ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು
ಮೈಸೂರು

ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು

November 12, 2018

ಮೈಸೂರು:  ಮೈಸೂರು ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ, ಮೈತ್ರಿ ಪಕ್ಷಗಳ ಕಸ ರತ್ತು ಮುಂದು ವರಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಕಿಂಗ್ಸ್‍ಕೋರ್ಟ್ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರ ಸಭೆ ಕರೆದಿದ್ದರು. ಆದರೆ ಕೆಲವು ಕಾರಣಗಳಿಂದ ನಾಳೆ(ನ.12) ಮಧ್ಯಾಹ್ನ 12ಕ್ಕೆ ಸಭೆ ಮುಂದೂಡಲಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ, ಜೆಡಿಎಸ್‍ಗೆ ಮೇಯರ್ ಸ್ಥಾನ ನೀಡಬೇಕೆಂಬುದು ಪಕ್ಷದ ಸ್ಥಳೀಯ ಪದಾಧಿಕಾರಿಗಳು, ನಗರ ಪಾಲಿಕೆ ಸದ ಸ್ಯರು, ಮುಖಂಡರ ಅಭಿಪ್ರಾಯವಾ ಗಿದೆ. ಆದ್ದರಿಂದ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್ ಗಮನಕ್ಕೆ ತರಲಾಗುವುದು. ನಂತರ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ರೀತಿಯ ಕಿತ್ತಾಟವಿಲ್ಲ. ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಲಾಗಿತ್ತು. ಆದರೆ ಮೇಯರ್, ಉಪ ಮೇಯರ್ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪ್ರಶ್ನೆಯೊಂ ದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಕಾಂಗ್ರೆಸ್ ಮುಖಂಡರು ಮಾತುಕತೆಗೆ ಬರಲಿದ್ದಾರೆ ಎನ್ನಲಾಗಿದ್ದು, ಅವರೊಂದಿಗೂ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ರಾತ್ರಿ ಕಿಂಗ್ಸ್‍ಕೋರ್ಟ್ ಹೋಟೆಲ್‍ನಲ್ಲೇ ಪಕ್ಷದ ಮುಖಂಡರು, ಪಾಲಿಕೆ ಸದಸ್ಯರ ಸಭೆ ನಡೆಸಿ ಚರ್ಚಿಸಿದ್ದರು. ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿಯುತ್ತೇವೆ. ಆದರೆ ಮಾತುಕತೆಯಲ್ಲಿ ಯಾವ ನಿರ್ಧಾರವಾಗುವುದೋ ನೋಡೋಣ ಎಂದು ಹೇಳಿದ್ದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದಲ್ಲಿ ಮೈಸೂರಿನ ಇಬ್ಬರು ಮಂತ್ರಿಗಳು ಜೆಡಿಎಸ್ ನವರೇ ಆಗಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್ 19 ಹಾಗೂ ಜೆಡಿಎಸ್‍ನ 18 ಸದಸ್ಯರಿದ್ದಾರೆ. ಹಾಗಾಗಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ. ಶಾಸಕ ತನ್ವೀರ್‍ಸೇಠ್ ಅವರದ್ದೂ ಇದೇ ಆಗ್ರಹವಾಗಿದೆ.

ಇತ್ತ ಜೆಡಿಎಸ್‍ನ ಸ್ಥಳೀಯ ಮುಖಂಡರು, ನಗರಪಾಲಿಕೆ ಸದಸ್ಯರು ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದು, ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ನ.17ರಂದು ಚುನಾವಣೆ ನಡೆಯಲಿದ್ದು, ಯಾವ ಪಕ್ಷದ, ಯಾವ ಕ್ಷೇತ್ರದ ಸದಸ್ಯ ಮೇಯರ್ ಗದ್ದುಗೆ ಏರಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.

Translate »