ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!
ಮೈಸೂರು

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!

July 4, 2018

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು.

ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡುತ್ತಿದ್ದರು. ಹೆಚ್.ಡಿ. ರೇವಣ್ಣ ಮಧ್ಯೆ ಎದ್ದು ನಿಂತರಾದರೂ, ಏನೂ ಮಾತನಾಡದೇ ಹಾಗೇ ಕುಳಿತುಕೊಂಡರು. ಮೊದಲ ಬಾರಿಗೆ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ತಾವು ಭಾಗವಹಿಸಿರುವ ಚೊಚ್ಚಲ ಅಧಿವೇಶನದ ಎರಡನೇ ದಿನವಾದ ಇಂದು ಚರ್ಚೆ ಬಗ್ಗೆ ಗಮನಹರಿಸದೇ ಮೊಬೈಲ್‍ನಲ್ಲಿ ಫೇಸ್‍ಬುಕ್ ನೋಡುತ್ತಿದ್ದುದು ಕಂಡುಬಂತು. ಇನ್ನು ಶಾಸಕರಾದ ಬಿ.ಸಿ.ಪಾಟೀಲ್ ಮತ್ತು ವಿರೂಪಾಕ್ಷಪ್ಪ ಸಹ ಮೊಬೈಲ್ ವೀಕ್ಷಿಸುವುದರಲ್ಲಿ ತಲ್ಲೀನ ರಾಗಿದ್ದರಾದರೂ, ಅವರು ನೋಡುತ್ತಿದ್ದುದು ಏನು ಎಂಬುದು ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಕೇಳಿದ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆಯ ಮಾಜಿ ಸಚಿವ ತನ್ವೀರ್ ಸೇಠ್ ಉತ್ತರ ನೀಡಿದ್ದು ಅಚ್ಚರಿಯನ್ನುಂಟು ಮಾಡಿತ್ತು. ಹಾಲಿ ಶಿಕ್ಷಣ ಸಚಿವ ಎನ್.ಮಹೇಶ್ ಸದನದಲ್ಲೇ ಇದ್ದರಾದರೂ, ಅವರು ಉತ್ತರ ನೀಡುವ ಗೋಜಿಗೇ ಹೋಗಲಿಲ್ಲ.

ಇನ್ನು ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ರುವ ಸಚಿವೆ ಜಯಮಾಲಾ ಅವರು ಒಬ್ಬಂಟಿಯಾದಂತಾಗಿತ್ತು. ವಿಪಕ್ಷದ ಸದಸ್ಯರ ವಾಗ್ದಾಳಿಗೆ ಉತ್ತರಿಸಲು ಜಯಮಾಲಾ ಹೆಣಗಾಡು ತ್ತಿದ್ದರೂ, ಕಾಂಗ್ರೆಸ್‍ನ ಯಾವೊಬ್ಬ

ಸದಸ್ಯರು ಅವರ ನೆರವಿಗೆ ಬರಲಿಲ್ಲ. ಒಮ್ಮೆ ಮಾತ್ರ ಬಿಜೆಪಿಯ ಪ್ರಾಣೇಶ್ ಅವರು, ಪರಿಷತ್‍ನ ಕಾಂಗ್ರೆಸ್ ನಾಯಕಿಯಾಗಿರುವ ಜಯಮಾಲ ವಿರುದ್ಧ ಕಾಂಗ್ರೆಸ್ ಸದಸ್ಯರಿಂದಲೇ ಸಹಿ ಸಂಗ್ರಹ ನಡೆಸಲಾಯಿತು ಎಂದು ಹೇಳಿದಾಗ ಧರ್ಮಸೇನಾ ಎದ್ದು ನಿಂತು ಅದನ್ನು ವಿರೋಧಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಬಗ್ಗೆ ಬಿಜೆಪಿಯ ಆಯನೂರು ಮಂಜುನಾಥ್, ಟೀಕಾಪ್ರಹಾರ ನಡೆಸಲು ಮುಂದಾದಾಗ ಜೆಡಿಎಸ್‍ನ ಶರವಣ ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿ ಗಮನ ಸೆಳೆದರು. `ರಾಜ್ಯಪಾಲರ ಭಾಷಣ ಟ್ರೈಲರ್ ಅಷ್ಟೇ. 5ನೇ ತಾರೀಖು ಸಿನಿಮಾ ಬಿಡುಗಡೆಯಾಗಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಳ್ಳೇ ಬ್ಲ್ಯೂ ಪ್ರಿಂಟ್ ತಯಾರಿಸಿದ್ದಾರೆ. ಒಳ್ಳೇ ಸಿನಿಮಾ ಬಿಡುಗಡೆ ಮಾಡಲಿದ್ದಾರೆ’ ಎಂದು ಕುಮಾರಸ್ವಾಮಿ ಚಿತ್ರ ನಿರ್ಮಾಪಕರು ಆಗಿರುವುದರಿಂದ ಬಜೆಟ್ ಅನ್ನು ಸಿನಿಮಾಗೆ ಹೋಲಿಕೆ ಮಾಡಿ ಹೇಳುವ ಮೂಲಕ ಗಮನ ಸೆಳೆದರು.

Translate »