ಮೂಲೆಗುಂಪಾಗುವ ಭೀತಿಯಿಂದ  ಸಿಎಂ ಆಗಲು ಯಡಿಯೂರಪ್ಪ ತರಾತುರಿ
ಮೈಸೂರು

ಮೂಲೆಗುಂಪಾಗುವ ಭೀತಿಯಿಂದ  ಸಿಎಂ ಆಗಲು ಯಡಿಯೂರಪ್ಪ ತರಾತುರಿ

December 9, 2018

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಒಳಗೆ ಮುಖ್ಯಮಂತ್ರಿ ಹುದ್ದೆಗೇರದಿದ್ದರೆ ರಾಜ ಕೀಯವಾಗಿ ಮೂಲೆಗುಂಪು ಆಗುತ್ತೇನೆಂಬ ಕಾರಣದಿಂದ ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರಟಿದ್ದು, ಇದರಲ್ಲಿ ಅವರು ಸಫಲರಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಆಗದಿದ್ದರೆ, ಪಕ್ಷ ನನ್ನನ್ನು ನಗಣ್ಯ ಮಾಡುತ್ತದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಆಗಲು ಹರ ಸಾಹಸ ಮಾಡುತ್ತಿದ್ದಾರೆ ಎಂದರು. ವಯಸ್ಸಾಯಿತು, ಚುನಾವಣೆ ಮುಗಿದರೆ ನನ್ನನ್ನು ಯಾರೂ ರಾಜಕೀಯವಾಗಿ ಪರಿಗಣಿಸುವುದಿಲ್ಲ ಎಂಬ ಭ್ರಮೆ ಅವರಿಗೆ ಕಾಡುತ್ತಿದೆ. ಈ ದಿಸೆಯಲ್ಲಿ ಹೇಗಾದರೂ ಅಧಿಕಾರ ಹಿಡಿಯ ಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ, ಅದು ಸಾಧ್ಯವಾಗದು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ವನ್ನು ಪತನಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ, ಅದನ್ನು ಈಗಲೂ ಮುಂದುವರೆಸಿದ್ದಾರೆ. ಇದೇ ಕಾರಣಕ್ಕಾಗಿ ಡಿಸೆಂಬರ್ 22ರಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಕತೆ ಹೇಳುತ್ತಿದ್ದಾರೆ. ಈ ಕತೆಯನ್ನು ಅವರು ಆರು ತಿಂಗಳಿ ನಿಂದ ಹೇಳುತ್ತಿದ್ದಾರೆ. ಆದರೆ ಇದುವರೆಗೆ ಏನೂ ಆಗಿಲ್ಲ. ಮುಂದಿನ ದಿನಗಳಲ್ಲೂ ಸರ್ಕಾರಕ್ಕೇನೂ ಆಗುವುದಿಲ್ಲ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢಗಳಲ್ಲಿ ಗೆಲುವು ಸಾಧಿಸಲಿದೆ. ಉಳಿದಂತೆ ಮಿಜೋರಾಂ ಮತ್ತು ತೆಲಂಗಾಣದಲ್ಲಿ ಅತಂತ್ರ ಪರಿಸ್ಥಿತಿ ಇದೆ. ಏನೇ ಆದರೂ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರ ಲಿದ್ದು, ಕೇಂದ್ರದಲ್ಲಿರುವ ಮೋದಿ ಸರ್ಕಾರ ನೂರಕ್ಕೆ ನೂರು ಪರ್ಸೆಂಟ್ ಅಧಿಕಾರ ಕಳೆದುಕೊಳ್ಳಲಿದೆ ಎಂದರು.

ಕರ್ನಾಟಕದ ಉಪ ಚುನಾವಣೆ ಪಂಚ ರಾಜ್ಯಗಳ ಚುನಾ ವಣೆ ಮೇಲೆ ಒಂದಷ್ಟು ಪರಿಣಾಮ ಬೀರಿದೆ. ಹಾಗೆಯೇ ಪಂಚ ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಇದರಲ್ಲಿ ಯಾವ ಅನು ಮಾನವೂ ಬೇಡ ಎಂದವರು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 35 ಸಾವಿರ ಕೋಟಿ ರೂ.ಗಳ ವೆಚ್ಚದ ಲೆಕ್ಕ ಸರಿ ಹೊಂದುತ್ತಿಲ್ಲ. ಹೀಗಾಗಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮಾಡುತ್ತಿರುವುದು ಬರೀ ಅಪಪ್ರಚಾರ ಎಂದರು.
ಸರ್ಕಾರ ಎಲ್ಲ ವರ್ಷಗಳಲ್ಲೂ ಇಟ್ಟ ಹಣವನ್ನು ಬಳಕೆ ಮಾಡಲು ಆಗುವುದಿಲ್ಲ. ಇದು ನನ್ನ ಕಾಲದಲ್ಲಿ ಮಾತ್ರವಲ್ಲ, ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರ ಕಾಲದಲ್ಲೂ ನಡೆದಿದೆ.ನನ್ನ ಕಾಲದಲ್ಲೂ ನಡೆದಿದೆ. ಈಗಲೂ ನಡೆಯುತ್ತದೆ. ಮುಂದಿನ ಸರ್ಕಾರ ಬಂದಾಗಲೂ ನಡೆಯುತ್ತದೆ ಎಂದರು.

ಹಾಗೆ ನೋಡಿದರೆ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ 22,187 ಕೋಟಿ ರೂ.ಗಳಷ್ಟು ಹಣ ಹೊಂದಿಕೆಯಾಗುತ್ತಿರಲಿಲ್ಲ. ಅದೇ ರೀತಿ ಸದಾ ನಂದಗೌಡರು ಸಿಎಂ ಆಗಿದ್ದ ಕಾಲದಲ್ಲಿ ಇದು ಹೆಚ್ಚಾ ಯಿತು. ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಇದು 38,443 ಕೋಟಿ ರೂ.ಗಳಿಗೆ ಏರಿತು. ನಾನು ಮುಖ್ಯಮಂತ್ರಿಯಾದ ನಂತರ ಇದರ ಪ್ರಮಾಣ ಕಡಿಮೆಯಾಗುತ್ತಾ ಬಂದು ಅನುಕ್ರಮವಾಗಿ ಶೇಕಡ 39, 17 ಹಾಗೂ 19ಕ್ಕೆ ಇಳಿಯಿತು. ಸಹಜವಾಗಿ ಸಿಎಜಿ ವರದಿಯಲ್ಲಿ ಇದನ್ನು ನಮೂದಿ ಸುತ್ತಾರೆ ಎಂದು ಸಮರ್ಥಿಸಿಕೊಂಡರು. ಬಿಜೆಪಿಯವರು ತಮ್ಮ ಕಾಲದಲ್ಲಿ ಏನಾಯಿತು ಅನ್ನುವುದನ್ನು ಮುಚ್ಚಿಟ್ಟು 2016-17ರ ಸಿಎಜಿ ವರದಿ ಮಾತ್ರ ಮುಂದಿಡುತ್ತಿದ್ದಾರೆ, ಈ ವಿಷಯದಲ್ಲಿ ಬಿಜೆಪಿಯವರು ದಡ್ಡರೇನಲ್ಲ. ಹಾಗಂ ತಲೇ ವಸ್ತುಸ್ಥಿತಿ ಮುಚ್ಚಿಟ್ಟು ಅಪಪ್ರಚಾರ ನಡೆಸುತ್ತಿದ್ದಾರೆ.

Translate »