ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಸ್ಪಷ್ಟನೆ
ಮಂಡ್ಯ

ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಸ್ಪಷ್ಟನೆ

October 11, 2018

ಮಂಡ್ಯ:ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಗಣಿ ಮಾಲೀಕರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡವಪುರ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ಅವರು, ಬೇಬಿ ಬೆಟ್ಟದ ಸುತ್ತಲಿನ ಸುಮಾರು 24 ಗಣಿಗಾರಿಕೆಗಳು ಕಾನೂನು ಬದ್ದವಾಗಿಯೇ ನಡೆಯುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡದಂತೆಯೇ ನಡೆಸಲಾಗುತ್ತಿದೆ. ಆದರೂ, ನಮ್ಮ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸುವ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು.

ಕೆಆರ್‌ಎಸ್‌ ವ್ಯಾಪ್ತಿಯ ಗಣಿ ಪ್ರದೇಶ ಏಕಶಿಲಾ ಪದರವಾಗಿದೆ. ಗಣಿಗಾರಿಕೆಯಿಂದ ಕನ್ನಂಬಾಡಿ ಕಟ್ಟೆಗೆ ಅಪಾಯವಿದೆ ಎಂಬ ಮಾಧ್ಯಮದ ವರದಿಯಿಂದ ಎಚ್ಚೆತ್ತ ಸರ್ಕಾರ ತಜ್ಞರನ್ನು ನೇಮಿಸಿ ಸೂಕ್ತ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಕೂಡಲೇ ತಾಂತ್ರಿಕ ಪರಿಣತರ ತಂಡದಿಂದ ಗಣಿಗಾರಿಕೆ ಪ್ರದೇಶ ಪರಿಶೀಲನೆ ನಡೆಸಿ, ಗಣಿಗಾರಿಕೆಯಿಂದ ಯಾವ ವ್ಯಾಪ್ತಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಹಾನಿಯಾಗಲಿದೆ ಎಂಬ ಮಾಹಿತಿ ಕಲೆಹಾಕಿ ಅಗತ್ಯ ಗಣಿಗಾರಿಕೆಗೆ ಅನುವು ಮಾಡಿಕೊಡಲಿ ಎಂದು ಅವರು ಆಗ್ರಹಿಸಿದರು.

ಗಣಿಗಾರಿಕೆಯ ವೇಳೆ ಅಪಾಯದ ಸ್ಫೋಟಕಗಳನ್ನು ಬಳಕೆ ಮಾಡುವ ಗಣಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ನಮ್ಮದೇನು ತಕರಾರಿಲ್ಲ. ಈ ಸಂಬಂಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಗಣಿಗಾರಿಕೆಯನ್ನು ನಂಬಿ ಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸಾವಿರಾರು ಮಂದಿ ಮಾಲೀಕರು ಜೀವನ ನಿರ್ವಹಣೆ ಮಾಡುತ್ತಿದ್ದು, ಈ ಬಗ್ಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಾವೂ ಕೂಡ ಕೆಆರ್‌ಎಸ್‌ ಜಲಾಶಯಕ್ಕೆ ಹಾನಿ ಮಾಡಲು ಬಯಸುವುದಿಲ್ಲ. 2009ರಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ರಾಕ್ ಮ್ಯೆಕಾನಿಕ್ಸ್ ರವರು ಕೆಆರ್‌ಎಸ್‌ ಜಲಾಶಯದ 8 ಕಿಮಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು ಎಂದು ವರದಿ ನೀಡಿದ್ದಾರೆ. ಅದೇ ರೀತಿ ನಾವು ಗಣಿಗಾರಿಕೆ ನಡೆಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ರವಿ ಬೋಜೇಗೌಡ, ಬಿ.ಎಂ.ನಟರಾಜು, ಸುನೀಲ್, ರಿಜ್ವಾನ್ ಇದ್ದರು.

Translate »