ವಿಷ ಮಿಶ್ರಿತ ನೀರು ಸೇವಿಸಿ 11 ವಿದ್ಯಾರ್ಥಿಗಳು ಅಸ್ವಸ್ಥ
ಮೈಸೂರು

ವಿಷ ಮಿಶ್ರಿತ ನೀರು ಸೇವಿಸಿ 11 ವಿದ್ಯಾರ್ಥಿಗಳು ಅಸ್ವಸ್ಥ

July 16, 2019

ಮಂಡ್ಯ, ಜು.15(ನಾಗಯ್ಯ)- ಹನೂರು ತಾಲೂಕು ಸುಳವಾಡಿಯಲ್ಲಿ ಪ್ರಸಾದಕ್ಕೆ ವಿಷ ಮಿಶ್ರಣ ಮಾಡಿ 17 ಜನ ಬಲಿಯಾದ ಘಟನೆಯನ್ನು ಜನ ಮರೆಯುವ ಮುನ್ನವೇ ಶಾಲೆಯೊಂದರ ಕುಡಿಯುವ ನೀರಿನ ಟ್ಯಾಂಕ್‍ಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದ ಪರಿಣಾಮ ಆ ನೀರು ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಅಮಾನವೀಯ ಘಟನೆ ತಾಲೂ ಕಿನ ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದಿದೆ.

ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಶಾಲೆಯ ಚಂದನ್, ಸೋಮಶೇಖರ್, ದರ್ಶನ್, ಧನುಷ್, ಶಿವಲಿಂಗ, ಯಶ್ವಂತ್, ಮಯೂರ್ ಗೌಡ, ಚಂದು, ನಿಶಾ, ಪ್ರಜ್ವಲ್, ತೇಜು ಸೇರಿ 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಘಟನೆ ವಿವರ: ಎಂದಿನಂತೆಯೇ ಇಂದು ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು ಬೆಳಿಗ್ಗೆ 10.30ರ ಸುಮಾರಿನಲ್ಲಿ ಶಾಲಾ ಆವರಣ ದಲ್ಲಿಯೇ ಇರುವ ನೀರಿನ ಟ್ಯಾಂಕ್‍ನಲ್ಲಿ ನೀರು ಕುಡಿದಿದ್ದಾರೆ. ಇವರ ಪೈಕಿ ಚಂದನ್ ಮತ್ತು ಸೋಮಶೇಖರ್ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದಾರೆ. ಇವರ ಬೆನ್ನಲ್ಲೇ ದರ್ಶನ್, ಧನುಷ್, ಶಿವಲಿಂಗ, ಯಶ್ವಂತ್, ಮಯೂರ್‍ಗೌಡ, ಚಂದು, ನಿಶಾ, ಪ್ರಜ್ವಲ್, ತೇಜು ಕೂಡ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದ ಶಿಕ್ಷಕರು ಪರಿಶೀಲಿಸಿದಾಗ ಟ್ಯಾಂಕ್ ನೀರು ಇದಕ್ಕೆ ಕಾರಣವೆಂದು ಗೊತ್ತಾಗಿದೆ. ಅಲ್ಲದೆ ನೀರಿನಲ್ಲಿ ಕ್ರಿಮಿನಾಶಕ ವಾಸನೆ ಬರುತ್ತಿರುವುದು ಕೂಡ ಶಿಕ್ಷಕರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಟ್ಯಾಂಕ್ ನೀರು ಕುಡಿದಿದ್ದ ವಿದ್ಯಾರ್ಥಿಗಳಿಗೆಲ್ಲಾ ಉಪ್ಪಿನ ನೀರು ಕುಡಿಸಿ ವಾಂತಿ ಮಾಡಿಸಲು ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಸಾರ್ವಜನಿಕರ ನೆರವಿನೊಂದಿಗೆ ಎಲ್ಲಾ ಮಕ್ಕಳನ್ನೂ ಸಮೀಪದ ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ ಪರಿಣಾಮ ಎಲ್ಲಾ ವಿದ್ಯಾರ್ಥಿ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 11 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿ ಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೂ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ದುಷ್ಕರ್ಮಿಗಳಿಂದ ನಿನ್ನೆ ರಾತ್ರಿ ಫೋರೇಟ್ ಎಂಬ ಕ್ರಿಮಿನಾಶಕ ಕಾಳುಗಳನ್ನು ವಾಟರ್ ಟ್ಯಾಂಕ್‍ಗೆ ಹಾಕಲಾಗಿದೆ. ಮಕ್ಕಳು ಬೆಳಿಗ್ಗೆ ಶಾಲೆಗೆ ಬಂದಾಗ ಹಾಲು ಸೇವಿಸಲು ಟ್ಯಾಂಕ್‍ನ ನಲ್ಲಿಯಲ್ಲಿ ಲೋಟ ತೊಳೆಯಲು ಹೋಗಿದ್ದಾರೆ. ಆಗ ಕೆಲವು ಮಕ್ಕಳು ನೀರು ಸೇವಿಸಿದ್ದಾರೆ. ಇನ್ನುಳಿದ ಮಕ್ಕಳು ನೀರಿನ ವಾಸನೆಯಿಂದ ಕುಡಿಯದೆ ವಾಪಸ್ ಬಂದು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಫೋರೇಟ್ ವಿಷದ ಕಾಳುಗಳನ್ನು ರೈತರು ಜಮೀನಿನಲ್ಲಿರುವ ಇಲಿ, ಹೆಗ್ಗಣಗಳ ಹಾಗೂ ಇನ್ನಿತರೆ ಕ್ರಿಮಿಕೀಟಗಳಿಂದ ಬೆಳೆ ರಕ್ಷಣೆಗೆ ಬಳಸುತ್ತಾರೆ. ಇಂಥ ವಿಷದ ಕಾಳುಗಳನ್ನು ದುಷ್ಕರ್ಮಿಗಳು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಪೊಲೀಸರು ಹಾಗೂ ಶ್ವಾನ ದಳ ತಜ್ಞರು ಪರಿಶೀಲನೆ ನಡೆಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಯಪಡಬೇಕಿಲ್ಲ: ‘ಮಿತ್ರ’ನೊಂದಿಗೆ ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಕ್ಷ್ಮೀಶ್ ಮಾತನಾಡಿ, ಆಸ್ಪತ್ರೆಯಲ್ಲಿ ದಾಖಲಾಗಿರೋ ಮಕ್ಕಳಿಗೆ ಯಾವುದೇ ತೊಂದರೆ ಯಿಲ್ಲ. ಅವರೆಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮಕ್ಕಳಿಗೂ ಯಾವುದೇ ಸಮಸ್ಯೆಯಿಲ್ಲ. ಪೋಷಕರು ಹೆದರಿಕೊಳ್ಳು ವಂತಹದ್ದೇನೂ ಆಗಿಲ್ಲ. ಈಗಾಗಲೇ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದರು.

ಜೂಜುಕೋರರ ಕೃತ್ಯ ಶಂಕೆ!: ವಿದ್ಯಾರ್ಥಿಗಳ ಕುಡಿಯುವ ನೀರಿಗೆ ವಿಷ ಹಾಕಿದವರ ಬಗ್ಗೆ ಮಹತ್ವದ ಸುಳಿವು ಪತ್ತೆಯಾಗಿದೆ. ಜೂಜುಕೋರರು ನೀರಿಗೆ ವಿಷ ಹಾಕಿರಬಹು ದೆಂಬ ಅನುಮಾನ ವ್ಯಕ್ತವಾಗಿದೆ. ಶಾಲೆಯ ಹಿಂಭಾಗ ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಲಾಗಿತ್ತು. ಹೀಗಾಗಿ ಜೂಜುಕೋರರ ಮೇಲೆ ಅನುಮಾನ ಮೂಡುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕರು, ಶಾಲೆ ಬಿಟ್ಟ ನಂತರ ಹಿಂಭಾಗ ಕೆಲವು ಯುವಕರು ಜೂಜಾಡುತ್ತಿದ್ದರು. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ನಂತರ ಶಿಕ್ಷಕರು ಮತ್ತು ಜೂಜಾಡುತ್ತಿದ್ದವರ ನಡುವೆ ವೈಮನಸ್ಸು ಉಂಟಾಗಿತ್ತು ಎಂದು ಹೇಳಲಾಗಿದೆ.

Translate »