ಮಂಡ್ಯ ಲೋಕಸಭಾ ಉಪ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ
ಮಂಡ್ಯ

ಮಂಡ್ಯ ಲೋಕಸಭಾ ಉಪ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ

October 11, 2018

ಮಂಡ್ಯ: ಲೋಕಸಭಾ ಉಪ ಸಮರಕ್ಕೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದರಿವೆ. ಸಿಕ್ಸ್ ಮಂತ್ ಕಾ ಸುಲ್ತಾನ್ ಯಾರಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ಸಿ.ಎಸ್.ಪುಟ್ಟರಾಜು ರಾಜೀನಾಮೆಯಿಂದ ಈ ಚುನಾವಣೆ ಎದುರಾಗಿದೆ. ಸಾರ್ವತ್ರಿಕ ಚುನಾವಣೆಗೆ 6 ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯೋದಿಲ್ಲ ಎಂಬ ಭಾವನೆ ಬಹುತೇಕರಲ್ಲಿತ್ತು. ಆದರೆ, ಇದೀಗ ಆಯೋಗ ಉಪ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ರೆಡಿಯಾಗ ಬೇಕಾದ ಸಂದಿಗ್ಧ ಪರಿಸ್ಥಿತಿ ರಾಜಕಾರಣಿಗಳಿಗೆ ಮಾತ್ರವಲ್ಲ ಮತದಾರರಿಗೂ ಎದುರಾಗಿದೆ.

ಕೇವಲ 6 ತಿಂಗಳು ಸಂಸದರಾಗಲು ಬಂಡವಾಳ ಹೂಡಬೇಕೆಂಬ ಚಿಂತೆ ರಾಜಕಾರಣಿಗಳದ್ದಾಗಿದೆ. ಈಗ ಖರ್ಚು ಮಾಡಿ ಗೆದ್ದರೂ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ಪರಿಸ್ಥಿತಿ ಹೇಗಿರುತ್ತದೋ ಅನ್ನುವ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿ ಚರ್ಚಿತವಾಗುತ್ತಿದೆ.

ಜೆಡಿಎಸ್‍ನಲ್ಲಿ ಪೈಪೋಟಿ: ಚುನಾವಣೆ ಬಗ್ಗೆ ಜೆಡಿಎಸ್‍ನಲ್ಲಿ ಉತ್ಸಾಹವಿದೆ. ಆದರೆ, ಚುನಾವಣೆ ವೇಳೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲ ಮನ್ನಾ ಸೇರಿ ದಂತೆ ಮಹಿಳಾ ಸಂಘಗಳ ಬೇಡಿಕೆ ಈಡೇರಿಸುವಲ್ಲಿ ಗೊಂದಲದಲ್ಲಿರುವುದರಿಂದ ರೈತರು, ಮಹಿಳೆಯರಲ್ಲಿ ಜೆಡಿಎಸ್ ಬಗ್ಗೆ ಒಲವು ಕಡಿಮೆಯಾಗಿರುವಂತೆ ಕಾಣುತ್ತಿದೆ. ಆದರೂ, ಟಿಕೆಟ್‍ಗಾಗಿ ಜೆಡಿಎಸ್ ಮುಖಂಡರು ಲಾಬಿ ಶುರು ಮಾಡಿದ್ದು ಲಕ್ಷ್ಮಿ ಅಶ್ವಿನ್ ಗೌಡ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್ ನಡುವೆ ರಾಜಕೀಯ ಒಳ ಪೈಪೋಟಿ ನಡೆಯು ತ್ತಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕೃಪೆ ಇದ್ದರೂ ಲಕ್ಷ್ಮಿ ಅಶ್ವಿನ್‍ಗೌಡ ಜೆಡಿಎಸ್ ಅಭ್ಯರ್ಥಿಯಾ ಗಲು ಸ್ಥಳೀಯ ಮುಖಂಡರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಸ್ಪರ್ಧಿಸಲು ಸ್ಥಳೀಯ ಶಾಸಕರು, ಮುಖಂಡರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಸಾರಿಗೆ ಸಚಿವ ತಮ್ಮಣ್ಣ ಜಿಪಂ ಚುನಾವಣೆಯಲ್ಲಿ ಸೋತು ಹತಾಶೆಯಲ್ಲಿರುವ ತಮ್ಮ ಪುತ್ರ ಸಂತೋಷ್‍ಗೆ ಈ ಬಾರಿ ಟಿಕೆಟ್ ಕೊಡಿಸಲು ತಂತ್ರ ಹೆಣೆದಿದ್ದಾರೆ ಎಂಬ ಮಾತು ಗಳೂ ಕೇಳಿ ಬಂದಿದೆ. ಈ ನಡುವೆ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಾಳಯದಲ್ಲಿ ಎದುರಾಗಬಹುದಾದ ಭಿನ್ನಮತ ಶಮನ ಗೊಳಿಸಲು ಕುಟುಂಬ ದ ಸದಸ್ಯರನ್ನೇ ಕಣ ಕ್ಕಿಳಿಸುವ ಚಾಣಾಕ್ಷ ನಡೆಯನ್ನು ದೇವೇ ಗೌಡರು ಅನುಸರಿಸುತ್ತಿದ್ದಾರೆ ಎನ್ನಲಾಗಿದ್ದು ಅದ ರಂತೆಯೇ ಗೌಡರ ಈ ನಡೆ ಸಕ್ಸಸ್ ಆದರೆ ನಿಖಿಲ್ ಕುಮಾರಸ್ವಾಮಿ ಅಥವಾ ಪ್ರಜ್ವಲ್ ರೇವಣ್ಣ, ಕಣಕ್ಕಿಳಿಯುವುದು ಖಚಿತ ಎಂಬ ಮಾತುಗಳು ಜೆಡಿಎಸ್ ಪಾಳಯದಿಂದಲೇ ಕೇಳಿ ಬಂದಿದೆ. ಅಲ್ಲದೇ ದೇವೇಗೌಡರ ಸೊಸೆ ಭವಾನಿ ರೇವಣ್ಣ ಕೂಡ ತಮ್ಮ ಮಗ ಪ್ರಜ್ವಲ್‍ಗೆ ಟಿಕೆಟ್ ಕೊಡಿಸಲು ಭಾರೀ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೈ ಪಾಳಯದಲ್ಲಿ ದೋಸ್ತಿಗೆ ವಿರೋಧ: ಇನ್ನೂ ಕೈ ಪಾಳಯದಲ್ಲಿ ಅಷ್ಟಾಗಿ ಪೈಪೋಟಿ ಕಂಡು ಬಂದಿಲ್ಲವಾದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ದೋಸ್ತಿಗೆ ತೀವ್ರ ವಿರೋಧವಿದೆ. ಜೆಡಿಎಸ್ ಕಾರ್ಯಕರ್ತರ ಒಪ್ಪಿಗೆ ಇದ್ದರೂ, ಕಾಂಗ್ರೆಸ್ ನಾಯಕರು ಮಾತ್ರವಲ್ಲ ಕಾರ್ಯಕರ್ತರಲ್ಲೂ ಮೈತ್ರಿಗೆ ಕಿಂಚಿತ್ತೂ ಒಲವಿಲ್ಲ. ದೋಸ್ತಿಯಾಗದೇ ಕುಸ್ತಿ ನಡೆದಲ್ಲಿ ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಎನ್.ಚೆಲುವರಾಯ ಸ್ವಾಮಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆÉ. ಜೊತೆಗೆ ಹಿಂದಿನ ಉಪ ಚುನಾವಣೆ ಗೆದ್ದು 6 ತಿಂಗಳಲ್ಲೇ ಒಳ್ಳೇ ಕೆಲಸ ಮಾಡಿ ಹೆಸರು ಮಾಡಿದ್ದ ಸಂಸದೆ ರಮ್ಯಾ ಈ ಬಾರಿಯ ಚುನಾವಣೆಗೆ ಬರು ತ್ತಾರೆಂದು ಅವರ ತಾಯಿ ರಂಜಿತಾ ನಗರಸಭೆ ಚುನಾವಣೆ ವೇಳೆ ಹೇಳಿದ್ದು, ರಮ್ಯಾ ಕಣಕ್ಕಿಳಿಯುವರೇ ಎಂಬ ಪ್ರಶ್ನೆಗಳು ಎದ್ದಿವೆÉ. ಇನ್ನು ನಟ, ಮಾಜಿ ಸಚಿವ ಅಂಬರೀಶ್ ಜಿಲ್ಲಾ ರಾಜಕಾ ರಣದ ಬಗ್ಗೆ ಮೌನ ವಾಗಿದ್ದು ಅವರು ಚುನಾವಣಾ ಕಣಕ್ಕಿಳಿ ಯುವುದು ಅನು ಮಾನ ಎನ್ನಲಾಗಿದೆ.

ಬಿಜೆಪಿ ಸ್ಕೆಚ್: ಒಕ್ಕ ಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಪ್ರಬಲ ಒಕ್ಕಲಿಗ ಹುರಿಯಾಳನ್ನೇ ಹುಡುಕಿ ಕಣಕ್ಕಿಳಿಸುವ ಪ್ಲಾನ್ ಮಾಡಿದೆ ಬಿಜೆಪಿ. ಮತ್ತೊಂದೆಡೆ ತೆನೆ ಬಿಟ್ಟು ಕೈ ಹಿಡಿದಿರುವ ಎನ್. ಚೆಲುವರಾಯಸ್ವಾಮಿ ಒಂದು ವೇಳೆ ಕೈ-ದಳ ಮೈತ್ರಿಯಾಗಿ ತನಗೆ ಟಿಕೆಟ್ ಸಿಗದಿದ್ದರೆ ಸಹಜವಾಗಿಯೇ ಸಿಡಿದೇಳುವ ಸಾಧ್ಯತೆ ಇದ್ದು ಇದರ ಲಾಭ ಪಡೆ ಯಲು ಬಿಜೆಪಿ ಸ್ಕೆಚ್ ಹಾಕಿದೆ. ಅಂಥ ವಾತಾ ವರಣ ಎದುರಾದರೆ ಅವರನ್ನು ಬಿಜೆಪಿಗೆ ಸೆಳೆದು ಅಭ್ಯರ್ಥಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಚಾಲನೆಗೆ ಬಂದಿವೆ. ಇದರ ಜೊತೆಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೆಸರೂ ಕೇಳಿ ಬಂದಿದೆ. ಜೆಡಿಎಸ್ – ಕಾಂಗ್ರೆಸ್ ದೋಸ್ತಿಯಾಗಿ ಚೆಲುವರಾಯಸ್ವಾಮಿ ಬಿಜೆಪಿ ಅಭ್ಯರ್ಥಿ ಯಾದಲ್ಲಿ ಪ್ರಬಲ ಪೈಪೋಟಿ ಎದುರಾಗುವುದು ನಿಶ್ಚಿತ. ಆದರೆ, ಆರ್.ಅಶೋಕ್ ಅಭ್ಯರ್ಥಿಯಾದಲ್ಲಿ ಅಂಥ ಸಾಧ್ಯತೆ ಕಡಿಮೆ. ಕಾರಣ, ಅಶೋಕ್ ಜಿಲ್ಲೆಯ ಜನರ ಜೊತೆ ಅಂತಹ ಒಡನಾಟ ಹೊಂದಿಲ್ಲ. ಅವರಿಗಿಂತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಉತ್ತಮ ಅಭ್ಯರ್ಥಿ ಎನ್ನಲಾಗುತ್ತಿದೆ. ಯೋಗೇಶ್ವರ್ ಜಿಲ್ಲೆಯ ನಾಯಕರ ಒಡನಾಟ ಇಟ್ಟುಕೊಂಡಿದ್ದಾರೆ. ಚನ್ನಪಟ್ಟಣದಲ್ಲಿನ ಅವರ ಅಭಿವೃದ್ಧಿ ಕಾರ್ಯ ಸೋಲಿನ ಅನುಕಂಪ ಕೂಡ ವರ್ಕ್ ಔಟ್ ಆಗುವ ಸಾಧ್ಯತೆ ಇದೆ ಎಂಬ ಮಾತು ಕೂಡ ಕೇಳಿ ಬಂದಿದೆ.

ಒಂದು ವೇಳೆ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಅಥವಾ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಉಪಚುನಾವಣೆ ಅಖಾಡಕ್ಕಿಳಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಕೆ.ಎಸ್.ನಂಜುಂಡೇಗೌಡ, ಅಥವಾ ಚಂದಗಾಲು ಶಿವಣ್ಣ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಪ್ರಬಲ ಪಕ್ಷಗಳ ಘಟಾನುಘಟಿಗಳ ಹೆಸರಿನ ನಡುವೆ ಇತರರ ಹೆಸರೂ ಕೂಡ ಕೇಳಿ ಬರುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಪತ್ರ ಕರ್ತರೂ ಆದ ಕೌಡ್ಲೆ ಚನ್ನಪ್ಪ ಸೇರಿದಂತೆ ಹಲವರು ಚುನಾವಣಾ ಕಣಕ್ಕಿಳಿಯಲು ಪೂರ್ವ ತಯಾರಿಯಲ್ಲಿ ದ್ದಾರೆ. ಈಗಾಗಲೇ ಕೌಡ್ಲೆ ಚನ್ನಪ್ಪ ತಮ್ಮ ಹಿತೈಷಿಗಳು, ಅಭಿಮಾನಿಗಳು, ಸಹಕಾರಿ ಸಂಘ ಸಂಸ್ಥೆಗಳ ಮುಖಂಡರು ಮತ್ತು ಸ್ನೇಹಬಳಗವನ್ನು ಸಂಪರ್ಕಿಸುತ್ತಿದ್ದು ಸಭೆ, ಸಂಘಟನಾ ಕಾರ್ಯ ಶುರು ಮಾಡಿಕೊಂಡಿದ್ದಾರೆ.
ಅಂತಿಮವಾಗಿ ಯಾರು 6 ತಿಂಗಳ ಲೋಕಸಭಾ ಸುಲ್ತಾನ್ ಆಗಲು ಪ್ರಬಲ ಹೋರಾಟಕ್ಕಿಳಿಯಲಿ ದ್ದಾರೆ ಎಂಬುದನ್ನು ನೋಡಬೇಕಾಗಿದೆ.

Translate »