ಕಾವೇರಿ, ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ರಚನೆ
ಮೈಸೂರು

ಕಾವೇರಿ, ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ರಚನೆ

December 9, 2018

ಮೈಸೂರು: ರಾಜ್ಯ ಸರ್ಕಾರ ಕೆಆರ್‍ಎಸ್ ಉದ್ಯಾನವನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದರೆ, ಮೈಸೂರಿನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಅಣೆಕಟ್ಟೆಯ ಸಮೀ ಪದ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸೇರಿದಂತೆ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತ ವಾಗಿ ನಿಷೇಧಿಸುವುದು, ಡಿಸ್ನಿಲ್ಯಾಂಡ್ ಮಾದರಿಯ ಅಭಿವೃದ್ಧಿ ಹಾಗೂ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ವಿರೋಧಿಸು ವುದು ಸೇರಿದಂತೆ ಆರು ನಿರ್ಣಯಗಳನ್ನು ಕೈಗೊಂಡು ಸರ್ಕಾ ರದ ವಿರುದ್ಧ ಹೋರಾಟ ರೂಪಿಸಲು ವೇದಿಕೆ ಅಣಿಗೊಳಿಸಿದರು.

ಮೈಸೂರು-ಹುಣಸೂರು ಮುಖ್ಯ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಸಭಾಂಗಣದಲ್ಲಿ ಶನಿವಾರ `ಕೆಆರ್‍ಎಸ್ ಉಳಿಸಿ ಹೋರಾಟ ಸಮಿತಿ’ ಕರೆದಿದ್ದ ಕೆಆರ್‍ಎಸ್ ಉಳಿವಿಗಾಗಿ ಪೂರ್ವ ಭಾವಿ ಸಮಾಲೋಚನಾ ಸಭೆಯಲ್ಲಿ ರೈತ ಸಂಘ, ಪ್ರಗತಿಪರರು, ದಲಿತ ಸಂಘರ್ಷ ಸಮಿತಿ, ಸಿಪಿಐ, ಸಿಪಿಐ(ಎಂ), ಸ್ವರಾಜ್ ಇಂಡಿಯಾ, ಜನಪರ ಸಂಘಟನೆಗಳು, ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪಾಲ್ಗೊಂಡು ಅಣೆಕಟ್ಟೆಯಿಂದ ಎರಡು ಕಿ.ಮೀ ದೂರದಲ್ಲಿರುವ ಬೇಬಿಬೆಟ್ಟದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳವರು ಗಣಿಗಾರಿಕೆ ನಡೆಸುತ್ತಿದ್ದು, ಬೆಟ್ಟವನ್ನು ಕರಗಿಸುತ್ತಿದ್ದಾರೆ. ಅಲ್ಲದೆ ಸ್ಫೋಟಕ ಸಿಡಿಸುತ್ತಿರುವುದರಿಂದ ಅಣೆಕಟ್ಟೆಗೆ ಹಾನಿಯಾಗುತ್ತಿದೆ. ಇದರಿಂದ ಮುಂದಿನ ದಿನ ಗಳಲ್ಲಿ ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ಬೆಂಗಳೂರು ಸೇರಿದಂತೆ ಕಾವೇರಿ ನದಿಯ ದಡದಲ್ಲಿರುವ ನಗರಗಳು, ಪಟ್ಟಣಗಳ ನಿವಾಸಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದರು.

ತಲೆಯ ಮೇಲೆ ಬಾಂಬ್, ಕತ್ತಿ ತೂಗುತ್ತಿದೆ: ಸಭೆಯಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಕೃಷ್ಣ ರಾಜಸಾಗರದ ಕುಡಿಯುವ ನೀರಿನ ತಲೆಯ ಮೇಲೆ ಗಣಿ ಗಾರಿಕೆ ಕತ್ತಿ, ಬಾಂಬ್ ತೂಗುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿ ಸಮೂಹ, ಸಾಂಸ್ಕøತಿಕ ಚಳವಳಿಯನ್ನು ಮೇಳೈಸಿಕೊಂಡು ಹೋರಾಟ ನಡೆಸುವ ಅನಿವಾರ್ಯತೆಯಿದೆ. ಈ ಅಣೆಕಟ್ಟೆಯನ್ನು ಪ್ರಮುಖವಾಗಿ ರೈತರು, ವ್ಯವಸಾಯ, ಕುಡಿಯುವ ನೀರಿಗಾಗಿ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊದಲು ಕುಡಿ ಯುವ ನೀರು, ನಂತರ ವ್ಯವಸಾಯ ಅನ್ನುವಂತಾಗಿದೆ. ನೀರಿನ ತಲೆ ಮೇಲೆ ಗಣಿಗಾರಿಕೆಯ ಕತ್ತಿ, ಬಾಂಬ್ ತೂಗುತ್ತಿದೆ. ಮನೆ ಮನೆಗೆ ಈ ಸಮಸ್ಯೆ ಹೇಳಬೇಕಾಗಿದೆ. ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಾಂಸ್ಕøತಿಕ ಚಳವಳಿಯಲ್ಲಿ ಹೋರಾಟ ದೊಂದಿಗೆ ಮೇಳೈಸಿಕೊಂಡು ಸಾಗಬೇಕಿದೆ. ಇದರಲ್ಲಿ ನಾವು ಸಫಲತೆ ಕಾಣಬೇಕಾಗಿದೆ ಎಂದರು.

ಉಳಿಗಾಲವಿಲ್ಲ, ಎಲ್ಲವೂ ನಾಶವಾಗುತ್ತೆ: ಹಿರಿಯ ಹೋರಾಟ ಗಾರ ಪ.ಮಲ್ಲೇಶ್ ಮಾತನಾಡಿ, ಚಾಮಲಾಪುರದಲ್ಲಿ ಸ್ಥಾಪಿಸಲು ಹೊರಟಿದ್ದ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ನಡೆದ ಹೋರಾಟ ಮಾದರಿಯಲ್ಲಿಯೇ ಬೇಬಿ ಬೆಟ್ಟದ ಗಣಿ ಗಾರಿಕೆಯ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಯಿದೆ. ಕೆಆರ್‍ಎಸ್ ಸಮಸ್ಯೆ ಮನೆಯ ಹೊರಗೆ ಬಂದಿದೆ. ಮುಂದೆ ಮನೆಯೊಳಗೆ ಬರುವುದನ್ನು ಯಾರೂ ತಳ್ಳಿಹಾಕಲಾಗದು. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದರು.

ಇತ್ತೀಚೆಗೆ ಬೇಬಿ ಬೆಟ್ಟಕ್ಕೆ ಹೋಗಿ ಪರಿಶೀಲಿಸಿದಾಗ ಗಣಿಗಾರಿಕೆ ನಡೆಸುತ್ತಿರುವವರ ಕ್ರೌರ್ಯ ಗಮನಿಸಿದೆವು. ಬೆಟ್ಟದಿಂದ 2-3 ಕಿ.ಮೀನಲ್ಲಿ ಅಣೆಕಟ್ಟೆ ಹಾಗೂ ನೀರು ಕಾಣುತ್ತದೆ. ಬೇಬಿ ಬೆಟ್ಟದ ಬಳಿ 40-50 ಟೆಂಟ್ ಕಾಣುತ್ತವೆ. ಕಂಪನಿಗಳ ನಾಮ ಫಲಕ ಹಾಕಲಾಗಿದೆ. ಈ ಟೆಂಟ್‍ಗಳಲ್ಲಿ ಗಣಿಗಾರಿಕೆ ನಡೆಸುವ ದೊಡ್ಡ ಯಂತ್ರಗಳನ್ನು ನಿಲ್ಲಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ತಾತ್ಕಾಲಿಕ ವಾಗಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದ ರಿಂದ ಯಂತ್ರಗಳನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ ಕೀಯ ಒತ್ತಡಕ್ಕೆ ಒಳಗಾಗಿ ಮತ್ತೆ ಗಣಿಗಾರಿಕೆ ಆರಂಭವಾಗ ಬಹುದು. ಗಣಿಗಾರಿಕೆ ಹೊಸದೇನಲ್ಲ. ಬಳ್ಳಾರಿಯಲ್ಲಿ ಪ್ರಕೃತಿ ಯನ್ನೇ ನಾಶ ಮಾಡಿರುವುದನ್ನು ಕಾಣಬಹುದು. ಈಗ ಬೇಬಿ ಬೆಟ್ಟದಲ್ಲಿ ನಡೆದಿರುವ ಗಣಿಗಾರಿಕೆಯಲ್ಲಿ ಭೂ ಗರ್ಭವನ್ನೇ ಬಗೆದಿ ದ್ದಾರೆ. ಭೂ ತಾಯಿಯ ಎದೆ, ಹೊಟ್ಟೆ, ಕರುಳು, ತೊಡೆಯನ್ನು 200-330 ಅಡಿ ಬಗೆದು ಹಾಕಲಾಗಿದೆ. ಇದನ್ನು ತಡೆಯದಿದ್ದರೆ ಜಲಾಶಯಕ್ಕೆ ಅಪಾಯ ಶತಃಸಿದ್ಧ ಎಂದು ಆತಂಕ ವ್ಯಕ್ತಪಡಿಸಿದರು.

ಉರಿಯುವ ಬೆಂಕಿಯನ್ನು ತಡೆಯಬಹುದು, ನಂದಿಸ ಬಹುದು, ಆದರೆ, ಹರಿಯುವ ನೀರನ್ನು ತಡೆಯಲಾಗದು ಎನ್ನು ವುದಕ್ಕೆ ಪಕ್ಕದ ಕೊಡಗು, ಕೇರಳವನ್ನೇ ಕಾಣಬಹುದು. ಅಧಿ ಕಾರಶಾಹಿ, ರಾಜಕಾರಣಿಗಳ ವ್ಯವಸ್ಥಿತ ಪಿತೂರಿಯಿಂದ ನಡೆಯುವ ಈ ಗಣಿಗಾರಿಕೆ ತಡೆದು ಕೆಆರ್‍ಎಸ್ ಉಳಿಸಬೇಕಾಗಿದೆ ಎಂದರು.

ವಿವೇಚನೆ ಇಲ್ಲದ ಆಲೋಚನೆ: ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ವಿವೇಚನೆ ಇಲ್ಲದೆ ಪ್ರವೃತ್ತಿ ಹೆಚ್ಚಾಗಿ ರುವುದು ಇಂಥ ಯೋಜನೆಗಳು ತಲೆಗೆ ಬರಲಿದೆ. ಹೋರಾಟ ಇಲ್ಲದೆ ಸಮಸ್ಯೆ ಬಗೆಹರಿಯದು. ಹೋರಾಟ ಬದುಕು, ವಿರಾಮವೇ ಸಾವು. ಕೆಆರ್‍ಎಸ್ ಉಳಿವಿಗೆ ನಡೆಯುವ ದೊಡ್ಡಮಟ್ಟದ ಚಳ ವಳಿಯಾಗಬೇಕು. ಈ ಹೋರಾಟ ನಮ್ಮ ಉಳಿವಿನ ಪ್ರಶ್ನೆ, ಕೆಆರ್‍ಎಸ್ ಉಳಿವಿನ ಅಸ್ತಿತ್ವವಾಗಬೇಕಾಗಿದೆ ಎಂದು ತಿಳಿಸಿದರು.

ಹಠಕ್ಕೆ ಇಳಿದಿದ್ದಾರೆ: ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ಮಾತನಾಡಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಡಿಸ್ನಿಲ್ಯಾಂಡ್ ಮಾಡಿಯೇ ತೀರುತ್ತೇ ವೆಂದು ಹಠ ಹಿಡಿದು ಹೊರಟಿದ್ದಾರೆ. ನಾವು ಮಾಡುವ ಚಳ ವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ. ಮಂಡ್ಯದ ಜಿ.ಮಾದೇಗೌಡ, ಸಾಹಿತಿ ದೇವನೂರ ಮಹಾದೇವ ಅವರಂತಹವರು ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೂರಬೇಕು. ಆಗ ಸರ್ಕಾರವೇ ಅವರ ಬಳಿಗೆ ಬರುತ್ತದೆ ಎಂದರು.
ಆಯಾಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದವರು ಒಂದೊಂದು ಕನಸು ಕಾಣುತ್ತಾರೆ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಫಿಲ್ಮ್ ಸಿಟಿ ಮಾಡಲು ರೈತರ ಜಮೀನು ಸ್ವಾಧೀನಪಡಿಸಿಕೊಂಡರು. ಆದರೆ ಇದುವರೆಗೂ ಪರಿಹಾರ ಕೊಟ್ಟಿಲ್ಲ. ಈಗ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಆರ್‍ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಕನಸು ಕಾಣುವ ಮೂಲಕ ದೊಡ್ಡ ಸಮಸ್ಯೆ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಡಿಸ್ನಿಲ್ಯಾಂಡ್ ನೆಪದಲ್ಲಿ ಬೆಟ್ಟ ಖಾಲಿ: ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತ ನಾಡಿ, ಗಣಿಗಾರಿಕೆ ವಿರುದ್ಧ ನಿರಂತರ ಹೋರಾಟ ಮಾಡಿ ದ್ದರೂ ಅಕ್ರಮವಾಗಿ ನಡೆಯುತ್ತಲೇ ಇತ್ತು. ಈಗ ತಡೆಯಾ ಗಿದೆ. ಮತ್ತೆ ಆರಂಭಿಸಲು ಹುನ್ನಾರ ನಡೆಯುತ್ತಿದೆ. ಕನಕಪುರ ದಲ್ಲಿ ಬಂಡೆ ಖಾಲಿ ಮಾಡಿರುವ ನಾಯಕರು ಈಗ ಬೇಬಿ ಬೆಟ್ಟ ಖಾಲಿ ಮಾಡಲು ಡಿಸ್ನಿಲ್ಯಾಂಡ್ ನೆಪದಲ್ಲಿ ಬಂದಿದ್ದಾರೆ. ಮುಖ್ಯಮಂತ್ರಿಗಳು ಬೇಬಿ ಬೆಟ್ಟದ ವಿಚಾರ ಮಾತನಾಡಿದರೆ ವಿಷಯಾಂತರ ಮಾಡುತ್ತಾರೆ. ಡಿಸ್ನಿಲ್ಯಾಂಡ್ ನಿರ್ಮಾಣದಿಂದ 40ಸಾವಿರ ಉದ್ಯೋಗ ಸಿಗಲಿದೆ ಎನ್ನುತ್ತಾರೆ. ನಾವು ಬೇಬಿ ಬೆಟ್ಟದಲ್ಲೇ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆ ಕರೆ ಯೋಣ. ಅಲ್ಲಿಗೆ ಎಲ್ಲರನ್ನೂ ಸೇರಿಸಿ ಯೋಜನೆ ಅನಾಹುತದ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸ್ಥಳೀಯರನ್ನು ಹೋರಾಟ ದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಗ್ರಾ.ಪಂ.ನಲ್ಲಿ ನಿರ್ಣಯ ಅಗತ್ಯ: ರೈತÀ ಮಹಿಳಾ ಹೋರಾಟ ಗಾರ್ತಿ ಸುನಂದ ಜಯರಾಮ್ ಮಾತನಾಡಿ, ಕೆಆರ್‍ಎಸ್ ಅಣೆ ಕಟ್ಟೆಯಿಂದ ಬರೀ ಮನುಷ್ಯರಲ್ಲದೆ ಜೀವಚರ, ಪ್ರಾಣಿಪಕ್ಷಿ ಗಳಿಗೆ ಅನುಕೂಲವಾಗಿದೆ. ನಾವು ಕಾನೂನಾತ್ಮಕ ಹೋರಾಟ ಮಾಡುವುದರೊಂದಿಗೆ ಬೇಬಿ ಬೆಟ್ಟದ ಸುತ್ತಮುತ್ತಲೂ ಬರುವ ಎಂಟು ಗ್ರಾಪಂಗಳಲ್ಲಿ ನಿರ್ಣಯ ಕೈಗೊಳ್ಳುವಂತೆ ಮಾಡ ಬೇಕಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮಾಡುವ ರಾಜಕಾರಣದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಗಣಿಗಾರಿಕೆ, ಡಿಸ್ನಿಲ್ಯಾಂಡ್ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಸಂಶೋಧಕ ಪ್ರೊ.ಎನ್.ಎಸ್.ರಂಗರಾಜು ಅವರು, ಅಣೆಕಟ್ಟೆಯ ನಿರ್ಮಾಣ, ಕಾವೇರಿ ನದಿಯ ಹುಟ್ಟು, ವೈಶಿಷ್ಟ್ಯ, ರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪುಣಜ ನೂರು ದೊರೆಸ್ವಾಮಿ, ಜಿ.ಟಿ.ವೀರಪ್ಪ, ಗುರುಪ್ರಸಾದ್ ಕೆರೆಗೋಡು, ಹೆಚ್.ಜನಾರ್ಧನ್, ಹೊಸೂರು ಕುಮಾರ್, ಕೆ.ಆರ್.ಗೋಪಾಲ ಕೃಷ್ಣ, ಬನ್ನೂರು ಕೆ.ರಾಜು, ಅಭಿರುಚಿ ಗಣೇಶ್, ಸ್ಟ್ಯಾನ್ಲಿ, ಬೆಳಗೊಳ ಸುಬ್ರಹ್ಮಣ್ಯ, ಹೊಸಕೋಟೆ ಬಸವರಾಜು ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »