ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ, ಅದು ನನ್ನದಲ್ಲ…
ಮೈಸೂರು

ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ, ಅದು ನನ್ನದಲ್ಲ…

March 8, 2019

ಮಳವಳ್ಳಿ: ಅತಿಥಿ ಸತ್ಕಾರ ಏನು ಎಂದು ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ. ದಿನದ 24 ಗಂಟೆ ಅತಿಥಿ ಸತ್ಕಾರ ಮಾಡಿರುವವರು ಅಂಬರೀಷ್. ಸಚಿವ ಡಿ.ಸಿ.ತಮ್ಮಣ್ಣನವರು ಎಷ್ಟು ಸಲ ನಮ್ಮ ಮನೆಗೆ ಬಂದಿದ್ದಾರೆ, ಎಷ್ಟು ನೀರು ಕುಡಿದಿದ್ದಾರೆ, ಊಟ ಮಾಡಿದ್ದಾರೆ, ನಾವು ಎಷ್ಟು ಸಲ ಅವರ ಮನೆಗೆ ಹೋಗಿದ್ದೇವೆ ಎಂಬುದನ್ನು ಅವರ ಕುಟುಂಬದವರೇ ಹೇಳಲಿ ಎನ್ನುವ ಮೂಲಕ ಸುಮಲತಾ ಅವರು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಟಾಂಗ್ ನೀಡಿದರು.

ಇಂದು ಬೆಳಿಗ್ಗೆ ಮಳವಳ್ಳಿಗೆ ಆಗಮಿಸಿದ ಸುಮಲತಾ ಅವರನ್ನು ಅಂಬರೀಷ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ಕಾಲೇಜಿನ ಬಳಿಯಿಂದ ಬೈಕ್ ರ್ಯಾಲಿ ಮೂಲಕ ಮೆರವಣಿಗೆಯಲ್ಲಿ ಪಟ್ಟಣದ ರೈತ ಸಭಾಂಗಣಕ್ಕೆ ಕರೆದೊಯ್ದರು. ಅಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸುಮಲತಾ ಮಾತನಾಡಿದರು.

ಅಂಬರೀಷ್ ಹೆಸರು ಹೇಳಿಕೊಂಡು ಯಾರ್ಯಾರು ಏನೇನು ಆಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆ ವಿಚಾರ ಇಲ್ಲಿ ಹೇಳಲು ನನಗೆ ಇಷ್ಟವಿಲ್ಲ. ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ. ಮಾತನಾಡದೇ ಇರುವುದು ನನ್ನ ಸಂಸ್ಕಾರ. ನಾನು ಅಂಬರೀಷ್ ಮಾರ್ಗದರ್ಶನದಲ್ಲೇ ನಡೆಯುತ್ತೇನೆ. ಅಂಬಿ ಇದ್ದಾಗ ಇವರುಗಳು ಹೇಗೆಲ್ಲಾ ಇದ್ದರು, ನಮ್ಮ ಮನೆಗೆ ಯಾರು ಬರುತ್ತಿದ್ದರು, ಯಾರ ಮನೆಗೆ ನಾವು ಹೋಗುತ್ತಿದ್ದೆವು ಎಂಬುದೂ ಎಲ್ಲರಿಗೂ ಗೊತ್ತಿದೆ ಎಂದರು.

ನಾನೂ ಕೂಡ ಅವರ ಮನೆಯ ಸೊಸೆಯೇ. ನಾನೇದರೂ ತಪ್ಪು ಮಾಡಿದ್ದರೆ ಅದನ್ನು ನೇರವಾಗಿ ನನ್ನ ಬಳಿಯೇ ಹೇಳಬಹುದು. ತಪ್ಪು ಇದ್ದರೆ ತಿದ್ದಿಕೊಳ್ಳುತ್ತಿದ್ದೆ. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ.

ಬಣ್ಣ ಹಚ್ಚುವ ಸಿನಿಮಾದವರನ್ನು ನಂಬಬೇಡಿ ಎಂದು ತಮ್ಮಣ್ಣ ಹೇಳಿದ್ದಾರಲ್ಲಾ, ಈ ಮಾತನ್ನು ಯಾರಿಗೆ ಹೇಳಿದ್ದಾರೆ ಅವರನ್ನೇ ಕೇಳಿ. ಬಣ್ಣ ಹಚ್ಚುವವರು ಬೇರೆ ಯಾರೂ ಸ್ಪರ್ಧೆ ಯಲ್ಲಿಲ್ಲವೇ? ನಾನೊಬ್ಬಳೇ. ಬಣ್ಣ ಹಚ್ಚಿರುವ ಕಲಾವಿದೆಯೇ? ನಿಖಿಲ್ ಕೂಡ ಸಿನಿಮಾದವರು. ಬಹುಷಃ ತಮ್ಮಣ್ಣ ಅವರ ಹೇಳಿಕೆ ನಿಖಿಲ್‍ಗೆ ಅನ್ವಯಿಸಬಹುದು ಎಂದು ಸುಮಲತಾ ಎದಿರೇಟು ನೀಡಿದರು.

ಅಂಬರೀಷ್ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದವರು. ಅವರು ಇದ್ದಾಗ ಸಂಬಂಧಿಕರು ಎಂದು ಹೇಳಿಕೊಂಡು ಮನೆಗೆ ಬರುತ್ತಿದ್ದವರು, ಅಂಬಿ ಮೃತರಾಗಿ ಮೂರು ತಿಂಗಳಾಗಿದ್ದರೂ ಈವರೆವಿಗೂ ಒಂದು ಫೋನ್ ಕೂಡ ಮಾಡಲಿಲ್ಲ ಎಂದು ಡಿ.ಸಿ.ತಮ್ಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Translate »