ಹಿನಕಲ್ ರಿಂಗ್‍ರೋಡ್ ಜಂಕ್ಷನ್‍ನ ಫ್ಲೈಓವರ್ ಕಾಮಗಾರಿ ಅಕ್ಟೋಬರ್‍ನಲ್ಲಿ ಪೂರ್ಣ
ಮೈಸೂರು

ಹಿನಕಲ್ ರಿಂಗ್‍ರೋಡ್ ಜಂಕ್ಷನ್‍ನ ಫ್ಲೈಓವರ್ ಕಾಮಗಾರಿ ಅಕ್ಟೋಬರ್‍ನಲ್ಲಿ ಪೂರ್ಣ

July 4, 2018

ಮೈಸೂರು: 2016ರ ಜೂನ್ ಮಾಹೆಯಲ್ಲಿ ಆರಂಭವಾಗಿದ್ದ ಮೈಸೂರಿನ ಹಿನಕಲ್ ರಿಂಗ್‍ರೋಡ್ ಜಂಕ್ಷನ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ 2018ರ ಅಕ್ಟೋಬರ್ ವೇಳೆಗೆ ಪೂರ್ಣ ಗೊಳ್ಳಲಿದೆ.

ಗ್ರೇಡ್ ಸೆಪರೇಟರ್ ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆ ಇದೀಗ ಫ್ಲೈಓವರ್ ಆಗಿ ಪರಿವರ್ತನೆಯಾಗಿದ್ದು, 14.81 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ 2016ರ ಏಪ್ರಿಲ್ 27ರಂದು ಕಾರ್ಯಾದೇಶ (Work order) ನೀಡಲಾಗಿತ್ತಾದರೂ, ಸಂಚಾರ ದಟ್ಟಣೆ, ಪೈಪ್ ಲೈನ್‍ಗಳ ಸ್ಥಳಾಂತರ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದರಿಂದ ಈ ಯೋಜನಾ ವೆಚ್ಚ 19.4 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ಪರಿಣಾಮ 2017ರ ಡಿಸೆಂಬರ್ 30ಕ್ಕೆ ಮುಗಿಯಬೇಕಾದ ಫ್ಲೈಓವರ್ ಕಾಮಗಾರಿಯು 2018ರ ಅಕ್ಟೋಬರ್ ಮಾಹೆವರೆಗೂ ಮುಂದುವರೆಯಲಿದೆ. ಸಂಸದ ಪ್ರತಾಪ್ ಸಿಂಹ ಅವರು ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಹಂತದಲ್ಲಿರುವ ಫ್ಲೈಓವರ್ ಕಾಮಗಾರಿಯನ್ನು ಪರಿಶೀಲಿಸಿದರು.

ಕಾಮಗಾರಿಯನ್ನು ತೀವ್ರಗೊಳಿಸಿ ದಸರಾ ಒಳಗಾಗಿ ಫ್ಲೈಓವರ್ ಯೋಜನೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೈಓವರ್ ಕಾಮಗಾರಿ ನಡೆಯುತ್ತಿರುವುದರಿಂದ ಹುಣಸೂರು ರಸ್ತೆ ಹಾಗೂ ರಿಂಗ್ ರೋಡ್‍ನಲ್ಲಿ ಓಡಾಡುವ ವಾಹನಗಳು, ಆಂಬುಲೆನ್ಸ್‍ಗಳ ಸಂಚಾರಕ್ಕೆ ತೊಂದರೆ ಉಂಟಾಗಿರುವುದರಿಂದ ಕೆಲಸ ತೀವ್ರಗೊಳಿಸಿ 2018ರ ದಸರಾ ಮಹೋತ್ಸವದೊಳಗಾಗಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಕೇಂದ್ರದ ಶೇ.60, ರಾಜ್ಯದ ಶೇ.20 ಹಾಗೂ ಮುಡಾದ ಶೇ.20 ರಷ್ಟು ಅನುದಾನದಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಯನ್ನು ಪಿಜೆಬಿ ಇಂಜಿನಿಯರಿಂಗ್ ನಿರ್ಮಾಣ ಕಂಪನಿಗೆ ವಹಿಸಲಾಗಿದೆ. ಪ್ರಸ್ತುತ ಶೇ.80ರಷ್ಟು ಕೆಲಸ ಮುಗಿದಿದೆ ಎಂದು ಸಂಸದರು ಮಾಹಿತಿ ನೀಡಿದರು. ಎರಡೂ ಬದಿಯಲ್ಲಿ 6 ಮೀಟರ್ ಸೇವಾ ರಸ್ತೆ, 2 ಮೀಟರ್ ಫುಟ್‍ಪಾತ್, 1.20 ಮೀ, ಸೆಂಟ್ರಲ್ ಮೀಡಿಯನ್. 4 ಪಥ ಹೊಂದಿರುವ ಫ್ಲೈಓವರ್ ಪೂರ್ಣಗೊಂಡಲ್ಲಿ ಹುಣಸೂರು ರಸ್ತೆಯಲ್ಲಿ ತಡೆ ಇಲ್ಲದೆ ಹಿನಕಲ್ ರಿಂಗ್ ರೋಡ್ ಜಂಕ್ಷನ್‍ನಲ್ಲಿ ವಾಹನಗಳು ಸರಾಗವಾಗಿ ಓಡಾಡುವಂತಾಗುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್‍ಬಾಬು, ರಾಷ್ಟ್ರೀಯ ಹೆದ್ದಾರಿ, ಪಾಲಿಕೆ, ಹಿನಕಲ್ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಫ್ಲೈಓವರ್ ಕಾಮಗಾರಿ ಪರಿಶೀಲನೆ ವೇಳೆ ಹಾಜರಿದ್ದರು.

Translate »