ಮಡಿಕೇರಿ ದಸರಾ: ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ
ಕೊಡಗು

ಮಡಿಕೇರಿ ದಸರಾ: ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ

October 11, 2018

ಮಡಿಕೇರಿ: ಪೌರಾಣಿಕ ಹಿನ್ನಲೆ ಹೊಂದಿರುವ ಮಡಿಕೇರಿ ದಸರಾಕ್ಕೆ ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಸಾಂಪ್ರದಾಯಿಕ ಚಾಲನೆ ದೊರೆತಿದೆ.

ಮಡಿಕೇರಿಯ ಪಂಪಿನಕೆರೆಯಲ್ಲಿ 4 ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ ಮತ್ತು ಶ್ರೀ ಕೋಟೆ ಮಾರಿಯಮ್ಮ ದೇವಿ ಗಳ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಆ ಬಳಿಕ ಕರಗಗಳನ್ನು ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಮಂದಿ ಭಕ್ತರು ಪಂಪಿನಕೆರೆ ಬಳಿ ಜಮಾಯಿಸಿ, ಶಕ್ತಿ ದೇವತೆಗಳ ಕರಗ ಉತ್ಸವವನ್ನು ಕಣ್ತುಂಬಿಕೊಂಡರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ದಶ ಮಂಟಪ ಸಮಿತಿ ಅಧ್ಯಕ್ಷ ರವಿ, ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಸೇರಿದಂತೆ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಕರಗಗಳ ಇತಿಹಾಸ: ಮಡಿಕೇರಿ ದಸರಾಕ್ಕೆ 150 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಶಕ್ತಿ ದೇವತೆಗಳ ಕರಗಗಳನ್ನು ಹೊರಡಿಸುವ ಮೂಲಕ ಮಡಿಕೇರಿ ದಸರಾ ಆರಂಭಗೊಳ್ಳುವುದು ಮತ್ತೊಂದು ವಿಶೇಷವಾಗಿದೆ. ಅರಸರ ಕಾಲದಲ್ಲಿ ಮಡಿಕೇರಿ ನಾಡಿಗೆ ಮಾರಕ ಸಾಂಕ್ರಮಿಕ ಕಾಯಿಲೆಗಳು ಕಾಣಿಸಿ ಕೊಂಡು ಸಾವು-ನೋವು ಸಂಭವಿಸುವುದರೊಂದಿಗೆ, ಜನರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿತ್ತು. ಇದರಿಂದ ಚಿಂತೆಗೀಡಾದ ಅರಸು ನಾಡಿನ 4 ಶಕ್ತಿ ದೇವತೆಗಳ ಮೋರೆ ಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು.

ಈ ಸಂದರ್ಭ ಮಡಿಕೇರಿ ನಾಡಿನಲ್ಲಿ ಶಕ್ತಿ ದೇವತೆಗಳ ಕರಗಗಳು ಅಷ್ಟ ದಿಕ್ಕುಗಳಿಗೆ ತೆರಳಿದರೆ ಎದುರಾಗಿರುವ ಸಂಕಷ್ಟಗಳಿಗೆ ಪರಿಹಾರ ದೊರೆಯಲಿದೆ ಎಂಬ ಉತ್ತರ ದೊರಕಿತ್ತು. ಈ ಹಿನ್ನಲೆಯಲ್ಲಿ ಅರಸರು 4 ಶಕ್ತಿ ದೇವತೆಗಳ ಕರಗಗಳನ್ನು ಮಡಿಕೇರಿ ದೊಡ್ಡಪೇಟೆಗೆ ಕರೆ ತಂದು ಪ್ರದಕ್ಷಿಣೆ ನಡೆಸಿದ್ದರು. ಕಾಕತಾಳೀಯ ಎಂಬಂತೆ ಸಾಂಕ್ರಾಮಿಕ ರೋಗಗಳು ಮರೆಯಾಗಿ ಮಡಿಕೇರಿ ನಾಡು ಯಥಾಸ್ಥಿತಿಗೆ ಮರಳಿತ್ತು. ಅಂದು ಅರಸರಿಂದ ಪ್ರಾರಂಭವಾದ ಕರಗಗಳ ಪ್ರದಕ್ಷಿಣೆ ಇಂದು ದೇವಾಲಯ ಸಮಿತಿಗಳ ಮೂಲಕ ಉತ್ಸವದ ರೂಪದಲ್ಲಿ ಆಚರಿಸಿಕೊಂಡು ಬರಲಾಗಿದೆ.

ಕರಗ ಉತ್ಸವ: ನವರಾತ್ರಿಯ ಮೊದಲ ದಿನವಾದ ಇಂದು 4 ಶಕ್ತಿ ದೇವತೆಗಳ ಕರಗಗಳನ್ನು ಹೊರು ವವರು ವ್ರತದಾರಿಗಳಾಗಿ ಕರಗ ಕಟ್ಟಲು ಅಗತ್ಯವಿ ರುವ ಶಕ್ತಿ ದೇವತೆಗಳ ಬೆಳ್ಳಿಯ ಮುಖವಾಡ, ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂವುಗಳು, ದೇವಿಯ ಪವಿತ್ರ ಆಯುಧಗಳಾದ ಬೆತ್ತ ಮತ್ತು ಚೂರಿ ಹಾಗೂ ಇತರ ಪೂಜಾ ಪರಿಕರಗಳೊಂದಿಗೆ ಪಂಪಿನ ಕೆರೆಗೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥನೆಯೊಂದಿಗೆ ಕರಗ ಕಟ್ಟಲು ಆರಂಭಿಸುತ್ತಾರೆ.

ಕರಗ ಶೃಂಗಾರ ಪೂರ್ಣಗೊಂಡ ನಂತರ 4 ಶಕ್ತಿ ದೇವತೆಗಳನ್ನು ಆಹ್ವಾನಿಸಿ, ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಬಳಿಕ ಕರಗಗಳನ್ನು ತಲೆಯ ಮೇಲೆ ಹೊತ್ತ ವ್ರತಾದಾರಿಗಳು ಪಂಪಿನಕೆರೆಯಿಂದ ಸಾಂಪ್ರದಾಯಿಕ ವಾದ್ಯಗಳಿಗೆ ನರ್ತಿಸುತ್ತಾ ನಗರದ ಬನ್ನಿಮಂಟಪಕ್ಕೆ ಆಗಮಿಸಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸುತ್ತಾರೆ.

ನಂತರ ಶ್ರೀ ಚೌಡೇಶ್ವರಿ ದೇವಾ ಯಲ ಮತ್ತು ವಿಷ್ಣುವಿನ ಅವತಾರವಾದ ಶ್ರೀ ಪೇಟೆ ರಾಮಮಂದಿರಕ್ಕೆ ತೆರಳಿ ಕರಗಗಳಿಗೆ ಪೂಜೆ ನೆರವೇರಿ ಸುತ್ತಾರೆ. ತದನಂತರ ತಮ್ಮ ತಮ್ಮ ಸ್ಥಾನಗಳಿಗೆ ಮರ ಳುವ ಕರಗಗಳು, ಮರುದಿನ ಸ್ಥಾನದಲ್ಲಿ ಪೂಜೆ ಸ್ವೀಕರಿಸಿ ನಗರ ಪ್ರದಕ್ಷಿಣೆಗೆ ಹೊರಡುತ್ತವೆ. ಈ ಸಂದರ್ಭ ಜನರು ಹಣ್ಣು ಕಾಯಿಯ ಪೂಜೆ ಸಲ್ಲಿಸಿ ಪ್ರಾರ್ಥಿ ಸುತ್ತಾರೆ. 9 ದಿನಗಳು ಕೂಡ ಕರಗಗಳು ನಗರ ಪ್ರದ ಕ್ಷಿಣೆ ನಡೆಸಿ ನಾಡಿನ ಸುಭೀಕ್ಷೆಗಾಗಿ ಹರಸುತ್ತವೆ.

Translate »