ತಾಯಿ ಆಶೀರ್ವಾದ ಪಡೆದ ನಂತರ ಮತದಾನ ಮಾಡಿದ ಪ್ರಧಾನಿ ಮೋದಿ
ಮೈಸೂರು

ತಾಯಿ ಆಶೀರ್ವಾದ ಪಡೆದ ನಂತರ ಮತದಾನ ಮಾಡಿದ ಪ್ರಧಾನಿ ಮೋದಿ

April 24, 2019

ಅಹ್ಮದಾಬಾದ್: ಗುಜರಾತ್‍ನಲ್ಲಿ ಮಂಗಳವಾರ ಮತದಾನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತದಾನ ಮಾಡುವ ಮುನ್ನ ತಮ್ಮ ತಾಯಿ ಹೀರಾಬೆನ್ ಮೋದಿಯವರ ಆಶೀರ್ವಾದ ಪಡೆದರು.

ಅಹಮದಾ ಬಾದ್ ಸಮೀಪ ರೈಸನ್ ಗ್ರಾಮದಲ್ಲಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆ ವಾಸಿಸುತ್ತಿದ್ದು, ಅಲ್ಲಿಗೆ ತೆರಳಿದ್ದ ಮೋದಿ ತಾಯಿಯ ಆಶೀರ್ವಾದ ಪಡೆದರು. ಗಾಂಧಿನಗರದ ರಾಜಭವನದಲ್ಲಿ ಕಳೆದ ರಾತ್ರಿ ತಂಗಿದ್ದ ನರೇಂದ್ರ ಮೋದಿ ಇಂದು ಬೆಳಿಗ್ಗೆ ಕೇವಲ ಒಂದು ಭದ್ರತಾ ವಾಹನ ದೊಂದಿಗೆ ನೇರವಾಗಿ ತಮ್ಮ ತಾಯಿ ಮನೆಗೆ ಹೋದರು.

ಅಲ್ಲಿ ತಮ್ಮ ತಾಯಿಯ ಆಶೀರ್ವಾದ ಪಡೆದು ಪಕ್ಕದಲ್ಲಿ ಕುಳಿತು ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದರು. ಮಗನಿಗೆ ತಾಯಿಯಿಂದ ಶಾಲು, ತೆಂಗಿನಕಾಯಿಯ ಉಡುಗೊರೆ ಸಿಕ್ಕಿತು. ಸುಮಾರು 20 ನಿಮಿಷಗಳ ಕಾಲ ತಾಯಿಯೊಂದಿಗೆ ಮಾತನಾಡುತ್ತಾ ಮೋದಿ ಕಾಲ ಕಳೆದರು. ನಂತರ ಗ್ರಾಮದ ಸ್ಥಳೀಯರ ಜೊತೆ ಕೆಲ ಹೊತ್ತು ಮಾತನಾಡಿದರು. ಎಲ್ಲರೂ ತಪ್ಪದೆ ಮತ ಕೇಂದ್ರಗಳಿಗೆ ಹೋಗಿ ಮತ ಚಲಾಯಿಸುವಂತೆ ಕೇಳಿಕೊಂಡರು. ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡರು. ನಂತರ ಅಲ್ಲಿಂದ ರಾಣಿಪ್‍ಗೆ ತೆರಳಿ ಮತ ಚಲಾಯಿಸಿದರು. ಗುಜರಾತ್ ರಾಜ್ಯದ ಎಲ್ಲಾ 26 ಲೋಕಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಿತು.

Translate »