ಇಂದು ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ
ಮೈಸೂರು

ಇಂದು ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ

November 12, 2018

ಮೈಸೂರು:  ಪ್ರತಿಷ್ಟಿತ ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೆಶಕರ ಆಯ್ಕೆಗೆ ಸೋಮವಾರ ಚುನಾ ವಣೆ ನಡೆಯಲಿದೆ. ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ಮಾಡಲಾಗುವುದು. ಸಂಜೆ ಸುಮಾರು 6 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಅಡಳಿತ ಮಂಡಳಿಯ ಒಟ್ಟು 17 ಸ್ಥಾನಗಳಲ್ಲಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 12 ಕ್ಷೇತ್ರಗಳಿಗೆ ಚುನಾವಣೆ ನಡೆಸ ಲಾಗುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 12 ಕ್ಷೇತ್ರಗಳಿಂದ 27 ಮಂದಿ ಸ್ಪರ್ಧಿಸಿದ್ದು, 587 ಅರ್ಹ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿಯಾದ ಮೈಸೂರು ಉಪವಿಭಾಗಾ ಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ.

ಅವಿರೋಧ ಆಯ್ಕೆ: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 5 ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ ಕ್ಷೇತ್ರಗಳಿಂದ ಅವಿರೋಧವಾಗಿ ನಿರ್ದೇಶಕರ ಆಯ್ಕೆಯಾಗಿದೆ. ತಿ.ನರಸೀಪುರ ಕ್ಷೇತ್ರದಿಂದ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಹಾಗೂ ಯಳಂದೂರು ಕ್ಷೇತ್ರದಿಂದ ವೈ.ಎಂ.ಜಯರಾಮು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹುಣಸೂರು ಕ್ಷೇತ್ರ ದಿಂದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಹಾಗೂ ಎನ್.ಮಹದೇವಪ್ಪ ನಾಮಪತ್ರ ಸಲ್ಲಿಸಿ ದ್ದರು. ಮಹದೇವಪ್ಪ ಅವರ ನಾಮಪತ್ರ ತಿರಸ್ಕøತಗೊಂಡ ಹಿನ್ನೆಲೆ ಯಲ್ಲಿ ಜಿ.ಡಿ.ಹರೀಶ್‍ಗೌಡ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಕೆ.ಆರ್.ನಗರ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ ವಿರುದ್ಧ ಸ್ಪರ್ಧೆಗಿಳಿದಿದ್ದ ಎಸ್.ಸಿದ್ದೇಗೌಡ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಹನೂರು ಶಾಸಕ ನರೇಂದ್ರ ವಿರುದ್ಧ ಸ್ಪರ್ಧೆಗಿಳಿದಿದ್ದ ಕೆ.ಸಿ.ಮಾದೇಶ್ ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆ ಯಲ್ಲಿ ಅಮಿತ್ ವಿ.ದೇವರಹಟ್ಟಿ ಹಾಗೂ ನರೇಂದ್ರ ಅವರು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

12 ನಿರ್ದೇಶಕರಿಗೆ ಚುನಾವಣೆ: ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘಗಳ ಮತ ಕ್ಷೇತ್ರ(1)- ನಂಜನಗೂಡಿನಿಂದ ಬಿ.ಎಸ್. ಮಹೇಶ್, ಬಿ.ಎನ್.ಸದಾನಂದ ಹಾಗೂ ವಿ.ಆರ್.ವಿಜಯ್ ಕುಮಾರ್, ಪಿರಿಯಾಪಟ್ಟಣದಿಂದ ಸಿ.ಎನ್.ರವಿ, ಬಿ.ಆರ್.ಸತೀಶ್ ಕುಮಾರ್ ಹಾಗೂ ಪುಟ್ಟರಾಜು, ಮೈಸೂರು ತಾಲೂಕಿನಿಂದ ಮಹ ದೇವಸ್ವಾಮಿ, ಎಂ.ಕುಮಾರ್, ನಟೇಶ್ ಹಾಗೂ ಎನ್.ಜೆ.ರವಿ ಕಾಂತ, ಹೆಚ್.ಡಿ.ಕೋಟೆಯಿಂದ ಕೆ.ಲೋಕೇಶ್ ಹಾಗೂ ಜಿ.ಸಿ. ಸಿಂಗೇಗೌಡ, ಗುಂಡ್ಲುಪೇಟೆಯಿಂದ ಎನ್.ಮಹದೇವಪ್ಪ ಹಾಗೂ ಎಂ.ಪಿ.ಸುನೀಲ್, ಚಾಮರಾಜನಗರದಿಂದ ಎಂ.ಪಿ.ತಮ್ಮಣ್ಣ, ಬಿ.ಜಿ.ನಾಗೇಂದ್ರ ಕುಮಾರ್ ಹಾಗೂ ಕೆ.ಎಂ.ಶಿವಶಂಕರ ಸ್ಪರ್ಧಾ ಕಣದಲ್ಲಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಗಳ ಮತ ಕ್ಷೇತ್ರ(2)ದಿಂದ ಕೆ.ಜಿ.ಮಹೇಶ್, ಪಿ.ಎನ್.ಚಂದ್ರಶೇಖರ್ ಹಾಗೂ ಸಿ.ಮಹೇಶ್, ಪಟ್ಟಣ ಸಹಕಾರಿ ಬ್ಯಾಂಕ್‍ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರ(3) ದಿಂದ ಎಸ್‍ಬಿಎಂ ಮಂಜು ಹಾಗೂ ಡಾ. ಎಂ.ಬಿ.ಮಂಜೇಗೌಡ, ಬಳಕೆದಾರರ ಸಹಕಾರ ಸಂಘಗಳು(ಕನ್‍ಸ್ಯೂಮರ್ಸ್) ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ (4)ದಿಂದ ಎಂ.ಮೀನಾಕ್ಷಿ, ಹೆಚ್.ಜೆ.ನಾಗ ಪ್ರಸಾದ್, ಪಿ.ಶ್ರೀಕಂಠಮೂರ್ತಿ ಸ್ಪರ್ಧಿಸಿದ್ದಾರೆ. ತಾಲೂಕು, ಜಿಲ್ಲೆ ಹಾಗೂ ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಹಾಗೂ ಬ್ಯಾಂಕ್‍ಗಳ ಕ್ಷೇತ್ರ(5) ದಿಂದ ಎಂಸಿಡಿಸಿಸಿ ಹಾಲಿ ಅಧ್ಯಕ್ಷ ಎಸ್.ಚಂದ್ರ ಶೇಖರ್, ಯು.ಎಸ್.ರಮೇಶ್, ಹೆಚ್.ಸುಬ್ಬಯ್ಯ, ಹಾಗೂ ಎಂ.ಎಸ್.ರವಿಶಂಕರ್, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹೊರತುಪಡಿಸಿ, ಉಳಿದ 6 ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ಸಹಕಾರ ಸಂಘಗಳ ಕ್ಷೇತ್ರ(6)ದಿಂದ ಎ.ಟಿ.ಸೋಮಶೇಖರ್, ಕೆ.ಪ್ರಸನ್ನಕುಮಾರ್, ಕೆ.ಎಸ್.ಕುಮಾರ್ ಹಾಗೂ ಬಿ.ಎಂ.ಮಹದೇವಸ್ವಾಮಿ, ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸಹಕಾರ ಸಂಘಗಳ ಕ್ಷೇತ್ರ(7)ದಿಂದ ಎಂ. ಶಿವಾ ನಂದಸ್ವಾಮಿ, ಎಸ್.ಎಂ.ಕೆಂಪಣ್ಣ, ಕೆ.ಎಂ.ಮಾದಪ್ಪ ಹಾಗೂ ಎಚ್.ಎಸ್.ನಂಜುಂಡ ಪ್ರಸಾದ್ ಚುನಾವಣಾ ಅಖಾಡದಲ್ಲಿದ್ದಾರೆ. ಬ್ಯಾಂಕ್‍ನ ಹುಣಸೂರು ಶಾಖೆಯಲ್ಲಿ ನಡೆದಿದ್ದ ಅವ್ಯವಹಾರದ ಹಿನ್ನೆಲೆಯಲ್ಲಿ ಬ್ಯಾಂಕ್‍ನ ಅಂದಿನ ವ್ಯವಸ್ಥಾಪಕ ನಿರ್ದೇಶಕ ಲಿಂಗಣ್ಣಯ್ಯ ಅವರನ್ನು ಆಡಳಿತ ಮಂಡಳಿ ಸೇವೆಯಿಂದ ಬಿಡುಗಡೆಗೆ ಸಹಕಾರ ಇಲಾಖೆ ಜಂಟಿ ನಿಬಂಧಕರು ತಡೆಯಾಜ್ಞೆ ನೀಡಿದ್ದರು. ಇದನ್ನು ಪ್ರಶ್ನಿಸಿ, ಬ್ಯಾಂಕ್‍ನ ಅಧ್ಯಕ್ಷ ಎಸ್.ಚಂದ್ರಶೇಖರ್ ಹೈಕೋರ್ಟ್ ಮೆಟ್ಟಲೇರಿದ್ದರು. ಆಗ ಸಹಕಾರ ಇಲಾಖೆಯ ಜಂಟಿ ನಿಬಂಧಕರ ಆದೇಶವನ್ನು ರದ್ದು ಮಾಡಿದ್ದಲ್ಲದೇ, ಚುನಾವಣೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದರೆ ಇದು ಗಮನಕ್ಕೆ ಬಾರದೆ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ಹಿಂಪಡೆತ ಪ್ರಕ್ರಿಯೆಗಳು ಮುಗಿದಿದ್ದ ಹಂತದಲ್ಲಿ ಸಹಕಾರ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ನಂತರ ಕೆಲ ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ನರೇಂದರ್ ಅವರು, ನಿಗಧಿತ ವೇಳಾಪಟ್ಟಿಯಂತೆಯೇ ಚುನಾವಣೆ ನಡೆಸಲು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »