ಭದ್ರತಾ ಸಿಬ್ಬಂದಿ ನೇಮಕಕ್ಕೆ ಹೊಸ ಟೆಂಡರ್‍ಗೆ ಸೂಚನೆ
ಮೈಸೂರು

ಭದ್ರತಾ ಸಿಬ್ಬಂದಿ ನೇಮಕಕ್ಕೆ ಹೊಸ ಟೆಂಡರ್‍ಗೆ ಸೂಚನೆ

June 29, 2018

ಮೈಸೂರು:  ಪಾಲಿಕೆಗೆ ಸೇರಿದ ಕಟ್ಟಡಗಳು, ಉದ್ಯಾನಗಳು, ವಾಣಿವಿಲಾಸ ವಾಟರ್ ವಕ್ರ್ಸ್, ವಾಹನ ನಿಲುಗಡೆ ಸ್ಥಳಗಳ ಭದ್ರತೆಗೆ ಕಾವಲುಗಾರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲು ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಕೌನ್ಸಿಲ್‍ಗೆ ಸ್ಪಷ್ಟಪಡಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮಾತಿಗಿಳಿದ ಮಾಜಿ ಮೇಯರ್ ಪುರುಷೋತ್ತಮ್ ಅವರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸಮರ್ಪಕವಾಗಿ ವೇತನ ನೀಡದೆ ವಂಚಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು. ಹೊಸದಾಗಿ ಟೆಂಡರ್ ಕರೆಯಬೇಕು. ಗುತ್ತಿಗೆ ಆಧಾರದಲ್ಲಿ ಎಷ್ಟು ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ವಿ.ಮಂಜುನಾಥ್ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕ್‍ಗಳ ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ಎರಡು ವರ್ಷಧ ಹಿಂದೆಯೇ ಕೌನ್ಸಿಲ್‍ನಲ್ಲಿ ನಿರ್ಣಯ ಮಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಈಗ ಭದ್ರತಾ ಸಿಬ್ಬಂದಿಗೆ ಟೆಂಡರ್ ಕರೆದಿರುವುದು ತಪ್ಪು ಎಂದರು. ಇದಕ್ಕೆ ಮ.ವಿ.ರಾಮ್‍ಪ್ರಸಾದ್ ಧ್ವನಿಗೂಡಿಸಿ, ಪಾಲಿಕೆ ಕಟ್ಟಡದ ಮೇಲೆ ಬಾವುಟ ಏರಿಸಿ, ಇಳಿಸುವುದಕ್ಕೂ ಇಬ್ಬರನ್ನು ನಿಯೋಜಿಸಿಕೊಳ್ಳಲಾಗಿದೆ. ಆದರೆ ಹಲವೆಡೆ ಕಾವಲುಗಾರರೇ ಇಲ್ಲದಂತಾಗಿದೆ. ಈ ಬಗ್ಗೆಯೂ ಪರಿಶೀಲಿಸಬೇಕೆಂದರು. ಶ್ರೀಕಂಠಯ್ಯ ಮಾತನಾಡಿ, ನಗರದಲ್ಲಿ 460ಕ್ಕೂ ಹೆಚ್ಚು ಉದ್ಯಾನಗಳಿದ್ದು, ಎಲ್ಲವನ್ನೂ ಏಕಕಾಲದಲ್ಲಿ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಒಂದು ಅವಧಿಯಲ್ಲಿ ಎಷ್ಟು ಪಾರ್ಕ್‍ಗಳ ಅಭಿವೃದ್ಧಿ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿಕೊಂಡು, ಅಗತ್ಯಕ್ಕೆ ತಕ್ಕಂತೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕೆಂದರು.
ಈ ಸಂಬಂಧ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಜಗದೀಶ್, ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ಟೆಂಡರ್ ಕರೆಯಬೇಕಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲಿದ್ದ ಕಾರಣ ವಿಳಂಬವಾಗಿದೆ. ಯಾವ ಕಾರಣಕ್ಕೂ ಗುತ್ತಿಗೆ ಅವಧಿ ಮುಂದುವರಿಸದೆ, ಹೊಸದಾಗಿ ಟೆಂಡರ್ ಕರೆಯಲು ಸೂಚಿಸಿದ್ದೇನೆ. ಕಾರ್ಮಿಕ ಇಲಾಖೆ ನಿಯಮದನ್ವಯ ವೇತನ ಸಿಗುವಂತೆಯೂ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸದಸ್ಯ ನಂದೀಶ್ ಪ್ರೀತಂ ಮಾತನಾಡಿ, ಒಳಚರಂಡಿ ಸ್ವಚ್ಛತೆಗೆ ಯಂತ್ರೋಪಕರಣಗಳ ಕೊರತೆಯಿದೆ. ಅಧಿಕಾರಿಗಳು ಏನಾದರೂ ಸಬೂಬು ಹೇಳುತ್ತಾರೆ. ಗುತ್ತಿಗೆದಾರರ ಬದಲು ಅಧಿಕಾರಿಗಳೇ ಪ್ರತ್ಯೇಕವಾಗಿ ವಾಹನ ದುರಸ್ತಿ ಮಾಡಿಸಿದ್ದಾರೆಂದು ಆರೋಪಿಸಿದರು. ಶೌಕತ್ ಪಾಷಾ ಮಾತನಾಡಿ, ಯಾವಾಗ ಕೇಳಿದರೂ, ಮಿಷನ್ ರಿಪೇರಿ ಇದೆ. ಡ್ರೈವರ್ ಬಂದಿಲ್ಲ. ಪಂಕ್ಚರ್ ಅಗಿದೆ ಎಂದು ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಸ್ಪಷ್ಟನೆ ನೀಡಿದ ಯುಜಿಡಿ ವಿಭಾಗದ ಇಂಜಿನಿಯರ್, ಪಾಲಿಕೆಯಲ್ಲಿ 12 ಜೆಟ್ಟಿಂಗ್ ಮೆಷಿನ್ ಇದ್ದು, ಆರೇಳು ವಾರ್ಡ್‍ಗಳಿಗೆ ಒಂದರಂತೆ ವಿಂಗಡಣೆ ಮಾಡಲಾಗಿದೆ. ಜೆಟ್ಟಿಂಗ್ ಹಾಗೂ ಶಿಲ್ಟಿಂಗ್ ಮೆಷಿಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಗಣ್ಯರ ನಾಮಕರಣಕ್ಕೆ ತಡೆ: ನಗರದ ಅನೇಕ ರಸ್ತೆ, ವೃತ್ತ, ಉದ್ಯಾನಗಳಿಗೆ ಗಣ್ಯರ ಹೆಸರು ನಾಮಕರಣ ಮಾಡಬೇಕೆಂದು ಪಾಲಿಕೆ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಬಂದಿದ ಪ್ರಸ್ತಾವನೆಗೆ ಅನುಮೋದಿಸುವ ಸಂಬಂಧ ಕೆಲಕಾಲ ಚರ್ಚೆ ನಡೆಯಿತು. ಈ ಬಗ್ಗೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸರ್ಕಾರದ ಯಾವುದೇ ಸುತ್ತೋಲೆಗಳು, ಆದೇಶಗಳು ಬಂದಾಗ ಎಲ್ಲಾ ಸದಸ್ಯರ ಗಮನಕ್ಕೆ ತರಬೇಕು. ಇಲ್ಲವಾದರೆ ಗೊಂದಲಗಳು ನಿರ್ಮಾಣವಾಗುತ್ತವೆ. ಇನ್ನು ರಸ್ತೆ, ಉದ್ಯಾನ, ವೃತ್ತಗಳಿಗೆ ನಾಮಕರಣ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಕಾನೂನಾತ್ಮಕವಾಗಿ ಆರೋಪಗಳಿರುವ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಿದರೆ ಪಾಲಿಕೆಯ ಗೌರವವೂ ಹಾಳಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಡೆಗೆ ಮೇಯರ್ ಭಾಗ್ಯವತಿ ಅವರು, ಈ ಸಂಬಂಧ ಎಲ್ಲಾ ಅರ್ಜಿಗಳನ್ನೂ ಕ್ರೂಢೀಕರಿಸಿ, ಮುಂದಿನ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದರು.

ನಗರ ಪಾಲಿಕೆಯ 1989ರಿಂದ 92, 2005ರಿಂದ 2007 ಹಾಗೂ 2012-13ನೇ ಸಾಲಿನ ಮುಖ್ಯ ಲೆಕ್ಕ ಪರಿಶೋಧಕರ ವರದಿಯ ಆಕ್ಷೇಪಣೆ ಹಾಗೂ ವೂಲಾತಿ ಕಂಡಿಕೆಗಳಿಗೆ ಅನುಪಾಲನಾ ವರದಿ ಸಿದ್ದಪಡಿಸುವ ಸಂಬಂಧಿತ ಕಾರ್ಯಸೂಚಿಯನ್ನು ವಿಶೇಷ ಸಭೆ ಕರೆದು ಚರ್ಚಿಸಬೇಕೆಂದು ಸದಸ್ಯರು ಮೇಯರ್ ಭಾಗ್ಯವತಿ ಅವರನ್ನು ಒತ್ತಾಯಿಸಿದರು.

ಸರ್ಕಾರಕ್ಕೆ ರವಾನಿಸಲು ನಿರ್ಧಾರ: ಮೈಸೂರಿನ ಕೆಸರೇ 3ನೇ ಹಂತದಲ್ಲಿರುವ ಅಶ್ರಫುಲ್ ಊಲೂಂ ಟ್ರಸ್ಟ್‍ಗೆ ಸೇರಿದ ಜಾಗದ ಮಧ್ಯೆ ಹಾದು ಹೋಗಿರುವ ರಸ್ತೆಯ ಮರುಜೋಡಣೆ ಸಂಬಂಧಿತ ಕಾರ್ಯಸೂಚಿ ಬಗ್ಗೆ ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳನ್ನೂ ನಮೂದಿಸಿ, ಸರ್ಕಾರಕ್ಕೆ ಕಳುಹಿಸಲು ಮೇಯರ್ ಬಿ.ಭಾಗ್ಯವತಿ ಅವರು ಸೂಚಿಸಿದರು.
ರಸ್ತೆ ಮರುಜೋಡಣೆ ವಿಚಾರದ ಕಾರ್ಯಸೂಚಿಗೆ ಒಪ್ಪಿಗೆ ಸೂಚಿಸಬೇಕೆಂದು ಶೌಖತ್ ಪಾಷಾ ಒತ್ತಾಯಿಸಿದರು. ಆ ಸಂದರ್ಭದಲ್ಲಿ ಮ.ವಿ.ರಾಮ್‍ಪ್ರಸಾದ್ ಮಾತನಾಡಿ, ಈ ಬಗ್ಗೆ ಯಾರಾದರೂ ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ?. ಇದಕ್ಕೆ ಯಾರದೂ ತಕರಾರಿಲ್ಲವೇ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಯೂಬ್‍ಖಾನ್, ಮದರಸ ಎಂದು ಕಂಡಾಕ್ಷಣ ಬಿಜೆಪಿಯವರು ವಿರೋಧಿಸುವುದು ಸರಿಯಲ್ಲ. ಮುಡಾ ಹಾಗೂ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನಿಯಮಾನುಸಾರವೇ ಈ ಪ್ರಕ್ರಿಯೆ ನಡೆಸಲಾಗಿದೆ. ಏಕಾಏಕಿ ಕೌನ್ಸಿಲ್‍ಗೆ ತಂದಿಲ್ಲ ಎಂದು ಹೇಳಿದರು.

ಆಗ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಯಾವುದೇ ರಸ್ತೆ, ಉದ್ಯಾನ ನಿರ್ಮಾಣ ಅಥವಾ ಸ್ಥಳ ಬದಲಾವಣೆ ಮಾಡುವ ಸಂದರ್ಭದಲ್ಲಿ ಸ್ಪಷ್ಟತೆ ಇರಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು. ಬದಲಾವಣೆಗೆ ಯಾವುದೇ ತಕರಾರಿಲ್ಲವೇ? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇಲ್ಲವಾದರೆ ಮುಂದೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ನಂದೀಶ್ ಪ್ರೀತಂ, ಇದು ಯಾವುದೇ ಕೋಮಿಗೆ ಸಂಬಂಧಿಸಿದ ವಿಚಾರವಲ್ಲ. ಸಿಡಿಪಿಗೆ ಒಳಪಟ್ಟಂತೆ ಕಾನೂನಾತ್ಕವಾಗಿ ಇದೆಯೇ? ಎಂಬುದನ್ನು ಪರಿಶೀಲಿಸಬೇಕೆಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಸಿದ ಅಯೂಬ್‍ಖಾನ್, ಅಶ್ರಫುಲ್ ಊಲೂಂ ಟ್ರಸ್ಟ್‍ನ ಆಸ್ತಿಯಾದ ಮದರಸ, ಅರೇಬಿಕ್ ಶಾಲೆ ಹಾಗೂ ನಿವೇಶನಗಳ ಮಧ್ಯೆ ಸಾರ್ವಜನಿಕ ರಸ್ತೆ ಹಾದು ಹೋಗಿದೆ. ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ರೋಷನ್ ಬೇಗ್ ಸ್ಥಳ ಪರಿಶೀಲನೆ ನಡೆಸಿ, ಟ್ರಸ್ಟ್‍ನ ಆಸ್ತಿಯ ಕಡೆ ಭಾಗದಲ್ಲಿ ರಸ್ತೆ ಹಾದು ಹೋಗುವಂತೆ ಮರುಜೋಡಣೆ ಮಾಡಿದರೆ ಸಂಸ್ಥೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು. ನಂತರ ಟ್ರಸ್ಟ್‍ನ ಕಾರ್ಯದರ್ಶಿ ಈ ಸಂಬಂಧ ಪಾಲಿಕೆಗೆ ಪತ್ರ ಬರೆದು ರಸ್ತೆ ಮರುಜೋಡಣೆಗೆ ಮನವಿ ಮಾಡಿದ್ದರು. ಸಾರ್ವಜನಿಕ ರಸ್ತೆಯನ್ನು ಬದಲಿಸುವುದು ಪಾಲಿಕೆ ಅಧಿಕಾರವಾಗಿರುವುದರಿಂದ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಕೌನ್ಸಿಲ್ ಅನುಮೋದನೆಗೆ ತರಲಾಗಿದೆ ಎಂದು ವಿವರಿಸಿದರು.

ಕಡೆಗೆ ಮೇಯರ್ ಭಾಗ್ಯವತಿ ಅವರು, ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾದ ಎಲ್ಲಾ ಅಭಿಪ್ರಾಯ, ಸಲಹೆಗಳನ್ನೂ ನಮೂದಿಸಿ, ಸರ್ಕಾರಕ್ಕೆ ಕಳುಹಿಸಿ, ನಂತರದ ಆದೇಶದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

Translate »