ತಾಲೂಕು ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆಗೆ ನಿರ್ಧಾರ
ಮೈಸೂರು

ತಾಲೂಕು ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆಗೆ ನಿರ್ಧಾರ

May 21, 2019

ಬೆಂಗಳೂರು: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ದೂರದಿಂದ ಬಂದ ರೈತರು ಮತ್ತು ಸಾರ್ವಜನಿಕರು ಬಸ್ ಇಳಿದ ನಂತರ ಕಚೇರಿಯಿಂದ ಕಚೇರಿಗೆ ಅಲೆಯುವು ದನ್ನು ತಪ್ಪಿಸಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಹೊಂದಿ ರುವ ಬಹುಮಹಡಿ ಕಟ್ಟಡಗಳನ್ನು ಪ್ರಾರಂಭಿಸಲಿದೆ.

ಬಹುತೇಕ ತಾಲೂಕುಗಳಲ್ಲಿ ಕೆಲವು ಇಲಾಖೆಗಳಿಗೆ ಕಚೇರಿಗಳೇ ಇರುವುದಿಲ್ಲ. ಅಂತಹ ಅಧಿಕಾರಿಗಳು ಎಲ್ಲಿಯೂ ಕುಳಿತು ಕೆಲಸ ಮಾಡಬೇಕು. ಅವರನ್ನು ಹುಡುಕಲು ಸಾರ್ವಜನಿಕರಿಗೂ ಸಾಧ್ಯವಾಗುವುದಿಲ್ಲ.

ಒಂದಡೆ ರೈತರಿಗೂ ಅನುಕೂಲವಾಗಬೇಕು, ಮತ್ತೊಂ ದೆಡೆ ಸಾರಿಗೆ ಸಂಸ್ಥೆಗೂ ಲಾಭ ತರುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬಹುಮಹಡಿ ಕಟ್ಟಡದಲ್ಲಿ ಮೊದ ಲನೇ ಮಹಡಿಯಲ್ಲಿ ಉಪಾಹಾರ ಮಂದಿರ ಮತ್ತಿತರ ಸೌಲಭ್ಯ ಕಲ್ಪಿಸುವುದು, ನಂತರದ ಮಹಡಿಗಳಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡ ಸರ್ಕಾರಿ ಕಚೇರಿಗಳು ಇರಲಿವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಮೂರು ಜಿಲ್ಲಾ ಕೇಂದ್ರ ಸೇರಿ ದಂತೆ 50 ತಾಲೂಕುಗಳಲ್ಲಿ ಬಸ್ ನಿಲ್ದಾಣದಲ್ಲೇ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಈ ನೂತನ ಯೋಜನೆಗೆ 250 ಕೋಟಿ ರೂ.ಗಳ ಆರ್ಥಿಕ ನೆರವು ನೀಡುವಂತೆ ಸರ್ಕಾರವನ್ನು ಕೋರಲಾಗಿದೆ ಎಂದರು. ಸರ್ಕಾರಿ ಕೆಲಸಕ್ಕೆಂದು ತಾಲೂಕು ಕೇಂದ್ರಗಳಿಗೆ ಬರುವವರು ಆಟೋ, ಮತ್ತಿತರ ಸೌಲಭ್ಯಗಳಿಗೆ ಪರದಾಡಬಾರದು. ಅವರು ಬಸ್ ಇಳಿದ ಕೂಡಲೇ ಹೋಟೆಲ್ ಹಾಗೂ ಸರ್ಕಾರಿ ಕಚೇರಿಗಳು ಒಂದೇ ಕಟ್ಟಡದಲ್ಲಿ ಇದ್ದರೆ ನಿರಾಯಾಸವಾಗಿ ಕೆಲಸ ಮಾಡಿಕೊಂಡು ಹಿಂತಿರುಗ ಬಹುದು ಎಂದು ಅವರು ವಿವರ ನೀಡಿದರು. ಹೊಸ ತಾಲೂಕುಗಳು ಇದರಲ್ಲಿ ಸೇರಿರುತ್ತವೆ ಎಂದ ಅವರು,ಹೀಗೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ತನ್ನದೇ ಆದ ಆದಾಯ ಮೂಲವನ್ನು ಹೊಂದಿದಂತಾಗುತ್ತದೆ.ಆ ಮೂಲಕ ಬಸ್ ನಿಲ್ದಾಣ ಗಳ ನಿರ್ವಹಣೆ ಕಾರ್ಯವೂ ಸುಲಭವಾಗಲಿದೆ ಎಂದರು.

ಕಟ್ಟಡ, ಗಾರ್ಮೆಂಟ್ ಫ್ಯಾಕ್ಟರಿಗಳ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು ತ್ರೈಮಾಸಿಕ,ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪಾಸುಗಳನ್ನು ನೀಡಲು ಇಲಾಖೆ ಮುಂದಾಗಿದೆ. ಹೀಗೆ ರಿಯಾಯ್ತಿ ದರದ ಪಾಸುಗಳನ್ನು ನೀಡಿದರೆ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡಿಕೊಟ್ಟಂತೆಯೂ ಆಗುತ್ತದೆ. ಸಾರಿಗೆ ಸಂಸ್ಥೆಗೆ ನಿರ್ದಿಷ್ಟ ಪ್ರಮಾಣದ ಹಣ ಮುಂಚಿತವಾಗಿ ಸಿಕ್ಕಂತೆಯೂ ದೊರೆಯುತ್ತದೆ.

ಖಾಸಗಿ ಬಸ್‍ಗಳ ಜೊತೆ ಪೈಪೋಟಿ ನಡೆಸಲು ಇಲಾಖೆಯಡಿಯಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಸುವಿಹಾರಿ ಬಸ್‍ಗಳು ಇನ್ನುಮುಂದೆ ಹೊಸ ವಿನ್ಯಾಸದ ಅತ್ಯಾಕರ್ಷಕದಿಂದ ಕೂಡಿರುತ್ತದೆ. ಬಸ್‍ಗಳನ್ನು ನೋಡುತ್ತಿದ್ದಂತೆಯೇ ಪ್ರಯಾಣಿಕರು ನಮ್ಮ ಬಸ್‍ಗಳಲ್ಲಿ ಪ್ರಯಾಣ ಮಾಡಲು ಹಾತೊರೆಯಬೇಕು. ಆ ನಿಟ್ಟಿನಲ್ಲಿ ಹೊಸ ವಿನ್ಯಾಸಗಳನ್ನೊಳಗೊಂಡ 3200 ಬಸ್‍ಗಳನ್ನು ಖರೀದಿ ಮಾಡಲಾಗುತ್ತದೆ. ಈ ಬಸ್‍ಗಳಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಬಸ್ಸುಗಳ ಬಿಡಿ ಭಾಗಗಳನ್ನು ಖರೀದಿಸುವ ವಿಷಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಬಿಡಿ ಭಾಗಗಳ ತಯಾರಕರನ್ನೇ ಬಿಡ್ ಮೂಲಕ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.

ಸದ್ಯದ ಸ್ಥಿತಿಯಲ್ಲಿ ಬಸ್ ನಿರ್ಮಾಣ ಕಂಪನಿಗಳ ಹೆಸರಿನಲ್ಲಿ ಖರೀದಿ ಪ್ರಕ್ರಿಯೆ ನಡೆಯು ತ್ತಿದೆ.ಆದರೆ ವಾಸ್ತವದಲ್ಲಿ ಅದು ಸಿಟಿ ಮಾರುಕಟ್ಟೆಯಲ್ಲಿನ ತಯಾ ರಕರಿಂದಲೇ ಬರುತ್ತದೆ.ಹೀಗಾಗಿ ಇನ್ನು ಮುಂದೆ ಕಂಪನಿಗಳ ಹೆಸರಿನಲ್ಲಿ ಖರೀದಿ ಮಾಡುವ ಬದಲು ಉತ್ಪಾದಕರಿಂದಲೇ ಖರೀದಿ ಮಾಡುವುದಾಗಿ ಅವರು ಹೇಳಿದರು. ಬಸ್ಸಿನ ಟೈರುಗಳು ಬಹುಕಾಲ ಬಾಳಿಕೆ ಬರುತ್ತಿಲ್ಲ.ಇದನ್ನು ಗಮನದಲ್ಲಿಟ್ಟುಕೊಂಡು ಟೈರ್ ಉತ್ಪಾದನಾ ಘಟಕಗಳನ್ನೂ ಸಂಸ್ಥೆಯ ಪ್ರಾಂಗಣದಲ್ಲಿಯೇ ನಿರ್ಮಿಸಲಾಗುವುದು ಎಂದ ಅವರು,ಬಸ್ಸಿನ ಬಿಡಿ ಭಾಗಗಳ ತಯಾರಿಕೆ ಮಾಡುವವರಿಗೂ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು. ಐಟಿ ಯೂನಿಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಿದ್ದಲ್ಲದೆ ತನಿಖೆಗೂ ಆದೇಶ ನೀಡಲಾಗಿದೆ.ವಿವಿಧ ರೀತಿಯ ಅವ್ಯವಹಾರಗಳಲ್ಲಿ ಭಾಗಿಯಾದ ಎಪ್ಪತ್ತೈದಕ್ಕೂ ಹೆಚ್ಚು ಮಂದಿ ನೌಕರರು,ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.

ಖಾಸಗಿ ಬಸ್ಸುಗಳಂತೆಯೇ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹೊಸ ಬಸ್ಸುಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಿಡುಗಡೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು,ಖಾಸಗಿಯವರಿಗೆ ಪೈಪೋಟಿ ನೀಡಲು ಅಗತ್ಯವಾಗುವಂತೆ ಸಂಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ವಿವರಿಸಿದರು.

Translate »