ಮೈಸೂರು, ಮಂಡ್ಯ ಭಾಗದ ಜನರ ತಲ್ಲಣಗೊಳಿಸಿದ ಭಾರೀ ಸದ್ದು
ಮೈಸೂರು

ಮೈಸೂರು, ಮಂಡ್ಯ ಭಾಗದ ಜನರ ತಲ್ಲಣಗೊಳಿಸಿದ ಭಾರೀ ಸದ್ದು

September 26, 2018

ಮೈಸೂರು: ಇತ್ತೀಚೆಗೆ ತಾನೆ ಕೊಡಗಿನಲ್ಲಿ ಉಂಟಾದ ಭೂಕಂಪನ ಹಾಗೂ ಪ್ರವಾಹದ ಭೀಕರತೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಇಂದು ಮಧ್ಯಾಹ್ನ 2 ಬಾರಿ ಕೇಳಿ ಬಂದ ಭಾರೀ ಸದ್ದಿನಿಂದಾಗಿ ಮೈಸೂರು ಮತ್ತು ಮಂಡ್ಯ ಜನತೆ ಬೆಚ್ಚಿ ಬಿದ್ದಿದ್ದಾರೆ.

ಕೊಡಗಿನಲ್ಲಿ ಕೂಡ ದುರಂತ ಸಂಭವಿ ಸುವ ಮುನ್ನ ಭಾರೀ ಶಬ್ದ ಕೇಳಿಬಂದಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತ ಭೂ ಕಂಪನ ಉಂಟಾಗಿರಬಹುದೆಂದು ಜನರು ಆತಂಕಕ್ಕೊಳಗಾಗಿದ್ದರು. `ಮೈಸೂರು ಮಿತ್ರ’ ಕಾರ್ಯಾಲಯಕ್ಕೆ ಕರೆ ಮಾಡಿದ ಮಂಡ್ಯ ಹಾಗೂ ಮೈಸೂರಿನ ಹಲವರು, ತಮಗೆ ಉಂಟಾದ ಅನುಭವವನ್ನು ಆತಂಕದಿಂದಲೇ ತೋಡಿಕೊಂಡಿದ್ದಲ್ಲದೇ, ಭೂ ಕಂಪನ ಉಂಟಾಗಿದೆಯೇ ಎಂಬ ಮಾಹಿತಿ ಬಯಸಿದರು. ಮಧ್ಯಾಹ್ನ 2.30 ಮತ್ತು 2.40ರ ಸುಮಾರಿನಲ್ಲಿ ಈ ಭಾರೀ ಶಬ್ದ ಕೇಳಿಬಂದಿದ್ದು, ಗೋಡೆಗಳು ಅಲುಗಾಡಿದ ಅನುಭವವಾಯಿತು ಎಂದು ಕರೆ ಮಾಡಿದ ಹಲವರು, ಆತಂಕ ದಿಂದಲೇ ಹೇಳಿದರು.

ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನು ಸಂಪರ್ಕಿಸ ಲಾಗಿ ಅವರು `ನಮಗೂ ಭಾರೀ ಶಬ್ದ ಕೇಳಿಸಿದೆ. ಆದರೆ ಭೂಮಿ ಕಂಪಿಸಿದ ಅನುಭವ ವಾಗಿಲ್ಲ ಎಂದಷ್ಟೇ ಹೇಳಿದರು. ಈ ಕುರಿತು ಸಂಬಂಧಪಟ್ಟ ಇಲಾಖೆಗಳನ್ನು ವಿಚಾರಿಸಿ ದ್ದೇನೆ. ಯಾವುದೇ ರೀತಿಯ ಭೂ ಕಂಪನ ಸಂಭವಿಸಿಲ್ಲ ಎಂದು ಅವರು ಹೇಳಿದರು.

ಬೇಬಿ ಬೆಟ್ಟದಲ್ಲಿ ಸ್ಫೋಟ: ಇಂದು ಮಧ್ಯಾಹ್ನ 2 ಸಲ ಭಾರೀ ಶಬ್ದ ಕೇಳಿಸಿದ್ದು ಯಾವುದೇ ಭೂ ಕಂಪನದಿಂದ ಅಲ್ಲ. ಕಲ್ಲು ಗಣಿಯಲ್ಲಿ ಸ್ಫೋಟಿಸಿದ ಭಾರೀ ಸ್ಫೋಟಕದ ಶಬ್ದ ಎಂಬುದು ದೃಢಪಟ್ಟಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಬೇಬಿ ಬೆಟ್ಟ ದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಲ್ಲಿ ಕಲ್ಲನ್ನು ಸ್ಫೋಟಿಸಲು ಭಾರೀ ಸ್ಫೋಟಕ ವನ್ನು ಬಳಸಲಾಗಿದೆ. ಅದರ ಶಬ್ದ ಮಂಡ್ಯ ಮಾತ್ರವಲ್ಲದೆ, ಮೈಸೂರಿನಲ್ಲೂ ಕೇಳಿಸಿದೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಬೆಂಗಳೂರಿನ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್.ಪ್ರಭು ಅವರು, ಯಾವುದೇ ಭೂ ಕಂಪನ ಸಂಭವಿಸಿಲ್ಲ. ಜನತೆ ಆತಂಕಪಡುವ ಅಗತ್ಯವಿಲ್ಲ ಎಂದರು. ಬೇಬಿ ಬೆಟ್ಟದ ಕಲ್ಲು ಗಣಿಯಲ್ಲಿ ಬಳಸಿದ ಸ್ಫೋಟಕದ ಶಬ್ದ ಅದು ಎಂದು ಸ್ಪಷ್ಟಪಡಿಸಿದ ಅವರು, 2 ಬಾರಿ ಸ್ಫೋಟಕ ಬಳಸಲಾಗಿದೆ. ಅದು ಕೆಆರ್ ಎಸ್‍ನಲ್ಲಿರುವ ಭೂ ಕಂಪನ ಮಾಪನ ಕೇಂದ್ರ ದಲ್ಲಿ ದಾಖಲಾಗಿದೆ.

ರಾಜ್ಯದಲ್ಲಿ ಕೆಆರ್‍ಎಸ್, ಬೆಂಗಳೂರು ತಿಪ್ಪಗೊಂಡನಹಳ್ಳಿ ಸೇರಿದಂತೆ 14 ಭೂ ಕಂಪನ ಮಾಪನ ಕೇಂದ್ರಗಳಿದ್ದು, ಎಲ್ಲೇ ಭೂ ಕಂಪನ ಸಂಭವಿಸಿದರೂ, ಈ ಕೇಂದ್ರಗಳಲ್ಲಿ ದಾಖಲಾಗುತ್ತದೆ. ಇಂದು ಭೂ ಕಂಪನ ಸಂಭವಿಸಿಲ್ಲ. ಎರಡು ಬಾರಿ ಕೇಳಿ ಬಂದ ಶಬ್ದಗಳು ಬೇಬಿ ಬೆಟ್ಟದಲ್ಲಿ ಕಲ್ಲು ಸಿಡಿಸಲು ಸ್ಫೋಟಕ ಬಳಸಿದ ಶಬ್ದಗಳೇ ಆಗಿವೆ. ಆದ್ದರಿಂದ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜು ಅವರು, ಬೇಬಿ ಬೆಟ್ಟದಲ್ಲಿ ಸ್ಫೋಟಕ ಬಳಸಿರುವ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Translate »