ನಾವಿಬ್ಬರೂ ಒಂದೇ ಊರು: ಡಿಸಿಟಿ
ಮಂಡ್ಯ

ನಾವಿಬ್ಬರೂ ಒಂದೇ ಊರು: ಡಿಸಿಟಿ

November 26, 2018

ಅಂಬರೀಶ್ ಅವರದು ಸಾಯುವ ವಯಸ್ಸಲ್ಲ

ಭಾರತೀನಗರ: ಅಂಬರೀಶ್ ಅವರದು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ವೈವಿಧ್ಯಮಯ ವ್ಯಕ್ತಿತ್ವ. ಅವರ ಅನಿರೀಕ್ಷಿತ ಅಗಲಿಕೆ ನನಗೆ ಆಘಾತ ತಂದಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಮಾತು ಕಠಿಣವಾದರೂ, ಹೃದಯ ಮಾತ್ರ ಮೃದು. ಕೆಳವರ್ಗದ ಜನರ ಬಗೆಗೆ ಇದ್ದ ಅವರ ಪ್ರೀತಿ ಅಪಾರ. ಅಂತಹ ಉದಾತ್ತ ಗುಣದ ವ್ಯಕ್ತಿ ಕಳೆದುಕೊಂಡು ಜಿಲ್ಲೆ ಬಡವಾಗಿದೆ ಎಂದರು.
ಅಂಬರೀಶ್ ಅವರದು ಸಾಯುವ ವಯಸ್ಸಲ್ಲ. ಇನ್ನೂ ಹತ್ತಾರು ವರ್ಷ ಬದುಕಿ ಬಾಳಬೇಕಿತ್ತು. ಜಿಲ್ಲೆಯ ಜನರಿಗೆ ಅವರೆಂದರೆ ಎಲ್ಲಿಲ್ಲದ ಅಭಿಮಾನದ ಹುಚ್ಚು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಜಿಲ್ಲೆಯ ಜನತೆಗೆ ಹಾಗೂ ಅಭಿಮಾನಿಗಳಿಗೆ ಆ ದೇವರು ನೀಡಲಿ ಎಂದು ನೊಂದು ನುಡಿದರು.

ನಾವಿಬ್ಬರು ಒಂದೇ ಊರಿನವರು: ನಾವಿಬ್ಬರೂ ಒಂದೇ ಊರಿನವರು. ಸಂಬಂಧಿಕರು. ಆದರೆ ನಾವು ರಾಜಕೀಯದಲ್ಲಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ಎಂದಿಗೂ ನಮ್ಮ ನಡುವೆ ಯಾವುದೇ ವೈಮನಸ್ಸಿರಲಿಲ್ಲ. ಉತ್ತಮ ಬಾಂಧವ್ಯವಿತ್ತು. ಅವರ ಹಾಗೂ ನನ್ನ ಸಂಬಂಧ ಎಂದಿಗೂ ದೂರವಾಗಿರಲಿಲ್ಲ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಊರಿಗೆ ಬಂದಿದ್ದ ಅವರು ನನ್ನೊಡನೆ ಮತ ಚಲಾಯಿಸಿದ್ದರು. ಬಳಿಕ ನಮ್ಮ ಮನೆಗೆ ಬಂದು ನನ್ನ ಜೊತೆಯಲ್ಲಿ ಮಾತುಕತೆ ನಡೆಸಿ ಊಟ ಮಾಡಿ ತೆರಳಿದ್ದರು. ಅವರು ನನ್ನ ಮೇಲಿಟ್ಟಿದ್ದ ಪ್ರೀತಿ ಹಾಗೂ ಬಾಂಧವ್ಯ ಮರೆಯುವಂತಿಲ್ಲ ಎಂದು ಭಾವುಕರಾಗಿ ನುಡಿದರು.

ದೊಡ್ಡರಸಿನಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯಾವಳಿಗೆ ಗ್ರಾಮಸ್ಥರು ಅವರನ್ನು ಆಹ್ವಾನಿಸಿದ್ದರು. ಆ ವೇಳೆ ಸಾರಿಗೆ ಸಚಿವನಾಗಿದ್ದ ನನ್ನನ್ನು ಅದ್ಧೂರಿಯಾಗಿ ಸನ್ಮಾನಿಸಬೇಕೆಂಬ ವಿಚಾರ ಪ್ರಸ್ತಾಪಿಸಿದ್ದರು. ಆದರೆ ಅನಾರೋಗ್ಯದ ಕಾರಣ ಅಂದು ಅವರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಇದರೊಡನೆ ನಾನು ಅಂಬರೀಶ್ ಅವರನ್ನು ಹುಟ್ಟೂರಿನಲ್ಲಿ ದೊಡ್ಡ ಸಮಾರಂಭ ಏರ್ಪಡಿಸಿ ಸನ್ಮಾನಿಸಬೇಕು ಎಂಬ ಹಂಬಲ ಹೊಂದಿದ್ದೆ. ಆದರೆ ಇಬ್ಬರ ಹಂಬಲವೂ ಈಡೇರಲಿಲ್ಲ ಎಂದು ನೋವು ತೋಡಿಕೊಂಡರು.

Translate »