ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ
ಮೈಸೂರು

ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ

July 4, 2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜು.5ರಂದು ಮಂಡಿಸಲಿರುವ ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಬೆನ್ನಲ್ಲೇ ರೈತರ ಖಾಸಗಿ ಸಾಲ ಮನ್ನಾ ಬಗ್ಗೆ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕಾವೇರಿದ ಚರ್ಚೆ ನಡೆಯಿತು.

ಮುಖ್ಯಮಂತ್ರಿಗಳು ಚುನಾವಣೆಗೂ ಮುನ್ನ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು `ರೈತರು ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ತೆಗೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಅಂತಹ ಸಾಲವನ್ನು ಮನ್ನಾ ಮಾಡಲು ಚಿಂತನೆ ಮಾಡಲಾಗುವುದು ಎಂದು ಚುನಾವಣೆಗೂ ಮುನ್ನ ಹೇಳಿದ್ದೇನೆಯೇ ಹೊರತು, ಖಚಿತವಾಗಿ ಅಂತಹ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ನಾನು ಹೇಳಲಿಲ್ಲ. ಒಂದು ವೇಳೆ ಹಾಗೇನಾದರೂ ನಾನು ಹೇಳಿದ್ದರೆ, ಅದಕ್ಕೆ ದಾಖಲೆ ಇದ್ದರೆ ಸದನದ ಮುಂದೆ ಇಡಿ ಎಂದು ಸವಾಲೆಸೆದರು.

ಈ ವೇಳೆ ಕೆ.ಎಸ್.ಈಶ್ವರಪ್ಪ ಎದ್ದು ನಿಂತು `ಚಿಂತನೆ ಎಂದರೆ ಏನು? ಮಾಡುತ್ತೇವೆ ಎಂದು ಅರ್ಥ ತಾನೇ? ಜನರು ಹಾಗೇ ತಾನೇ ಅಂದುಕೊಳ್ಳುತ್ತಾರೆ? ಎನ್ನುತ್ತಿ ದ್ದಂತೆಯೇ ಹೆಚ್.ಡಿ.ರೇವಣ್ಣ ಉತ್ತರಿಸಲು ಎದ್ದು ನಿಂತರು. ಅಷ್ಟರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿಂತಾಗ ರೇವಣ್ಣ ಕುಳಿತುಕೊಂಡರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಖಾಸಗಿ ವ್ಯಕ್ತಿಗಳಿಂದ ರೈತರು ಸಾಲ ಪಡೆದಿರುವ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳೇ ಇಲ್ಲ. ನಿಮ್ಮಲ್ಲೇನಾದರೂ ಇದೆಯೇ? ಎಂದು ಪ್ರಶ್ನಿಸಿದರಲ್ಲದೆ, ಚಿಂತನೆ ಮಾಡುತ್ತೇವೆ ಎಂದರೆ ಖಚಿತವಾಗಿ ಮನ್ನಾ ಮಾಡೇ ಬಿಡುತ್ತೇವೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

Translate »