ಐವರು ಭೂಗರ್ಭಶಾಸ್ತ್ರಜ್ಞರು ಸೇರಿ ಮೈಸೂರಿನ 14 ಮಂದಿ ಶ್ರೀಲಂಕಾದಲ್ಲಿ ಸುರಕ್ಷಿತ
ಮೈಸೂರು

ಐವರು ಭೂಗರ್ಭಶಾಸ್ತ್ರಜ್ಞರು ಸೇರಿ ಮೈಸೂರಿನ 14 ಮಂದಿ ಶ್ರೀಲಂಕಾದಲ್ಲಿ ಸುರಕ್ಷಿತ

April 23, 2019

ಮೈಸೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ಐದು ಮಂದಿ ಭೂಗರ್ಭಶಾಸ್ತ್ರಜ್ಞರು ಸೇರಿದಂತೆ ಒಟ್ಟು 14 ಮಂದಿ ಸುರಕ್ಷಿತವಾಗಿದ್ದಾರೆ.

ಭೂಗರ್ಭಶಾಸ್ತ್ರಜ್ಞರಾದ ಎಂ.ವಿ.ರವಿಶಂಕರ್ (ಬಿಜೆಪಿ ಮುಖಂಡರು), ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಹೆಚ್.ಎನ್. ಉಮೇಶ್ ಸೇರಿದಂತೆ ಈ ಐವರ ಕುಟುಂಬ ಸದಸ್ಯರಾದ ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ ಹಾಗೂ ಸನತ್ ರಂಗನಾಥ್ ಸದ್ಯ ಸರಣಿ ಬಾಂಬ್ ಸ್ಫೋಟ ಸಂಭವಿಸಿರುವ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಬೆಂಟೋಟಾದ ಹಿಬಿಸ್ಕಸ್ ಹೋಟೆಲ್‍ನಲ್ಲಿ ಸುರಕ್ಷಿತವಾಗಿದ್ದಾರೆ.

ದಿವಾನ್ಸ್ ರಸ್ತೆಯಲ್ಲಿರುವ ಥಾಮಸ್ ಕುಕ್(ಇಂಡಿಯಾ) ಟ್ರಾವೆಲ್ಸ್ ಮೂಲಕ 6 ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಇವರು ತೆರಳಿದ್ದರು. ಏ.19ರಂದು ಮುಂಜಾನೆ ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೋ ತಲುಪಿದ ಇವರು, ಪಿನ್ನವಾಲಾಕ್ಕೆ ತೆರಳಿ, ಕ್ಯಾಂಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಏ.20ರಂದು ನುವಾರ ಇಲಿಯಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ವಾಪಸ್ಸು ಕ್ಯಾಂಡಿಗೆ ಮರಳಿದ್ದರು. ನಿನ್ನೆ ಕ್ಯಾಂಡಿಯಿಂದ ಬೆಂಟೋಟಾಗೆ ಪ್ರಯಾಣ ಬೆಳೆಸಿ, ಅಲ್ಲಿನ ಹಿಬಿಸ್ಕಸ್ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಪ್ರವಾಸ ಪಟ್ಟಿಯಂತೆ ಇಂದು ಬೆಂಟೋಟಾದಿಂದ ಗಲ್ಲೇಗೆ, ನಾಳೆ(ಏ.23) ಕೊಲೊಂಬೋಗೆ ತೆರಳಿ, ಏ.24ಕ್ಕೆ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು.

ಆದರೆ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಬೆಂಟೋಟಾ ದಿಂದ ಪ್ರವಾಸ ಮುಂದುವರೆಸಲು ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಸಿಲುಕಿಲ್ಲ. ಬೆಂಟೋಟಾದ ಹಿಬಿಸ್ಕಸ್ ಹೋಟೆಲ್‍ನಲ್ಲಿ ಸುರಕ್ಷಿತವಾಗಿದ್ದು, ಅಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರವಾಸಿಗರು ಹಾಗೂ ನಿವಾಸಿಗಳಲ್ಲಿ ಆತಂಕ ಮಡುಗಟ್ಟಿದೆ. ವಾಟ್ಸ್ ಆಪ್ ಕರೆ ಮೂಲಕ ಮಾತ್ರ ಸಂಪರ್ಕಿಸಬಹುದಾಗಿದೆ. ನಾಳೆ(ಏ.23) ಅಥವಾ ನಾಡಿದ್ದು(ಏ.24) ಕೊಲಂಬೋದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆಂದು ಟ್ರಾವೆಲ್ಸ್ ಮೂಲದಿಂದ ತಿಳಿದುಬಂದಿದೆ.

Translate »