಲಿಯಾದ ಬಸ್‍ನಲ್ಲಿದ್ದ ವದೇಸಮುದ್ರ ಗ್ರಾಮದ ಗಿರೀಶ್, ಕಿಟಕಿ ಗಾಜು ಒಡೆದು ಹೊರಬಂದು ಈಜಿ ದಡ ಸೇರಲು ಮುಂದಾಗಿದ್ದಾನೆ. ಈ ವೇಳೆ ವಿದ್ಯಾರ್ಥಿ ಲೋಹಿತ್‍ನನ್ನೂ ಎಳೆ ತಂದು ದಡ ಸೇರಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಮುಳುಗಿದ್ದ ಬಸ್‍ನಿಂದ ಕಿಟಕಿ ಮೂಲಕ ಹೊರಬಂದ ಬಾಲಕ ಲೋಹಿತ್‍ನನ್ನು ಸಾರ್ವಜನಿಕರು ಹಗ್ಗದ ಸಹಾಯದಿಂದ ಪಾರು ಮಾಡಿದರೆಂದು ಹೇಳಲಾಗುತ್ತಿದೆ.

ಉಳಿದಂತೆ ಎಲ್ಲರೂ ಜಲ ಸಮಾಧಿಯಾಗಿದ್ದಾರೆ. ನಾಲೆಗೆ ಬಸ್ ಉರುಳಿ ಬಿದ್ದ ಶಬ್ದ ಮತ್ತು ಬಸ್‍ನಲ್ಲಿದ್ದವರ ಆಕ್ರಂದನ ಸುತ್ತಮುತ್ತಲಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೇಳಿಸಿ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಂಪೂರ್ಣವಾಗಿ ಮುಳುಗಿದ್ದ ಬಸ್ ಕಂಡು ಆಘಾತಕ್ಕೀಡಾಗಿದ್ದಾರೆ. ಪಂಪ್‍ಸೆಟ್‍ಗಳಿಗೆ ಕಟ್ಟಿದ್ದ ಹಗ್ಗಗಳನ್ನು ತಂದು, ಬಸ್‍ನಲ್ಲಿದ್ದವರ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ನಾಲೆಯ ಮಧ್ಯದಲ್ಲಿ ಮುಳುಗಿದ್ದ ಬಸ್ ತಲುಪುವುದು ಕಷ್ಟಸಾಧ್ಯವಾಗಿದೆ. ಆದರೂ ಹಗ್ಗದ ಸಹಾಯದಿಂದ ಬಸ್ ಮೇಲೆ ನಿಂತು ನೋಡಿದಾಗ ಯಾರೂ ಬದುಕುಳಿದಿಲ್ಲ ಎಂಬುದು ಸ್ಪಷ್ಟವಾಗಿದೆ. ವಿಷಯ ತಿಳಿದಾಕ್ಷಣ ದಾವಿಸಿದ ಸಚಿವ ಸಿ.ಎಸ್.ಪುಟ್ಟರಾಜು ಸೂಚನೆ ಮೇರೆಗೆ ನಾಲೆಯ ನೀರಿನ ಹರಿವನ್ನು ಬಂದ್ ಮಾಡಿದ್ದು, ಸಾರ್ವಜನಿಕರು ಸುಮಾರು 15 ಮೃತದೇಹಗಳನ್ನು ಹೊರತೆಗೆದರು. ಅಷ್ಟರಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಚುರುಕುಗೊಳಿಸಿದರು. ಈಜು ತಜ್ಞರ ಸಹಕಾರದೊಂದಿಗೆ ಒಂದೊಂದಾಗಿ ಮೃತದೇಹಗಳನ್ನು ಹೊರತೆಗೆಯಲಾಯಿತು. ಕ್ರೇನ್ ಮೂಲಕ ಬಸ್ ಅನ್ನು ನಾಲೆಯಿಂದ ಮೇಲೆತ್ತಲಾಯಿತು.

ಕುಟುಂಬದವರ ಆಕ್ರಂದನ: ನಾಲೆಗೆ ಬಸ್ ಉರುಳಿಬಿದ್ದ ವಿಷಯ ಸುತ್ತಮುತ್ತ ಹರಡುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು. ದುರಂತವನ್ನು ಕಂಡು ಕಂಬನಿ ಮಿಡಿದರು. ಘಟನಾ ಸ್ಥಳಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಸುಮಾರು 2 ಕಿಮೀ ದೂರದವರೆಗೂ ವಾಹನಗಳು ನಿಂತಿದ್ದವು. ಮಹಿಳೆಯರು, ಮಕ್ಕಳೂ ಸಹ ಎರಡು-ಮೂರು ಕಿಮೀ ಕಾಲ್ನಡಿಗೆಯಲ್ಲಿ ಬಂದು ಮರುಕ ವ್ಯಕ್ತಪಡಿಸಿದರು. ಒಂದೊಂದೇ ಮೃತದೇಹಗಳನ್ನ ನಾಲೆಯಿಂದ ಮೇಲೆತ್ತುವಾಗ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತಿತ್ತು. ಮೃತದೇಹಗಳನ್ನು ತೊಡೆಯ ಮೇಲಿಟ್ಟುಕೊಂಡು ಅತ್ತಿತ್ತ ಅಲುಗಾಡಿಸಿ, ಕಣ್ಣು ಬಿಡುವಂತೆ ಕಣ್ಣೀರಿಡುತ್ತಿದ್ದರು. ಸಾಲಾಗಿ ಮಲಗಿಸಿದ್ದ ಮೃತದೇಹಗಳ ಸುತ್ತ ಕುಟುಂಬದವರು ರೋಧಿಸುತ್ತಿದ್ದ ದೃಶ್ಯ ಹೃದಯ ಹಿಂಡುವಂತಿತ್ತು. ಹೃದಯ ಹಿಂಡುವ ದೃಶ್ಯಗಳನ್ನು ಕಂಡ ಸಾರ್ವಜನಿಕರು, ಬಸ್‍ನೊಂದಿಗೆ 30 ಕುಟುಂಬಗಳ ನೆಮ್ಮದಿಯನ್ನೂ ಜಲಸಮಾಧಿ ಮಾಡಿದ ವಿಧಿಗೆ ಹಿಡಿಶಾಪ ಹಾಕುತ್ತಿದ್ದರು.

ಸಿಎಸ್‍ಪಿ ಸ್ಥಳದಲ್ಲೇ ಮೊಕ್ಕಾಂ: ವಿಷಯ ತಿಳಿಯುತ್ತಿದ್ದಂತೆ ದಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಸಮಾಧಾನಪಡಿಸುವ ಪ್ರಯತ್ನ ಮಾಡಿದರು. 30 ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಂತರ ಅವುಗಳನ್ನು ಕುಟುಂಬದವರಿಗೆ ಒಪ್ಪಿಸುವವರೆಗೂ ಸ್ಥಳದಿಂದ ಕದಲಿಲ್ಲ. ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್ ದೇವರಾಜು, ಮೈಸೂರು ಎಸ್ಪಿ ಅಮಿತ್‍ಸಿಂಗ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಅಗ್ನಿಶಾಮಕ ಸಿಬ್ಬಂದಿ ಸಂಜೆ 6.30ರವರೆಗೂ ನಿರಂತರ ಕಾರ್ಯಾಚರಣೆ ನಡೆಸಿ 30 ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಬಸ್‍ನಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೃತಪಟ್ಟವರ ಸಂಬಂಧಿಕರ ಹೊರತಾಗಿ ಬೇರ್ಯಾರು ತಮ್ಮ ಮನೆಯ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿಲ್ಲ.

ಸ್ಥಳದಲ್ಲೇ ಪಂಚನಾಮೆ: ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕಾಗಮಿಸಿದ ಮಂಡ್ಯ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಹರೀಶ್, ಆರ್‍ಎಂಓ ಡಾ.ಶಿವ ಕುಮಾರ್, ಪೋಸ್ಟ್ ಮಾರ್ಟಂ ವಿಭಾಗದ ಅಶ್ವಿನಿಕುಮಾರ್ ಅವರನ್ನೊಳಗೊಂಡ 30 ವೈದ್ಯರ ತಂಡ, ಘಟನಾ ಸ್ಥಳದಲ್ಲಿಯೇ ಎಲ್ಲಾ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದರು.

ಕನಗನಮರಡಿ ಬಸ್ ದುರಂತ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಕಂಬನಿ

ಮೈಸೂರು: ಕನಗನಮರಡಿ ಬಸ್ ದುರಂತದಲ್ಲಿ 30 ಜೀವಗಳು ಬಲಿಯಾಗಿರುವುದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಷ್ಟೇ ಅಲ್ಲದೆ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು, ಪ್ರಮುಖರು ಕಂಬನಿ ಮಿಡಿದಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರಹ್ಲಾದ್ ಜೋಷಿ, ಮತ್ತಿತರರು ಟ್ವಿಟರ್‍ನಲ್ಲಿ ಸಂತಾಪ ಸೂಚಿಸಿದ್ದಾರೆ.

ರಾಹುಲ್ ಗಾಂಧಿ: ಭೀಕರ ಬಸ್ ದುರಂತದ ಸುದ್ದಿ ಕೇಳಿ ಆಘಾತವಾಗಿದೆ. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ಸಂತಾಪ ಸೂಚಿಸುವೆ.

ಹೆಚ್.ಡಿ.ದೇವೇಗೌಡ: ಕನಗನಮರಡಿಯ ಘೋರ ಘಟನೆ ಮನ ಕಲಕಿದೆ. ಅದರಲ್ಲೂ ಬಾಳಿ ಬದುಕಬೇಕಿದ್ದ ಮಕ್ಕಳು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವುದು ಅತೀವ ಘಾಸಿಗೊಳಿಸಿದೆ. ಇದು ಕ್ರೂರ ವಿಧಿಯ ಅಟ್ಟಹಾಸವೇ ಸರಿ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.

ಬಿ.ಎಸ್.ಯಡಿಯೂರಪ್ಪ: ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ವಿ.ಸಿ. ಉಪ ನಾಲೆಗೆ ಖಾಸಗಿ ಬಸ್ ಬಿದ್ದು 30 ಮಂದಿ ಅಸುನೀಗಿರುವುದು ದುರ್ದೈವದ ಸಂಗತಿ. ಅಮಾಯಕರ ಸಾವು ಅತ್ಯಂತ ನೋವುಂಟು ಮಾಡಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಕೋರುವೆ.

ಪ್ರಧಾನಿ ಮೋದಿ: ಬಸ್ ದುರಂತದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬಗಳವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.

ಬಸ್ ಉರುಳಿದ್ದು ಏಕೆ?

ಕನಗನಮರಡಿಯಿಂದ ವದೇಸಮುದ್ರ ಗ್ರಾಮದ ಕಡೆಗೆ ಸಾಗುತ್ತಿದ್ದ ಬಸ್, ಮಾರ್ಗಮಧ್ಯೆ ನಾಲೆಗೆ ಉರುಳುವುದಕ್ಕೆ ನಿಖರ ಕಾರಣ ಏನೆಂಬುದು ಇಂದಿಗೂ ನಿಗೂಢವಾಗಿದೆ. ಸ್ಟೇರಿಂಗ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು, ನಾಲೆಗೆ ಉರುಳಿದೆ ಎಂದು ಹೇಳಲಾಗುತ್ತಿದೆ. ಆದರೆ ಚಾಲಕ ಮೊಬೈಲ್‍ನಲ್ಲಿ ಮಾತನಾಡುತ್ತಾ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದಿದ್ದು, ಬಸ್ ವೇಗವಾಗಿ ಸಾಗುತ್ತಿದ್ದ ಕಾರಣ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದು ಮತ್ತೊಂದು ಮೂಲದಿಂದ ತಿಳಿದುಬಂದಿದೆ. ಜಲಸಮಾಧಿಯಾದ 30 ಜನರ ಮಧ್ಯೆ ಜವರಾಯನ ಜಯಿಸಿದ ಬಾಲಕ ಲೋಹಿತ್, ಡ್ರೈವರ್ ಹಾಗೂ ಕ್ಲೀನರ್ ಏನೋ ಮಾತನಾಡಿಕೊಂಡು ಬಸ್‍ನಿಂದ ಜಂಪ್ ಆದರು. ಬಳಿಕ ಬಸ್ ನಾಲೆಯಲ್ಲಿ ಮುಳುಗಿತೆಂದು ಹೇಳಿದ್ದಾನೆ. ನಾಲೆಯ ಪಕ್ಕದ ರಸ್ತೆ ಅತೀ ಕಿರಿದಾಗಿಲ್ಲ. ಬಸ್ ಉರುಳಿಬಿದ್ದಿರುವುದನ್ನು ಗಮನಿಸಿದರೆ ತಡೆಗೋಡೆಯಿಂದಲೂ ದುರಂತ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ವಿಸ್ತಾರವಾದ ರಸ್ತೆಯಿಂದ ಬಸ್ ನಾಲೆಗೆ ಉರುಳಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಪರಾರಿಯಾಗಿರುವ ಚಾಲಕ ಹಾಗೂ ಸಹಾಯಕನ ಪತ್ತೆಹಚ್ಚಿ ವಿಚಾರಣೆ ನಡೆಸಿ, ತನಿಖೆ ನಡೆಸಿದ ಬಳಿಕವಷ್ಟೇ ಘಟನೆಗೆ ಕಾರಣವೇನೆಂಬುದು ಸ್ಪಷ್ಟಗೊಳ್ಳಲಿದೆ.

ಸಿಎಂ ಭೇಟಿ: ಸಾಂತ್ವನ, 5 ಲಕ್ಷ ಪರಿಹಾರ ಘೋಷಣೆ

ಕನಗನಮರಡಿ ಬಳಿ ಸಂಭವಿಸಿದ ಭೀಕರ ಬಸ್ ದುರಂತದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಉಪ ನಾಲೆಯ ಏರಿಯ ಮೇಲೆ ಸಾಲಾಗಿ ಮಲಗಿಸಿದ್ದ ಮೃತದೇಹಗಳ ಬಳಿ ಅವರ ಕುಟುಂಬಸ್ಥರು ರೋದಿಸುತ್ತಿರುವುದನ್ನು ಕಂಡು, ಗಳಗಳನೆ ಅತ್ತರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು

Translate »