ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ
ಮಂಡ್ಯ

ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ

November 29, 2018

ಮಂಡ್ಯ: ಅನಾರೋಗ್ಯದಿಂದ ಶನಿವಾರ ಅಗಲಿದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ಮಧ್ಯಾಹ್ನ ಬೆಂಗಳೂರಿನಿಂದ ಮೂರು ಮಡಿಕೆಗಳಲ್ಲಿ ತರಲಾಗಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರು ವಿಸರ್ಜನೆ ಮಾಡಿದರು.

ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನು ಸಂಚಯನ ಮಾಡಲಾಗಿತ್ತು. ಈ ಪೈಕಿ ಮೂರು ಮಡಿಕೆಗಳಲ್ಲಿರುವ ಅಸ್ಥಿ ಯನ್ನು ಇಂದು ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು.

ಇನ್ನುಳಿದ 3 ಮಡಿಕೆಯಲ್ಲಿರುವ ಅಸ್ಥಿಯ ಪೈಕಿ ಒಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕಲಾವಿದರ ಸಂಘಕ್ಕೆ, ಮತ್ತೊಂದು ನಿರ್ಮಾಪಕರ ಸಂಘದ ಕಚೇರಿಗೆ, ಕೊನೆಯ ಮಡಿಕೆಯಲ್ಲಿರುವ ಅಸ್ಥಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಪುರೋಹಿತ ಲಕ್ಷ್ಮೀಶ್ ಶರ್ಮ ನೇತೃತ್ವದಲ್ಲಿ ಮೊದಲು ಚಿತಾಭಸ್ಮಕ್ಕೆ ಪಂಚಾಮೃತ ಅಭಿಷೇಕ ಮಾಡಿ, ನಂತರ ಪೂಜೆ ಸಲ್ಲಿಸಿ ಕಾವೇರಿಗೆ ಚಿತಾಭಸ್ಮ ವಿಸರ್ಜಿಸಲಾಯಿತು. ಅಂಬ ರೀಶ್ ಪುತ್ರ ಅಭಿಷೇಕ್‍ಗೌಡ ಒಕ್ಕಲಿಗ ಸಂಪ್ರ ದಾಯದಂತೆ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ಹಿಮ್ಮುಖವಾಗಿ ನಿಂತು ವಿಸರ್ಜನೆ ಮಾಡಿದರು. ನಂತರ ತೆಪ್ಪದಲ್ಲಿಯೂ ತೆರಳಿ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು.

ಪೂರ್ವ ಕಾವೇರಿ, ಲೋಕಪಾವನಿ, ಪಶ್ಚಿಮ ಕಾವೇರಿ, ಗುಪ್ತಗಾಮಿನಿ 4 ನದಿಗಳು ಸೇರುವ ಪುಣ್ಯಸ್ಥಳ ಸಂಗಮ ಇದಾಗಿದ್ದು, ಇದೇ ಸಂಗಮದಲ್ಲಿ ಅಂಬರೀಶ್ ಅವರ ಹಲವು ಚಿತ್ರಗಳ ಶೂಟಿಂಗ್ ನಡೆದಿತ್ತು. ಈಗ ಅದೇ ಸ್ಥಳದಲ್ಲಿ ಅಂಬಿ ಚಿತಾಭಸ್ಮ ಲೀನವಾಗಿದೆ. ಅಂಬಿ ಅಸ್ಥಿ ವಿಸರ್ಜನೆ ಹಿನ್ನೆಲೆಯಲ್ಲಿ ಕಾವೇರಿ ಸಂಗಮಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಶ್ರೀರಂಗಪಟ್ಟಣದ ಸಂಗಮದಲ್ಲಿ ಅಸ್ಥಿ ವಿಸರ್ಜನೆಗೂ ಮೊದಲು ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿನ ಅಂಬ ರೀಶ್ ಸಮಾಧಿಯಲ್ಲಿ ಅಸ್ಥಿ ಸಂಚಯನ, ಹಾಲು- ತುಪ್ಪ ಕಾರ್ಯ ನಡೆಯಿತು. ಪುತ್ರ ಅಭಿಷೇಕ್ ಗೌಡ, ಪತ್ನಿ ಸುಮಲತಾ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀರಂಗ ಪಟ್ಟಣಕ್ಕೆ ಅಸ್ಥಿಯನ್ನು ತರಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟ ರಾಜು, ಮಾಜಿ ಶಾಸಕ ರಮೇಶ್‍ಬಾಬು, ಅಂಬಿ ಆಪ್ತರಾದ ಶ್ರೀನಿವಾಸ್, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ದೊಡ್ಡಣ್ಣ, ಶಾಸಕ ಮುನಿ ರತ್ನ, ಸಾರಾ ಗೋವಿಂದು ಇನ್ನಿತರರು ಚಿತಾಭಸ್ಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಡಿ.4 ಕ್ಕೆ ಪುಣ್ಯ ತಿಥಿ: ಅಂಬಿ ಅಸ್ಥಿ ವಿಸರ್ಜನೆ ಧಾರ್ಮಿಕ ವಿಧಿವಿಧಾನ ಮುಗಿಸಿದ ಬಳಿಕ ಮಾತನಾಡಿದ ರಾಕ್‍ಲೈನ್ ವೆಂಕ ಟೇಶ್, ಇಂದು ಧಾರ್ಮಿಕ ವಿಧಿವಿಧಾನ ದಂತೆ ಅಸ್ಥಿ ವಿಸರ್ಜನೆ ಮಾಡಿದ್ದೇವೆ. ಡಿ. 4ರಂದು ಅಂಬರೀಶ್ ಅವರ ಪುಣ್ಯ ತಿಥಿ ಮಾಡಲಾಗುತ್ತಿದೆ. ಪುಣ್ಯತಿಥಿ ಕಾರ್ಯಕ್ರಮದ ಬಗ್ಗೆ ಅಂಬಿ ಅಣ್ಣನ ಕುಟುಂಬದೊಂದಿಗೆ ಎಲ್ಲರೂ ಕುಳಿತು ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

‘ಕಾವೇರಿ ನೀರನು ಕುಡಿದು’ ಎಂದು ಹಾಡಿ ಸಂಭ್ರಮಿಸಿದ್ದ ಮಂಡ್ಯದ ಗಂಡು ಅಂಬರೀಶ್ ಕಾವೇರಿಯ ಮಡಿಲು ಸೇರಿದರು. ಚಿತಾಭಸ್ಮ ವಿಸರ್ಜನೆಯ ವೇಳೆ ಅಂಬಿ ಚಿರಾಯು ಅನ್ನೋ ಘೋಷಣೆ ಅಭಿಮಾನಿಗಳಿಂದ ಕೇಳಿಬಂತು.
ರೆಬೆಲ್ ಸ್ಟಾರ್‍ಗೆ ತಾವು ಬದುಕಲ್ಲ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತಾ..? ಎಂಬ ಪ್ರಶ್ನೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ನಾಲ್ಕು ತಿಂಗಳ ಹಿಂದೆಯಷ್ಟೇ ಅಂಬರೀಶ್ ಮಗನ ಹೆಸರಿಗೆ ತಮ್ಮ ಆಸ್ತಿಯನ್ನು ವರ್ಗಾಯಿಸಿದ್ದರು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನ ಕೆರೆ ಗ್ರಾಮದಲ್ಲಿದ್ದ 7 ಎಕರೆಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಮಗನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಮದ್ದೂರು ಪಟ್ಟಣದಲ್ಲಿ ರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪುತ್ರ ಅಭಿಷೇಕ್‍ಗೌಡ ಜೊತೆಗೆ ಆಗಮಿಸಿ ಆಸ್ತಿ ವರ್ಗಾವಣೆ ಮಾಡಿದ್ದರು.

Translate »