ಶ್ರೀಲಂಕಾದಲ್ಲಿ ಸರಣಿ ಸ್ಫೋಟ: ರಾಜ್ಯದ 8 ಮಂದಿ ಸಾವು
ಮೈಸೂರು

ಶ್ರೀಲಂಕಾದಲ್ಲಿ ಸರಣಿ ಸ್ಫೋಟ: ರಾಜ್ಯದ 8 ಮಂದಿ ಸಾವು

April 23, 2019

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ 3 ಚರ್ಚ್‍ಗಳು, 3 ಪಂಚ ತಾರಾ ಹೋಟೆಲ್‍ಗಳು ಸೇರಿದಂತೆ 8 ಕಡೆ ಭಾನುವಾರ ಬೆಳಿಗ್ಗೆ ನಡೆದ ಸರಣಿ ಸ್ಫೋಟದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ (ಭಾನು ವಾರ) 207 ರಷ್ಟಿದ್ದ ಸಾವಿನ ಸಂಖ್ಯೆಯು ಇಂದು 290ಕ್ಕೆ ಏರಿದೆ.

ಶ್ರೀಲಂಕಾ ಪ್ರವಾಸ ತೆರಳಿದ್ದ 7 ಜೆಡಿಎಸ್ ಮುಖಂಡರಲ್ಲಿ 6 ಮಂದಿ ಸೇರಿದಂತೆ ರಾಜ್ಯದ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿ 8ನೇ ಮೈಲಿನ ಹನುಮಂತರಾಯಪ್ಪ, ತುಮಕೂರಿನ ರಮೇಶ್‍ಗೌಡ, ನೆಲಮಂಗಲದ ಕಾಚನಹಳ್ಳಿಯ ಲಕ್ಷ್ಮೀನಾರಾಯಣ, ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ ರಂಗಪ್ಪ, ಅಡಕಮಾರನಹಳ್ಳಿಯ ಮಾರೇಗೌಡ, ಬೆಂಗಳೂರಿನ ಎಸ್.ಆರ್. ನಾಗರಾಜ ರೆಡ್ಡಿ, ನೆಲಮಂಗಲದ ಹೆಚ್. ಶಿವಕುಮಾರ್ ಹಾಗೂ ಮಂಗಳೂ ರಿನ ರಝೀನಾ ಖಾದರ್ ಸ್ಫೋಟದಲ್ಲಿ ಅಸುನೀಗಿದ್ದಾರೆ ಎಂದು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ.

ಆದರೆ ಖಚಿತವಾಗಿಲ್ಲ. ಇನ್ನು ಜೆಡಿಎಸ್ ಮುಖಂಡ ಪುಟ್ಟರಾಜು ಅವರು ನಾಪತ್ತೆಯಾಗಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವರಲ್ಲಿ ಕೆಲವರು ಚಿಕ್ಕಬಳ್ಳಾಪುರ ದಲ್ಲಿ ಸಂಸದ ಎಂ. ವೀರಪ್ಪಮೊಯ್ಲಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು ಎನ್ನಲಾಗಿದ್ದು, ಅಲ್ಲಿಂದ ಶನಿವಾರ ವಾಪಸ್ಸಾಗಿ ಶ್ರೀಲಂಕಾಗೆ ತೆರಳಿ ಕೊಲಂಬೋದಲ್ಲಿ ಶಾಂಗ್ರೀಲಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಿಗ್ಗೆ 8.45ರ ಸುಮಾರಿನಲ್ಲಿ ಇವರುಗಳು ಹೋಟೆಲ್‍ನಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ ಇವರೆಲ್ಲರೂ ಸಾವನ್ನಪ್ಪಿದ್ದಾರೆ. ಹೋಟೆಲ್‍ನಲ್ಲಿ ದಾಖಲಾಗಿದ್ದ ವಿವರಗಳನ್ನನುಸರಿಸಿ ಇವರನ್ನು ಪತ್ತೆಹಚ್ಚಲಾಗಿದೆ. ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಮೃತದೇಹಗಳ ಫೋಟೋಗಳನ್ನು ಬೆಂಗಳೂ ರಿಗೆ ರವಾನಿಸಲಾಗಿದ್ದು, ಅದನ್ನು ಮೃತರ ಕುಟುಂಬ ದವರಿಗೆ ತೋರಿಸಿ, ಖಚಿತಪಡಿಸಿಕೊಳ್ಳಲಾಗಿದೆ. ಮೃತದೇಹಗಳು ಛಿದ್ರವಾಗಿರುವು ದರಿಂದ ಮತ್ತಷ್ಟು ಖಚಿತತೆಗಾಗಿ ಮೃತರ ಸಂಬಂಧಿಕರನ್ನು ಅಧಿಕಾರಿಗಳು ಈಗಾಗಲೇ ಕೊಲಂಬೋಗೆ ಕರೆದೊಯ್ದಿದ್ದಾರೆ. ಮಂಗಳೂರಿನ ರಝೀನಾ ಖಾದರ್ ಅವರು ಮೃತಪಟ್ಟಿರುವುದು ಭಾನುವಾರವೇ ಖಚಿತವಾಯಿತಾದರೂ, ಅವರು ಕಾಸರಗೋಡಿನ ವಿಳಾಸ, ನೀಡಿದ್ದರಿಂದ ಅವರ ಸಾವಿನ ಕುರಿತ ಅಧಿಕೃತ ಮಾಹಿತಿಯನ್ನು ಕೇರಳ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೂ, ರಝೀನಾ ಅವರ ಪತಿ ಖಾದರ್ ಅವರು ದುಬೈನಿಂದ ಹಾಗೂ ಅವರ ಸಂಬಂಧಿಕರು ಮಂಗಳೂರಿನಿಂದ ಕೊಲಂಬೋಗೆ ತೆರಳಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಿರಿಸಿಕೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ಅವರಿಗೆ ಸೂಚಿಸಿದ್ದಾರೆ. ತುಮಕೂರಿನ ರಮೇಶ್‍ಗೌಡ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಂಗಪ್ಪ ಅವರ ಮನೆಗೆ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿದ್ದರು.

 

ಶ್ರೀಲಂಕಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾ ರಾಜಧಾನಿ ಕೊಲಂಬೋ ದಲ್ಲಿ ಭಾನುವಾರ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತಮ್ಮ ಸಿಂಗಾಪುರ್ ಪ್ರವಾಸವನ್ನು ಮೊಟಕುಗೊಳಿಸಿ ಶ್ರೀಲಂಕಾಗೆ ವಾಪಸ್ಸಾ ಗಿದ್ದು, ಭದ್ರತಾ ಮಂಡಳಿ ಸಭೆ ನಡೆ ಸಿದ ನಂತರ ಇಂದು ರಾತ್ರಿಯಿಂದಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿ ಸಿದ್ದಾರೆ. ಈ ನಡುವೆ ಇಂದು ಮತ್ತೊಂದು ಸ್ಫೋಟ ಸಂಭವಿಸಿದೆ.

ಚರ್ಚ್‍ವೊಂದರ ಮುಂದೆ ನಿಲ್ಲಿಸಿದ್ದ ವ್ಯಾನ್‍ನಲ್ಲಿ ಬಾಂಬ್ ಇರುವುದನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದವು. ಆದರೆ ಅದನ್ನು ನಿಷ್ಕ್ರಿಯ ಗೊಳಿಸುವುದರ ಒಳಗಾಗಿ ಬಾಂಬ್ ಸ್ಫೋಟಿಸಿದೆ. ಭದ್ರತಾ ಪಡೆಯು ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಂಡಿದ್ದು, ವ್ಯಾನ್ ಬಳಿಗೆ ಸಾರ್ವಜನಿಕರನ್ನು ಸುಳಿಯಲು ಬಿಡದೇ ಇದ್ದ ಪರಿಣಾಮ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಮತ್ತೊಂದೆಡೆ ರಾಜಧಾನಿ ಕೊಲೊಂಬೋ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‍ನಲ್ಲಿ 87 ಸುಧಾರಿತ ಸ್ಫೋಟಕಗಳು ಪತ್ತೆಯಾಗಿದ್ದು, ಭದ್ರತಾ ಪಡೆ ಅದನ್ನು ನಿಷ್ಕ್ರಿಯಗೊಳಿಸಿದೆ. ಭಾನುವಾರ ಶಂಕಿತ 7 ಮಂದಿಯನ್ನು ವಶಕ್ಕೆ ಪಡೆದಿದ್ದ ಭದ್ರತಾ ಪಡೆ ಇಂದು ಮತ್ತೆ 17 ಮಂದಿಯನ್ನು ವಶಕ್ಕೆ ಪಡೆದಿದ್ದು, ಒಟ್ಟಾರೆ 24 ಮಂದಿ ಶಂಕಿತರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವರು ತಿಳಿಸಿದ್ದಾರೆ.

ಇಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಉಗ್ರವಾದ ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಸರಣಿ ಸ್ಫೋಟದ ಹಿಂದೆ ವಿದೇಶದಲ್ಲಿರುವ ಉಗ್ರಗಾಮಿ ಸಂಘಟನೆಗಳ ಕೈವಾಡವೂ ಇರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಜಾಗತಿಕ ಸಮುದಾಯದ ನೆರವನ್ನು ಅವರು ಕೋರಿದ್ದಾರೆ. ಅಲ್ಲದೆ ನಾಳೆ (ಏ. 23) ರಾಷ್ಟ್ರೀಯ ಶೋಕದಿನ ಆಚರಿಸಲಾಗುವುದು ಎಂದು ಅಧ್ಯಕ್ಷರ ಕಚೇರಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಭಯೋತ್ಪಾದಕರು ದೇಶದಿಂದ ತಪ್ಪಿಸಿಕೊಳ್ಳದಂತೆ ಶ್ರೀಲಂಕಾ ಕರಾವಳಿ ಪಡೆ ಎಚ್ಚರ ವಹಿಸಿದೆ. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಗಳಲ್ಲೂ ಕಟ್ಟೆಚ್ಚರ ವಹಿಸಿದ್ದು, ವಿಮಾನ ಹಾರಾಟದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಮಧ್ಯೆ ಶ್ರೀಲಂಕಾ ಪ್ರವಾಸ ತೆರಳಿದ್ದ 20ಕ್ಕೂ ಹೆಚ್ಚು ಕನ್ನಡಿಗರು, ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.

Translate »