ಕುಶಾವರ ಶಾಲೆ ಅಂಗಳದಲ್ಲಿ 50 ಗಿಡ ನೆಟ್ಟ ಮಕ್ಕಳು-ಗಣ್ಯರು
ಹಾಸನ

ಕುಶಾವರ ಶಾಲೆ ಅಂಗಳದಲ್ಲಿ 50 ಗಿಡ ನೆಟ್ಟ ಮಕ್ಕಳು-ಗಣ್ಯರು

June 12, 2019

ಬೇಲೂರು: ಅರಣ್ಯ-ಪರಿಸರ ಕುರಿತು ಶಾಲಾ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಿ, ಗಿಡ-ಮರಗಳನ್ನು ಬೆಳೆಸುವ ಹವ್ಯಾಸ ಬೆಳೆಸಬೇಕು ಎಂದು ಹಾಸನ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಜೆ.ಜಿ. ಹೇಳಿದರು.

ತಾಲೂಕಿನ ಕುಶಾವರ ಗ್ರಾಮದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್, ಸಿರಿಗನ್ನಡಂ ವೇದಿಕೆ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಶಾಲೆ ಆವರಣ ಏರ್ಪಡಿಸಿದ್ದ ವನಮಹೋತ್ಸವ ಉದ್ಘಾಟಿಸಿದ ಅವರು, ಅರಣ್ಯ ಪ್ರದೇಶಗಳನ್ನು ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಆ ಮೂಲಕ ಪರಿಸರ ರಕ್ಷಣೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ ಎಂದರು.

ಅರಣ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ `ಸಾರ್ವಜನಿಕ ಸಹಯೋಗದ ಅರಣ್ಯೀಕರಣ ಯೋಜನೆ’ ಹಾಗೂ `ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಜಾರಿಗೆ ತಂದಿದೆ. ಸಂಘ- ಸಂಸ್ಥೆಗಳೂ ಕೈಜೋಡಿಸಿ ಪರಿಸರ ಉಳಿಸಲು ಶ್ರಮಿಸಬೇಕು ಎಂದು ಸಾಮಾಜಿಕ ಅರಣ್ಯ ವಲಯಾಧಿಕಾರಿ ಶ್ವೇತಾ ಗಮನ ಸೆಳೆದರು.

ಸಿರಿಗನ್ನಡಂ ವೇದಿಕೆ ಅಧ್ಯಕ್ಷೆ ಆಶಾ, ಕಾರ್ಯದರ್ಶಿ ನಳಿನಾ, ಸಾಮಾಜಿಕ ಉಪ ಅರಣ್ಯಾಧಿಕಾರಿ ಕಾಂತರಾಜು, ಶಿಕ್ಷಣ ಇಲಾಖೆಯ ಮೋಹನ್, ಶಿಕ್ಷಕ ವೃಂದದವರು, ಶಾಲಾ ಮಕ್ಕಳು ಜತೆಗೂಡಿ ಕುಶಾವರ ಸರ್ಕಾರಿ ಶಾಲೆ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.