ಗುರುವಾರ ಅಗ್ನಿಪರೀಕ್ಷೆ
ಮೈಸೂರು

ಗುರುವಾರ ಅಗ್ನಿಪರೀಕ್ಷೆ

July 16, 2019

ಬೆಂಗಳೂರು, ಜು. 15(ಕೆಎಂಶಿ)- ಮೈತ್ರಿ ಪಕ್ಷಗಳ ಕೆಲ ಅತೃಪ್ತ ಶಾಸಕರು ರಾಜೀ ನಾಮೆ ನೀಡಿದ್ದರೂ ತಮ್ಮ ಸರ್ಕಾರಕ್ಕಿರುವ ಬಹುಮತ ಸಾಬೀತುಪಡಿಸಲು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದೇ 18 ರ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ.

ಮಳೆಗಾಲದ ಅಧಿವೇಶನ ಆರಂಭದ ದಿನವೇ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳು, ತಮ್ಮ ಶಾಸಕರು ರಾಜೀನಾಮೆ ನೀಡಿರುವ ವಿಷಯವನ್ನು ಸದನದ ಗಮನಕ್ಕೆ ತಂದು, ಇಂತಹ ಸನ್ನಿವೇಶದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾನೇ ಸ್ವಯಂ ಪ್ರೇರಿತವಾಗಿ

ವಿಶ್ವಾಸಮತ ಯಾಚಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದರು. ಮುಖ್ಯಮಂತ್ರಿಯವರ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಇಂದು ವಿಧಾನಮಂಡಲದ ಸಲಹಾ ಸಮಿತಿ ಸಭೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಿದ ನಂತರ ಇಂದು ವಿಶ್ವಾಸಮತ ಯಾಚನೆ ದಿನಾಂಕವನ್ನು ನಿಗದಿಪಡಿಸಿದರು. ಸಭೆಯ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ಸಭಾ ನಡವಳಿಕೆಯನ್ನು ಸದನದ ಗಮನಕ್ಕೆ ತಂದು ಮುಖ್ಯಮಂತ್ರಿಯವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡಲಿದ್ದು, ಈ ಸಂಬಂಧ ಚರ್ಚೆ ನಡೆಯಲಿದೆ ಎಂದರು.

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷ ಬಿಜೆಪಿಯವರು ಅವಕಾಶ ಕೋರಿ ಪತ್ರ ನೀಡಿದ್ದಾರೆ.ಆದರೆ ಅದಕ್ಕೂ ಮುನ್ನ ವಿಧಾನಮಂಡಲ ಕಲಾಪ ಆರಂಭವಾದ ದಿನವೇ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಮಯದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆ ಮಾಡಲು ಅವಕಾಶ ಕೊಡಿ ಎಂದು ಕೋರಿದ್ದರು.

ವಿಶ್ವಾಸ ಮತ ಕೋರಲು ಅವಕಾಶ ಕೊಡಿ ಎಂದು ಅವರು ಕೋರಿದ ಸಂದರ್ಭ ಬೇರೆ.ಆದರೂ ಅವರು ಶಾಸಕರ ರಾಜೀನಾಮೆಯಿಂದ ಉದ್ಭವಿಸಿದ ಗೊಂದಲವನ್ನು ಪರಿಹರಿಸಿಕೊಳ್ಳಲು ವಿಶ್ವಾಸ ಮತ ಯಾಚಿಸುವುದಾಗಿ ಸ್ಪಷ್ಟ ಪಡಿಸಿದ್ದರು.

ಬಹುಮತವಿಲ್ಲದೆ ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಅವರು ಹೇಳಿದ್ದರು.ಇದಾದ ನಂತರ ಅವರು ಕೂಡಾ ವಿಶ್ವಾಸ ಮತ ಯಾಚಿಸಲು ಅವಕಾಶ ನೀಡುವಂತೆ ಕೋರಿ ನಮಗೆ ಪತ್ರ ನೀಡಿದ್ದಾರೆ. ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷಗಳೆರಡೂ ಅನುಕ್ರಮವಾಗಿ ವಿಶ್ವಾಸ ಮತ ಯಾಚನೆ ಮಾಡಲು, ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿದ್ದನ್ನು ಗಮನದಲ್ಲಿಟ್ಟುಕೊಂಡು ಎರಡೂ ಒಂದೇ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಸದನ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಅವಕಾಶ ಕೊಡುವುದಾಗಿ ಹೇಳಿದ್ದು, ಅದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ.ಹಾಗೆಯೇ ಇಂತಹ ಸನ್ನಿವೇಶಗಳಲ್ಲಿ ಸಂಸತ್ತು ಹೇಗೆ ನಡೆದುಕೊಂಡಿದೆ ವಿಧಾನಸಭೆ ಹೇಗೆ ನಡೆದುಕೊಂಡಿದೆ ಎಂಬ ಮಾಹಿತಿ ಪಡೆಯಬೇಕಾದ ಅಗತ್ಯ ನನಗಿದೆ. ಹಲವು ಪುಣ್ಯಾತ್ಮರ ತ್ಯಾಗದ ಫಲವಾಗಿ ನಾವು ಇವತ್ತು ಜನತಂತ್ರ ವ್ಯವಸ್ಥೆಯ ಪರಮೋಚ್ಛ ಜಾಗಕ್ಕೆ ಬಂದು ಕುಳಿತಿದ್ದೇವೆ.ಹೀಗಾಗಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಇಡೀ ಸದನ ಚರ್ಚಿಸಬೇಕು.ಆಡುವ ಮಾತುಗಳ ಬಗ್ಗೆ ಎಚ್ಚರದಿಂದಿರಬೇಕು.ಮಾತಿನ ಭರಾಟೆಯಲ್ಲಿ ನನ್ನನ್ನು ಎಳೆದು ತರಬಾರದು.

ನಾನು ಈ ಜಾಗದಲ್ಲಿ ಕುಳಿತು ನಿಷ್ಪಕ್ಷಪಾತವಾಗಿ ಐತಿಹಾಸಿಕ ಘಟನೆಯ ಸಾಕ್ಷಿಯಾಗ ಬೇಕಿದೆ. ಹೀಗಾಗಿ ಯಾರ ಪರವಾಗಿಯೂ ನಿಲ್ಲದೆ ನನ್ನ ಜಾಗದ ಘನತೆಯನ್ನು ಗಮನ ದಲ್ಲಿಟ್ಟುಕೊಂಡು ಹೆಜ್ಜೆ ಇಡುತ್ತೇನೆ. ಈ ಮಧ್ಯೆ ಸದನ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಮುಖ್ಯಮಂತ್ರಿಗಳಿಗೆ ಅವಕಾಶ ನೀಡಿರುವುದರಿಂದ ಸದನ ಕಲಾಪವನ್ನು ಎಂದಿನಂತೆ ನಡೆಸೋಣ ಎಂದು ಹೇಳಿದೆ. ಆದರೆ ಪ್ರತಿಪಕ್ಷದ ನಾಯಕರು, ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುವವರೆಗೆ ನಾವು ಸದನದ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು. ಪ್ರಜಾಪಭುತ್ವದಲ್ಲಿ ಪ್ರತಿಪಕ್ಷಗಳ ಪಾಲುದಾರಿಕೆ ಇಲ್ಲದೆ ಸದನ ನಡೆಸುವುದು ಗೌರವವಲ್ಲ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಸದನದ ಕಲಾಪವನ್ನು ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡುವುದಾಗಿ ಪ್ರಕಟಿಸಿದರು. ತದ ನಂತರ ಸದನ ಕಲಾಪವನ್ನು ಗುರುವಾರ ಮುಂದೂಡಿ ಸಭಾಧ್ಯಕ್ಷರು ತಮ್ಮ ಕೊಠಡಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರ ಜತೆ ಚರ್ಚಿಸಿದರು. ಹೀಗೆ ವಿಶ್ವಾಸ ಮತ ಯಾಚನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅವಕಾಶ ದೊರೆಯುತ್ತಿದ್ದಂತೆಯೇ ಎಲ್ಲ ಪಕ್ಷಗಳ ಶಾಸಕರು ಪೂರ್ವ ನಿಗದಿಯಂತೆ ತಾವು ಉಳಿದುಕೊಂಡ ರೆಸಾರ್ಟ್‍ಗಳಿಗೆ ತೆರಳಿದರು.

Translate »