ಒಂದು ದಿನ ಮುಂಚಿತವಾಗಿ ಹೊರಟ ಮೈಸೂರಿನ 6, ಚಾ.ನಗರದ ಇಬ್ಬರು ಸೇರಿ 26 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ವಾಪಸ್
ಮೈಸೂರು

ಒಂದು ದಿನ ಮುಂಚಿತವಾಗಿ ಹೊರಟ ಮೈಸೂರಿನ 6, ಚಾ.ನಗರದ ಇಬ್ಬರು ಸೇರಿ 26 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ವಾಪಸ್

July 4, 2018

ಮೈಸೂರು: ಶ್ರೀರಂಗಪಟ್ಟಣದಲ್ಲಿರುವ ಮಂಡಲ್ ಟ್ರಾವಲ್ಸ್ ಮೂಲಕ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 26 ಮಂದಿ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಟ್ರಾವಲ್ಸ್ ಮಾಲೀಕ ಶ್ರೀಕಾಂತ್ ಶರ್ಮ ನೇತೃತ್ವದಲ್ಲಿ ಮೈಸೂರಿನ ಕೃಷ್ಣಕುಮಾರ್, ಸುರೇಶ್, ಮರಿಯಪ್ಪ, ನಾಗರಾಜು ನಾರಾಯಣಮೂರ್ತಿ, ವಿಜಯಲಕ್ಷ್ಮೀ, ಚಾಮರಾಜನಗರದ ನಾಗರಾಜು, ಸೇರಿದಂತೆ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿಯ ಒಟ್ಟು 26 ಯಾತ್ರಾರ್ಥಿ ಗಳು ಇಂದು ಸಂಜೆ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.

ಜೂ.19ರಂದು ಮೈಸೂರಿನಿಂದ ಹೊರಟಿದ್ದ ನಾವು, ಜೂ.28ರಂದು ಮಾನಸ ಸರೋವರದಲ್ಲಿ ನಡೆದ ಪೌರ್ಣಮಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, 3 ದಿನದಲ್ಲಿ ಕೈಲಾಸ ಪರ್ವತವನ್ನು ಕಾಲ್ನಡಿಗೆಯಲ್ಲಿ ಪರಿಕ್ರಮ(ಪ್ರದಕ್ಷಿಣೆ) ಪೂರ್ಣಗೊಳಿಸಿದೆವು. ನಮ್ಮನ್ನೆಲ್ಲಾ ಕಠ್ಮಂಡುವಿನಿಂದ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದ ನೇಪಾಳದ ರಿಚಾ ಟ್ರಕ್ಕರ್ಸ್ ಸಂಸ್ಥೆಯವರು ಮಳೆಯಾಗುವ ವಾತಾವರಣವನ್ನು ತಿಳಿದು, ಒಂದು ದಿನ ಮುಂಚಿತವಾಗಿಯೇ ಹೊರಡುವಂತೆ ಸೂಚಿಸಿದರು. ಅಲ್ಲದೆ ಮಾನಸ ಸರೋವರದಿಂದ ಸುಮಾರು 800 ಕಿಮೀ ರಸ್ತೆ ಮಾರ್ಗದಲ್ಲಿ ಸುರಕ್ಷಿತ ವಾಗಿ ಕರೆದುಕೊಂಡು ಬಂದು ಸೋಮವಾರ ರಾತ್ರಿ ಕಠ್ಮಂಡುವಿಗೆ ತಲುಪಿಸಿದರು. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅಲ್ಲಿಂದ ವಿಮಾನ ದಲ್ಲಿ ಹೊರಟು, ಸಂಜೆ 5 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದೇವೆ. ಅಲ್ಲಿನ ಹವಾಮಾನ ವೈಪರಿತ್ಯದ ಬಗ್ಗೆ ತಿಳಿದಿರುವ ರಿಚಾ ಟ್ರಕ್ಕರ್ಸ್ ಸಂಸ್ಥೆಯವರು, ಒಂದು ದಿನ ಮುಂಚಿತವಾಗಿ ವಾಪಸ್ಸು ಕರೆತರದಿದ್ದರೆ, ನಾವೂ ಸಹ ಸಂಕಷ್ಟದಲ್ಲಿ ಸಿಲುಕುತ್ತಿದ್ದೆವು. ಅವರ ಮಾರ್ಗದರ್ಶನದಿಂದ ಅಪಾಯದಿಂದ ಪಾರಾಗಿ ಬಂದಿದ್ದೇವೆ ಎಂದು ಟ್ರಾವಲ್ಸ್‍ನ ಮಾಲೀಕ ಶ್ರೀಕಾಂತ್ ಶರ್ಮ `ಮೈಸೂರು ಮಿತ್ರ’ನಿಗೆ ವಿವರಿಸಿದರು.

ಮಾನಸ ಸರೋವರದಲ್ಲಿ ಪೌರ್ಣಮಿ ಪೂಜೆಗೆಂದು ಈ ಬಾರಿ ಸಾವಿರಾರು ಯಾತ್ರಿಕರು ಸೇರಿದ್ದರು. ಹಾಗೆಯೇ ಕ್ಷೇತ್ರದಲ್ಲಿ ವಿಶೇಷ ಯಜ್ಞ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಶಂಕರ ಚಾನೆಲ್ ವತಿಯಿಂದ ಸುಮಾರು 300 ಜನರನ್ನು ಕರೆದೊಯ್ಯಲಾಗಿದೆ. ಅವರೊಂದಿಗೆ ಏಳೆಂಟು ಮಂದಿ ಮೈಸೂರಿನವರೂ ಇದ್ದಾರೆಂದು ತಿಳಿದು ಬಂದಿದೆ. ಅವರೆಲ್ಲಾ ಪೂಜೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಹಿಲ್ಸಾ ಪ್ರದೇಶದಲ್ಲಿ ಮಳೆಗೆ ಸಿಲುಕಿದ್ದಾರೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಸಂಚರಿಸಲು ಸಾಧ್ಯವಾಗದೆ ಒಂದೇ ಕಡೆ ಸಿಲುಕಿದ್ದಾರೆ. ಮೂರ್ನಾಲ್ಕು ದಿನದಿಂದ ನೀರು, ಊಟವಿಲ್ಲದೆ ಸಂಕಷ್ಟದಲ್ಲಿದ್ದಾರೆ. ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿ, ಅವರನ್ನೆಲ್ಲಾ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕಿದೆ ಎಂದು ಶ್ರೀಕಾಂತ್ ಶರ್ಮಾ ಮನವಿ ಮಾಡಿದ್ದಾರೆ.

Translate »