ಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಕರ್ತವ್ಯ ವೇಳೆ ಮೊಬೈಲ್ ನಿಷೇಧ
ಮೈಸೂರು

ಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಕರ್ತವ್ಯ ವೇಳೆ ಮೊಬೈಲ್ ನಿಷೇಧ

November 12, 2018

ಮೈಸೂರು:  ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಸಾರಿಗೆ ಸಂಸ್ಥೆ ಮುಂದಾಗಿದ್ದು, ಕರ್ತವ್ಯದ ವೇಳೆ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸಿ ದರೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ನ.15ರಿಂದ ಬಿಎಂಟಿಸಿ ಬಸ್ ನಲ್ಲಿ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮೊಬೈಲ್‍ಗಳನ್ನು ಡಿಪೋಗಳ ಲಾಕರ್‍ನಲ್ಲಿಟ್ಟು ಹೋಗುವಂತೆ ಕಟ್ಟಪ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂ ರಿನಲ್ಲಿಯೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು 1 ವರ್ಷದ ಹಿಂದೆಯೇ ಜಾರಿಗೆ ತಂದಿರುವ ಮೊಬೈಲ್ ಬಳಕೆ ನಿಷೇಧ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಚಿಂತಿಸಿದ್ದಾರೆ.

ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಡಿಪೋಗಳಲ್ಲಿ 1200ಕ್ಕೂ ಹೆಚ್ಚು ಬಸ್ ಗಳಿದ್ದು, ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದನ್ನು 1 ವರ್ಷದ ಹಿಂದೆಯೇ ನಿರ್ಬಂಧಿಸಲಾಗಿತ್ತು. ಇದರಿಂದ ಶೇ.70ರಷ್ಟು ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದನ್ನು ಕೈಬಿಟ್ಟಿದ್ದರು. ಆದರೆ ಕೆಲವು ಚಾಲಕರು ಹಾಗೂ ನಿರ್ವಾಹಕರು ಕೆಲ ಸಂದರ್ಭಗಳಲ್ಲಿ ಮೊಬೈಲ್ ಬಳಸುತ್ತಿದ್ದರು. ಈ ಬಗ್ಗೆ ಪ್ರಯಾಣಿಕರು ಹಾಗೂ ಸಾರ್ವಜನಿ ಕರು ಪತ್ರ ಬರೆದು ದೂರು ನೀಡಿದ್ದರು. ಅದರಲ್ಲಿಯೂ ಬಿಎಂಟಿಸಿ ಬಸ್ ಚಾಲಕರು ಮೊಬೈಲ್ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು, ಇದರಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ. ಅಮಾಯಕರು ಬಿಎಂಟಿಸಿ ಬಸ್‍ಗಳಿಗೆ ಸಿಲುಕಿ ಬಲಿಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಸುತ್ತೋಲೆ ಹೊರಡಿ ಸಿದ್ದು, ನ.15ರಿಂದ ಕಡ್ಡಾಯವಾಗಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಎಲ್ಲಾ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ತೆರಳುವ ಮುನ್ನ ಮೊಬೈಲ್‍ಗಳನ್ನು ಡಿಪೋ ಲಾಕರ್‍ನಲ್ಲೇ ಇಡಬೇಕು ಎಂದು ಸೂಚಿಸಿದೆ. ಒಂದೊಮ್ಮೆ ಕರ್ತವ್ಯದ ವೇಳೆ
ಮೊಬೈಲ್ ಬಳಸುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಮೈಸೂರಿನಲ್ಲಿ ವರ್ಷದ ಹಿಂದೆಯೇ ಜಾರಿ: ಮೈಸೂರು ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಒಂದು ವರ್ಷದ ಹಿಂದೆಯೇ ಕರ್ತವ್ಯದ ವೇಳೆ ಮೊಬೈಲ್ ಬಳಕೆ ನಿಷೇಧಿಸಿದೆ. ಕೆಲವು ಚಾಲಕರು ಹಾಗೂ ನಿರ್ವಾಹಕರು ಮಾತ್ರ ಮೊಬೈಲ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಮೈಸೂರು ನಗರ ವಿಭಾಗದಲ್ಲಿ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋಗಳಲ್ಲಿ ಒಟ್ಟು 450 ಬಸ್‍ಗಳಿದ್ದು, ಪ್ರತಿದಿನ 175 ಮಾರ್ಗಗಳಲ್ಲಿ ಆರು ಸಾವಿರ ಟ್ರಿಪ್‍ನಲ್ಲಿ ಸಂಚರಿಸುತ್ತವೆ. ಗ್ರಾಮಾಂತರ ವಿಭಾಗದ ಡಿಪೋಗಳಿಂದ ವಿವಿಧ ಜಿಲ್ಲೆಗಳಿಗೆ, ರಾಜ್ಯಗಳಿಗೆ ಪ್ರತಿದಿನ 700 ಬಸ್‍ಗಳು 650 ಮಾರ್ಗಗಳಲ್ಲಿ 2500 ಟ್ರಿಪ್‍ಗಳಲ್ಲಿ ಸಂಚರಿಸುತ್ತವೆ. ಮೊಬೈಲ್ ಬಳಕೆ ನಿರ್ಬಂಧ ಚಾಲ್ತಿಯಲ್ಲಿರುವುದರಿಂದ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರ ಹಿತಕಾಯುವುದ ಕ್ಕಾಗಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕಠಿಣ ಕ್ರಮ: ಕಳೆದ 1 ವರ್ಷದ ಹಿಂದೆಯೇ ಕರ್ತವ್ಯದ ವೇಳೆ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಕೆಲವೊಮ್ಮೆ ಮೊಬೈಲ್ ಬಳಸಿರುವುದು ಗಮನಕ್ಕೆ ಬಂದಿದ್ದು, ಆ ಚಾಲಕರು ಹಾಗೂ ನಿರ್ವಾಹಕರಿಗೆ ನೋಟಿಸ್ ನೀಡಲಾಗಿದೆ. ಕೆಲವು ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ತಪಾಸಣಾ ತಂಡದ ವತಿಯಿಂದಲೂ ಮೊಬೈಲ್ ಚೆಕ್ಕಿಂಗ್ ನಡೆಸಲಾಗುತ್ತದೆ. ಪದೆ ಪದೆ ನಿಯಮ ಉಲ್ಲಂಘಿಸಿ ಮೊಬೈಲ್ ಬಳಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಹೆಚ್.ಶ್ರೀನಿವಾಸ್ ಹೇಳಿದರು.

ವಿನಾಯಿತಿ ನೀಡಬೇಕು..: ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಸುವುದಕ್ಕೆ ಯಾವುದೇ ಚಾಲಕರು ಮುಂದಾಗುವುದಿಲ್ಲ. ನಮಗೂ ಹೆಂಡತಿ ಮಕ್ಕಳಿರುತ್ತಾರೆ. ದೂರದಿಂದ ಕರ್ತವ್ಯಕ್ಕೆ ಬಂದಿರುತ್ತೇವೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ನಮಗೆ ಸರಿಯಾಗಿ ರಜೆ ಮಂಜೂರು ಮಾಡುವುದಿಲ್ಲ. ವಾರಾಂತ್ಯ ರಜೆಯ ಸೌಲಭ್ಯವೂ ಸಿಗುವುದಿಲ್ಲ. ಒಮ್ಮೊಮ್ಮೆ ಒಂದು ವಾರವಾದರೂ ಕರ್ತವ್ಯದಿಂದ ಬಿಡುಗಡೆ ಮಾಡದೆ ಬಸ್ ಚಾಲನೆ ಮಾಡುವಂತೆ ಪೀಡಿಸುತ್ತಾರೆ. ಬಸ್‍ಗಳ ಸ್ಥಿತಿಯೂ ಉತ್ತಮವಾಗಿರುವುದಿಲ್ಲ. ಮಾರ್ಗ ಮಧ್ಯೆ ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿದರೆ ಜನರು ಚಾಲಕರನ್ನೇ ದೂಷಿಸುತ್ತಾರೆ. ಎಲ್ಲಾ ಚಾಲಕರು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನ ನೀಡುತ್ತಾರೆ. ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಹಾಗೂ ಬಿಡುವಿನ ವೇಳೆ ಮೊಬೈಲ್ ಬಳಸುವುದಕ್ಕಾದರೂ ವಿನಾಯಿತಿ ನೀಡಬೇಕು ಎಂದು ಗ್ರಾಮಾಂತರ ವಿಭಾಗದ ಬಸ್ ಚಾಲಕರೊಬ್ಬರು ಮೈಸೂರು ಮಿತ್ರನಿಗೆ ತಿಳಿಸಿದರು.

Translate »