ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ
ಮೈಸೂರು

ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ

January 23, 2019

ತುಮಕೂರು: ಸೋಮವಾರ ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಮೂರು ದಶಕಗಳ ಹಿಂದೆಯೇ ಜಾಗ ನಿಗದಿಯಾಗಿ, ಸಮಾಧಿ ಭವನವನ್ನು ನಿರ್ಮಿಸಲಾಗಿದೆ. 1982ರಲ್ಲೇ ಕಾಯಕ ಯೋಗಿಯ ಸಮಾಧಿಗೆ ಸ್ಥಳ ನಿಗದಿ ಮಾಡಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ಸಮಾಧಿ ಭವನವನ್ನು ನಿರ್ಮಿಸಲಾಗಿದೆ. ಶ್ರೀ ಮಠದ ಆವರಣದಲ್ಲಿದ್ದ ಆಲದ ಮರ ಕಡಿದು ಭವನ ನಿರ್ಮಿಸಲು ತೀರ್ಮಾನಿಸಲಾಗಿತ್ತು.

ಆದರೆ ಶ್ರೀಗಳು ಆಲದಮರ ಕಡಿಯಲು ಒಪ್ಪಲಿಲ್ಲ. ಇದರಿಂದ ಈ ಸ್ಥಳ ನೆನೆಗುದಿಗೆ ಬಿದ್ದಿತು. ವಿಸ್ಮಯ ಎಂಬಂತೆ ಕೆಲ ತಿಂಗಳ ಅಂತರದಲ್ಲಿ ಬಾರೀ ಬಿರುಗಾಳಿ ಮಳೆಗೆ ಸಿಲುಕಿದ ಈ ಆಲದ ಮರ ನೆಲಕ್ಕುರುಳಿತು. ನಂತರ ಭವನ ನಿರ್ಮಾಣದ ಹಾದಿ ಸುಲಲಿತವಾಯಿತು. 1982 ರಲ್ಲೇ ಶ್ರೀ ಶಿವಕುಮಾರಸ್ವಾಮಿಗಳ ಇಚ್ಛೆಯಂತೆ

ಕನಕಪುರ ದೇಗುಲ ಮಠದ ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಶಿವಕುಮಾರ ಸ್ವಾಮಿಜಿ ಹಾಗೂ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಇಬ್ಬರೂ ಸಿದ್ದಗಂಗಾ ಮಠದ ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದವರು ಎಂಬುದು ವಿಶೇಷ. ಅಂದು ಆರಂಭಗೊಂಡಿದ್ದ ಸಮಾಧಿ ಭವನದ ಕಾಮಗಾರಿ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಭವನದ ನಾಲ್ಕೂ ಮೂಲೆಗಳಲ್ಲೂ ಕರಡಿಗೆ ರೂಪವನ್ನು ಕೆತ್ತಲಾಗಿದ್ದು, ಅಮೃತ ಶಿಲೆಯಿಂದ ನಿರ್ಮಿಸಲಾಗಿದೆ. ಇದೀಗ ಇದೇ ಭವನದ ಗರ್ಭಗುಡಿಯಲ್ಲಿ ಶ್ರೀಗಳ ಕ್ರಿಯಾ ಸಮಾಧಿಯನ್ನು ನೆರವೇರಿಸಲಾಯಿತು.

Translate »