ರೈತರ ಸಾಲ ಮನ್ನಾಕ್ಕೆ ಖಜಾನೆ ತುಂಬಿಸಲು ಸಂದು ಗೊಂದಿಗೆ ಕೈ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ
ಮೈಸೂರು

ರೈತರ ಸಾಲ ಮನ್ನಾಕ್ಕೆ ಖಜಾನೆ ತುಂಬಿಸಲು ಸಂದು ಗೊಂದಿಗೆ ಕೈ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ

July 4, 2018

ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಮಾಡಲು ಹೊರಟಿ ರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಯೋಜನೆಗಳಿಗೆ ಮೀಸಲಿರಿಸಿದ ಹಣ ವೆಚ್ಚ ಮಾಡದೆ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇಟ್ಟಿರುವ ಸಾವಿರಾರು ಕೋಟಿ ರೂ. ಗಳನ್ನು ಹಿಂದಕ್ಕೆ ಪಡೆಯಲು ಹಣಕಾಸು ಇಲಾಖೆಗೆ ಆದೇಶ ನೀಡಿದ್ದಾರೆ.

ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ, ಮುಜರಾಯಿ, ವಸತಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಳೆದ ಕೆಲವಾರು ವರ್ಷಗಳಿಂದ ಮೀಸಲಿಟ್ಟಿದ್ದ ಹಣವನ್ನು ಅಧಿಕಾರಿಗಳು ವೆಚ್ಚ ಮಾಡಿಲ್ಲ.

ಇಲಾಖೆಯ ಗಮನಕ್ಕೂ ತಾರದೆ, ಕೆಲವು ಅಧಿಕಾರಿಗಳು ನೂರಾರು ಕೋಟಿ ರೂ.ಗಳನ್ನು ತಮ್ಮ ವೈಯಕ್ತಿಕ ಹೆಸರಿನಲ್ಲಿ ಠೇವಣಿ ಇರಿಸಿಕೊಂಡಿದ್ದಾರೆ. ಇಂತಹ ಠೇವಣಿಗಳ ಬಗ್ಗೆ ಪ್ರತಿಪಕ್ಷದಲ್ಲಿದ್ದಾಗ ಕುಮಾರ ಸ್ವಾಮಿಯವರೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಇದೀಗ ಕೃಷಿ ಸಾಲ ಮನ್ನಾ ಮಾಡಲು ಆ ಹಣವನ್ನೇ ಮೂಲ ಬಂಡವಾಳವಾಗಿ ಮಾಡಿಕೊಳ್ಳಲು ಮುಂದಾ ಗಿದ್ದಾರೆ. ಅಷ್ಟೇ ಅಲ್ಲ ಶಾಸಕರ ಕ್ಷೇತ್ರಾಭಿವೃದ್ಧಿಗೆ ನೀಡಿದ್ದ 900 ಕೋಟಿ ರೂ.ಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ವಶದಲ್ಲಿದೆ. ಆ ಹಣವನ್ನು ಖಜಾನೆಗೆ ಹಿಂತಿರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಣಕಾಸು ಇಲಾಖೆ ಹೊಣೆಹೊತ್ತಿರುವ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚು ವರಿ ಮತ್ತು ಅನಗತ್ಯ ಅನುದಾನವನ್ನು ಗುರುತಿಸಿ ಎಷ್ಟು ಹಣ ನಿಮ್ಮ ಖಾತೆಗಳಲ್ಲಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಿದ್ದಾರೆ. ಅದರಂತೆ ಶಾಸಕರ ನಿಧಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಪೈಕಿ ಆರಂಭ ವಾಗದೆ ಇರುವ ಕಾಮಗಾರಿಗಳು, ಆರಂಭವಾಗಿಯೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದ ಯೋಜನೆಗಳು ಮತ್ತು ಮುಂದೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿರುವ ಯೋಜನೆಗಳಲ್ಲಿ ತುರ್ತು ಅಲ್ಲದೆ ಇರುವ ಕಾಮಗಾರಿಗಳನ್ನು ಗುರುತಿಸಿ ಎಂದಿದ್ದಾರೆ.

ಅದೇ ರೀತಿ ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬಳಕೆಯಾಗದೆ ಇರುವ ಅನುದಾನವನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಇದರ ಪ್ರಮಾಣ ಸುಮಾರು 1200 ಕೋಟಿಗಳು ಎಂದು ಅಂದಾಜಿಸಲಾಗಿದೆ.

ರಾಜ್ಯಾದ್ಯಂತ ಸಮೃದ್ಧಿಯಾಗಿ ಮಳೆಯಾ ಗಿದ್ದು, ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಅದಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ಹೆಚ್ಚುವರಿ ಎಂದು ಗುರುತಿಸಲಾಗಿದೆ. ಹಿಂದಿನ ಮತ್ತು ಹಾಲಿ ಮೈತ್ರಿ ಸರ್ಕಾರ ಕೈಗೆತ್ತಿಕೊಳ್ಳಲಿರುವ ಅಭಿವೃದ್ಧಿ, ಭಾಗ್ಯ ಯೋಜನೆಗಳಿಗೆ ಕಡಿವಾಣ ಹಾಕದೇ, ಇರುವ ಸಂಪನ್ಮೂಲವನ್ನೇ ಬಳಕೆ ಮಾಡಿಕೊಂಡು ರೈತರನ್ನು ಸಾಲದಿಂದ ಋಣಮುಕ್ತ ಮಾಡಲು ಮುಖ್ಯಮಂತ್ರಿಯವರು ನಡೆಸಿರುವ ಮೊದಲ ಕಸರತ್ತು ಇದಾಗಿದೆ. ಕೃಷಿ ಸಾಲ ಮನ್ನಾದಿಂದ ಬೀಳುವ ಹೊರೆಯನ್ನು ಜನತೆ ಮೇಲೆ ಹೊರಿಸದೇ ಸರ್ಕಾರದ ಗಮನಕ್ಕೂ ಬಾರದೆ ಅಧಿಕಾರಿಗಳು ಬಚ್ಚಿಟ್ಟಿರುವ ಹಣವನ್ನು ಹೊರ ತೆಗೆಯುವುದು, ಇದರ ಜೊತೆ ಜೊತೆಯಲ್ಲೇ ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಎದ್ದಿರುವ ಕಟ್ಟಡ ಮತ್ತು ಬಡಾವಣೆಗಳನ್ನು ಸಕ್ರಮಗೊಳಿಸಿ, ಅದರಿಂದ ಬರುವ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಹೊಸ ಯೋಜನೆಗೆ ಬಳಕೆ ಮಾಡಿಕೊಳ್ಳಲು ನೀಲಿ ನಕ್ಷೆ ಸಿದ್ಧಗೊಂಡಿದೆ. ಕೃಷಿ ಸಾಲ ಮನ್ನಾ ಜೊತೆಗೆ ಕೆಲವು ಮಹತ್ತರ ಯೋಜನೆಗಳನ್ನು ತಮ್ಮ ಮುಂಗಡ ಪತ್ರದಲ್ಲಿ ಪ್ರಕಟಿಸಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಇದೇ 5 ರಂದು ಮಂಡನೆಯಾಗುವ ಮುಂಗಡ ಪತ್ರದಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುವುದಲ್ಲದೆ, ಅದಕ್ಕೆ ಸಂಪನ್ಮೂಲವನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ ಎಂಬುದನ್ನು ಜನತೆಯ ಮುಂದಿಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಇದ್ದ ಹಣವನ್ನು ಬಳಕೆ ಮಾಡಿಕೊಳ್ಳದೆ ಠೇವಣಿಯಾಗಿ ಉಳಿಸಿಕೊಂಡಿದ್ದ ಹಣ ಮತ್ತು ಸರ್ಕಾರಕ್ಕೆ ವಂಚಿಸುತ್ತಿದ್ದ ಬಿಲ್ಡರ್‍ಗಳಿಂದ ದಂಡ ವಸೂಲಿ ಮಾಡಿ, ತಮ್ಮ ಕನಸಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೊರಟಿದ್ದಾರೆ.

Translate »