ಚಾಮರಾಜನಗರ: ಮೂರು ದಿನ ಗಳ ಕಾಲ ನಡೆದ ಚಾಮರಾಜನಗರದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂತಿಮ ದಿನವಾದ ಮಂಗಳವಾರ ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದ ಜಿಲ್ಲೆಯ 29 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕಸಾಪ ಸಾಹಿತ್ಯ ಪರೀಕ್ಷೆಗಳಿಗೆ ಉಚಿತ ವಾಗಿ ಪಾಠ ಭೋಧನೆ ಮಾಡಿದ 4 ಶಿಕ್ಷಕರುಗಳನ್ನು ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ಬಹುತೇಕ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಕನ್ನಡ ಶಾಲೆಗಳ ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಹಿಂದೆ ಶಿಕ್ಷಣದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕನ್ನಡ ಭಾಷೆ ನಾಶವಾಗುತ್ತಾ ಹೊರಟಿದೆ. ಇದಕ್ಕೆ ಕನ್ನಡಿಗರು ಭಾಷೆ ಬಗ್ಗೆ ಹೊಂದಿರುವ ನಿರಭಿಮಾನಕ್ಕೆ ಕಾರಣ ಎಂದರು. ಚಾಮರಾಜನಗರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಸಮ್ಮೇಳನಾಧ್ಯಕ್ಷ ಡಾ.ಎಸ್.ಶಿವರಾಜಪ್ಪ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಎನ್.ನೇತ್ರಾವತಿ, ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್.ವಿನಯ್ ಇತರರು ಉಪಸ್ಥಿತರಿದ್ದರು.