ಅಂಬರೀಶ್ ಇನ್ನಿಲ್ಲ
ಮೈಸೂರು

ಅಂಬರೀಶ್ ಇನ್ನಿಲ್ಲ

November 25, 2018

ಬೆಂಗಳೂರು: ಮಂಡ್ಯದ ಗಂಡು, ಮಾಜಿ ಸಚಿವ, ಚಿತ್ರನಟ ಅಂಬರೀಶ್ ಅವರು ಇಂದು ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರ ಪತ್ನಿ ಶ್ರೀಮತಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರು ಅಂಬರೀಶ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆಯೇ ರಾತ್ರಿ 10.50ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ವಿಕ್ರಂ ಆಸ್ಪತ್ರೆಯ ಡಾ. ಸತೀಶ್ ನೇತೃತ್ವದ ತಂಡ ತುರ್ತು ನಿಗಾ ಘಟಕದಲ್ಲಿಟ್ಟು, ಪೂರ್ಣ ತಪಾಸಣೆ ನಂತರ ಅಧಿಕೃತ ವಾಗಿ ಅಂಬರೀಶ್ ನಿಧನರಾದ ವಿಷಯವನ್ನು ಪ್ರಕಟಿಸಿದರು.

ಅಂಬರೀಶ್ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಕ್ಕರೆ ಸಚಿವ ಕೆ.ಜೆ.ಜಾರ್ಜ್, ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಯಶ್, ದುನಿಯಾ ವಿಜಿ, ಧ್ರುವಸರ್ಜಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಡಿಸಿಪಿ ದೇವರಾಜ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ ಪುತ್ರನಾಗಿ 1952ರ ಮೇ 29ರಂದು ಜನಿಸಿದ ಅಂಬರೀಶ್, ಪ್ರಾಥಮಿಕ ಶಿಕ್ಷಣವನ್ನು ಮಂಡ್ಯದಲ್ಲಿ ಪಡೆದಿದ್ದು, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದಿದ್ದಾರೆ.

ಅಂಬರೀಶ್ ಅವರು ಖ್ಯಾತ ಪಿಟೀಲು ವಿದ್ವಾನ್ ಟಿ.ಚೌಡಯ್ಯ ಅವರ ಮೊಮ್ಮಗ. ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಚಿತ್ರರಂಗಕ್ಕೆ 1973ರಂದು ಪರಿಚಯಿಸಲ್ಪಟ್ಟ ಅಂಬರೀಶ್, ತಮ್ಮ ಆಪ್ತಮಿತ್ರ ವಿಷ್ಣುವರ್ಧನ್ ನಾಯಕ ನಟನಾಗಿ ಅಭಿನಯಿಸಿದ `ನಾಗರಹಾವು’ ಚಿತ್ರದಲ್ಲಿ `ಜಲೀಲ’ ಖಳ ನಾಯಕನ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರವು ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಿಗೆ ಪ್ರಥಮ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನೇ ನಿರ್ಮಿಸಿದ್ದರು. ಇದೇ ಚಿತ್ರದಲ್ಲಿ ಮೇಷ್ಟ್ರ ಪಾತ್ರದಲ್ಲಿ ಅಭಿನಯಿಸಿದ ಮೈಸೂರಿನವರೇ ಆದ ಕೆ.ಎಸ್.ಅಶ್ವತ್ಥ್ ಅವರು `ಚಾಮಯ್ಯ ಮೇಷ್ಟ್ರು’ ಎಂದೇ ಪ್ರಖ್ಯಾತರಾದರು.

ನಾಗರಹಾವು ಚಿತ್ರದ ನಂತರ ವಿಷ್ಣುವರ್ಧನ್ ಮತ್ತು ಅಂಬರೀಶ್ ಜೋಡಿ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸುತ್ತಾ ಹೋಯಿತು. ಆರಂಭದಲ್ಲಿ ಖಳ ನಾಯಕನಾಗಿ ಮಿಂಚುತ್ತಿದ್ದ ಅಂಬರೀಶ್, ಶೀಘ್ರದಲ್ಲೇ ನಾಯಕ ನಟನಾಗಿ ಭಡ್ತಿ ಪಡೆದು ಮಿಂಚತೊಡಗಿದರು. ರಾಜಕೀಯ ಕಥಾವಸ್ತುವನ್ನು ಹೊಂದಿದ್ದ `ಚಕ್ರವ್ಯೂಹ’ ಚಿತ್ರವು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಚಿತ್ರರಂಗದಲ್ಲಿ `ರೆಬೆಲ್ ಸ್ಟಾರ್’ ಎಂಬ ಬಿರುದನ್ನು ಪಡೆದುಕೊಂಡರು. `ಚಕ್ರವ್ಯೂಹ’ ಚಿತ್ರದ ನಂತರ ಅವರಲ್ಲಿ ರಾಜಕೀಯ ಆಸಕ್ತಿಯು ಬೆಳೆಯತೊಡಗಿತು. ಮಂಡ್ಯದ ಸಂಸದರಾಗಿದ್ದ ಜಿ.ಮಾದೇಗೌಡರ ಆಣತಿಯ ಮೇರೆಗೆ ಅಂಬರೀಶ್ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಂಬರೀಶ್ ಕಾಂಗ್ರೆಸ್ ತೊರೆದು ಹೆಚ್.ಡಿ.ದೇವೇಗೌಡರ ನೇತೃತ್ವದ ಜನತಾ ದಳ ಸೇರಿದರು.

1996ರಲ್ಲಿ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾದ ಕಾರಣ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಪ್ರಥಮವಾಗಿ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಬರೀಶ್, ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ.ಲಿಂಗಪ್ಪ ವಿರುದ್ಧ ಸೋಲನ್ನು ಅನುಭವಿಸ ಬೇಕಾಯಿತು. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಮಾದೇಗೌಡರ ವಿರುದ್ಧ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಗೆಲುವು ಸಾಧಿಸಿದ್ದರು.

1999ರಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆಗೆ ಜನತಾ ದಳ ತೊರೆದು ಕಾಂಗ್ರೆಸ್ ಸೇರಿದ್ದ ಅಂಬರೀಶ್, ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು. 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದ ಅವರು, ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾದರು. ಆದರೆ 2007ರಲ್ಲಿ ನಡೆದ ಕಾವೇರಿ ವಿವಾದದ ವೇಳೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಆದರೂ ಕೂಡ ಅವರು ಅಧಿಕಾರಕ್ಕೆ ಅಂಟಿಕೊಳ್ಳದೇ ಸಚಿವ ಸಂಪುಟ ಸಭೆಗೂ ಹೋಗಲಿಲ್ಲ. ಸಚಿವರ ಕಚೇರಿಗೂ ಕಾಲಿಡಲಿಲ್ಲ.
2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕೀಯ ಪ್ರವೇಶ ಮಾಡಿದ ಅಂಬರೀಷ್ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಸೋಲನ್ನು ಅನುಭವಿಸಿದ್ದರು. ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಜೆಡಿಎಸ್‍ನ ಎನ್.ಚಲುವರಾಯಸ್ವಾಮಿ ವಿರುದ್ಧ ಸೋಲಿನ ಕಹಿ ಅನುಭವಿಸಿದರು.

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಗೆಲುವು ಸಾಧಿಸಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾದರು. ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ತಮ್ಮನ್ನು ಕೈಬಿಟ್ಟಿದ್ದರಿಂದ ಅಸಮಾಧಾನ ಗೊಂಡಿದ್ದ ಅಂಬರೀಶ್, ಕಾಂಗ್ರೆಸ್‍ನಿಂದ ದೂರವೇ ಉಳಿದಿದ್ದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳೆ ಅಂಬರೀಶ್ ಅವರಿಗಾಗಿ ಬಿ-ಫಾರಂ ಇಟ್ಟುಕೊಂಡು ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಕಾದು ಕುಳಿತ್ತಿದ್ದರಾದರೂ, ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸಲೇ ಇಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತದೆ ಎಂದು ಅಂಬರೀಶ್ ನುಡಿದಿದ್ದ ಅಂಬರೀಶ್ ಅವರ ಭವಿಷ್ಯ ನಿಜವಾಗಿ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ಜಯಭೇರಿ ಬಾರಿಸಿ ಕಾಂಗ್ರೆಸ್ ಧೂಳೀಪಟವಾಗಿತ್ತು.

‘ಅಂಬಿ ನಿಂಗ್ ವಯಸ್ಸಾಯ್ತೋ’ ಕೊನೆ ಚಿತ್ರ

ಹಲವು ವರ್ಷಗಳ ನಂತರ ಪೂರ್ಣ ಪ್ರಮಾಣದ ನಾಯಕರಾಗಿ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಅವರ ಕೊನೆಯ ಚಿತ್ರ.ಕಿಚ್ಚ ಸುದೀಪ್ ಅವರೊಂದಿಗೆ ನಟಿಸಿದ್ದರು. ಚಿತ್ರದಲ್ಲಿ ತಮ್ಮ ವಯಸ್ಸಿಗೆ ತಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಒಬ್ಬ ನಿವೃತ್ತ ಸಾಹಸ ಕಲಾವಿದ, ನಿವೃತ್ತಿ ಹೊಂದಿದ ಜೀವನ ಚೆನ್ನಾಗಿ ಸೆಟ್ಲ್ ಆಗಿರುವ ಮಗ ಮತ್ತು ಕುಟುಂಬ ಹೀಗೆ ಸಾಗುತ್ತಿರುವ ಜೀವನ ಅಂಬಿಗೆ ಬೇಸರ ತರುತ್ತದೆ. ಬೋರ್ ಎನಿಸುತ್ತದೆ. ಇದರಿಂದ ಮುಕ್ತಿ ಪಡೆಯಲು ಹೊರ ಹೋಗಿ ಹೊಸದೊಂದು ಕೆಲಸ ನೋಡುವ ನಾಯಕ ತನ್ನ ಮಗನಿಗೆ ಸಮಸ್ಯೆಗಳ ಸರಮಾಲೆಯನ್ನ ತಂದೊಡ್ಡುತ್ತಾನೆ. ಇದರಿಂದ ತಂದೆ ಮಗನ ನಡುವೆ ವಿರಸಗಳು ಪ್ರಾರಂಭವಾಗುತ್ತವೆ. ನಂತರ ತಂದೆಯಿಂದ ಬೇಸತ್ತುವ ಮಗ ತಂದೆಯನ್ನು ಮನೆಯಲ್ಲೇ ನಿವೃತ್ತಿ ಜೀವನ ಕಳೆಯಿರಿ ಎನ್ನುವಾಗ ತಂದೆ ಅಂಬಿ ಮನೆಯನ್ನು ಬಿಟ್ಟು ಒಬ್ಬರೇ ಬೈಕ್‍ನಲ್ಲಿ ಸುತ್ತಾಡುತ್ತಾ ಸ್ವತಂತ್ರ ಜೀವನ ಬಯಸುತ್ತಾರೆ,ಅಲ್ಲಿ ವಯಸ್ಸಾದ ಒಂದು ತಂಡವೊಂದು ಇವರಿಗೆ ಎದುರಾಗುತ್ತಾರೆ. ಅವರು ಸಹ ಬೈಕ್ ರೈಡಿಂಗ್ ಟ್ರಿಪ್ ಬಂದಿರುತ್ತಾರೆ. ಅಲ್ಲಿ ಅಂಬಿ ತನ್ನ ಹಳೆಯ ಜೀವನ ಹಳೆ ಲವ್ ಸ್ಟೋರಿಯನ್ನು ಹೇಳುತ್ತಾನೆ ಅಲ್ಲಿ ಕಿಚ್ಚ ಸುದೀಪ್ ಅವರ ಎಂಟ್ರಿ ಆಗುತ್ತದೆ. ಅವರು ಅಂಬಿಯ ಕಿರಿವಯಸ್ಸಿನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಶ್ರುತಿ ಹರಿಹರನ್ ಮಿಂಚಿದ್ದಾರೆ. ಸುಹಾಸಿನಿ ಅಂಬಿಯ ಜೋಡಿಯಾಗಿದ್ದರು. ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಹೇಳಿ ಮಾಡಿಸಿದ ಚಿತ್ರವಾಗಿತ್ತು.

ಕನ್ನಡ ಚಿತ್ರರಂಗದ `ದೊಡ್ಡಣ್ಣ’

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ನಿಧನದ ನಂತರ ಚಿತ್ರರಂಗದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿದ ಅಂಬರೀಶ್, ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಉಂಟಾದರೂ, ತಮ್ಮದೇ ಆದ ಶೈಲಿಯಲ್ಲಿ ಅದನ್ನು ಬಗೆಹರಿಸುತ್ತಿದ್ದರು.

ಒಂದು ವೇಳೆ ಅಂಬರೀಶ್ ಊರಿನಲ್ಲಿ ಇಲ್ಲದೇ ಇದ್ದಾಗ ಚಿತ್ರರಂಗದಲ್ಲಿ ಏನಾದರೂ ಸಮಸ್ಯೆ ಉಂಟಾದರೆ, ಅದರ ನಿವಾರಣೆಗಾಗಿ ಇಡೀ ಕನ್ನಡ ಚಿತ್ರರಂಗ ಅಂಬರೀಶ್ ಬರುವುದನ್ನೇ ಆಸೆಗಣ್ಣಿನಿಂದ ಎದುರು ನೋಡುತ್ತಿತ್ತು. ಅವರ ಮನೆಯಲ್ಲೇ ಸಂಧಾನ ನಡೆಸುತ್ತಿದ್ದ ಅಂಬರೀಶ್, ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಿ, ಸಮಸ್ಯೆ ಬಗೆಹರಿಸುವುದರಲ್ಲಿ ಅಜಾತಶತ್ರುವಾಗಿದ್ದರು. ವಿಪರ್ಯಾಸವೆಂದರೆ ಅಂಬರೀಶ್ ಅವರು ನಡೆಸಿದ ಕೊನೆಯ ಸಂಧಾನ ವಿಫಲವಾಯಿತು. ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ ಮೀಟೂ ಆರೋಪ ವಿವಾದವು ಚಲನಚಿತ್ರ ವಾಣಿಜ್ಯ ಮಂಡಳಿ ಅಂಗಳಕ್ಕೆ ಬಂದಿತ್ತು. ಅಂಬರೀಶ್ ಅವರು ಈ ಸಂಧಾನ ಸಭೆಯನ್ನು ಅವರ ಮನೆ ಬದಲಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ನಡೆಸಿದರು. ವಿಪರ್ಯಾಸ ವೆಂದರೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಸಂಧಾನಕ್ಕೆ ಒಪ್ಪದೇ ಇದ್ದ ಕಾರಣ ಅಂಬರೀಶ್ ಅವರ ಸಂಧಾನವು ಮೊದಲು ಹಾಗೂ ಕೊನೆಯ ಬಾರಿಗೆ ವಿಫಲವಾಗಿತ್ತು.

ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ

ರೆಬೆಲ್ ಸ್ಟಾರ್ ಅಂಬರೀಶ್ ಅವರು ಸಾಂಸ್ಕೃತಿಕ ನಗರಿ ಮೈಸೂರು ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು.

ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಅಂಬರೀಶ್ ಅವರನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಚಿತ್ರದ ಖಳ ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದ್ದೂ ಕೂಡ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ.

ಕುದುರೆ ರೇಸ್ ಪ್ರಿಯರಾಗಿದ್ದ ಅಂಬರೀಶ್, ಮೈಸೂರಿನ ರೇಸ್ ಕ್ಲಬ್ ಸದಸ್ಯತ್ವವನ್ನು ಹೊಂದಿದ್ದರು. ಇಲ್ಲಿ ರೇಸ್‍ಗಳು ನಡೆಯುವಾಗ ಹಾಜರಾಗಿ, ಕುದುರೆಗಳು ಓಡುವು ದನ್ನು ಕಂಡು ಸಂಭ್ರಮಿಸುತ್ತಿದ್ದರು. ಮೈಸೂರಿನ ಚಾಮುಂಡಿ ಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮುಂತಾದವು ಅಂಬಿಗೆ ಅಚ್ಚುಮೆಚ್ಚಿನ ತಾಣಗಳಾಗಿದ್ದವು. ಅಂಬರೀಶ್ ಅವರು ಇತ್ತೀಚೆಗೆ ಶಾರದಾ ವಿಲಾಸ್ ಕಾಲೇಜಿನಲ್ಲಿ ನಡೆದ ಸಮಾ ರಂಭವೊಂದರಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಚೇಷ್ಟೆಗಳನ್ನು ಸ್ಮರಿಸಿಕೊಂಡಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಅಂಬರೀಶ್, ತಾವು ಮೈಸೂರಿನ ಜೊತೆ ಹೊಂದಿದ್ದ ಬಾಂಧವ್ಯದ ಹಿನ್ನೆಲೆಯಲ್ಲಿ ಸಿದ್ದ ರಾಮಯ್ಯ ಪರವಾಗಿ ಪ್ರಚಾರವನ್ನೂ ನಡೆಸಿದ್ದರು.

ಅಂಬಿ ಗಳಿಸಿದ ಪ್ರಶಸ್ತಿಗಳು

1982-ಕರ್ನಾಟಕ ರಾಜ್ಯ ಪ್ರಶಸ್ತಿ, ಅತ್ಯುತ್ತಮ ನಟ.
1985-86- ಕರ್ನಾಟಕ ರಾಜ್ಯ ಪ್ರಶಸ್ತಿ, ಅತ್ಯುತ್ತಮ ಸಹನಟ. (ಮಸಣದ ಹೂವು ಚಿತ್ರ).
ಫಿಲಂ ಫೇರ್ ಪ್ರಶಸ್ತಿ-ಅತ್ಯುತ್ತಮ ನಟ, ಒಲವಿನ ಉಡುಗೊರೆ
2005-ಎನ್‍ಟಿಆರ್ ನ್ಯಾಷನಲ್ ಅವಾರ್ಡ್
2009-ಜೀವಮಾನ ಶ್ರೇಷ್ಠ ಫಿಲಂ ಫೇರ್ ಅವಾರ್ಡ್
2009-ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ
2011-ಕರ್ನಾಟಕ ಸರ್ಕಾರದ ವಿಷ್ಣುವರ್ಧನ ಪ್ರಶಸ್ತಿ
2012-ಟಿವಿ-9ನ ಸ್ಯಾಂಡಲ್‍ವುಡ್ ಸ್ಟಾರ್ ಪ್ರಶಸ್ತಿ
2013-ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್

Translate »