ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ
ಮೈಸೂರು

ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ

April 23, 2019

ಮೈಸೂರು: ಮೈಸೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ‘ಸತ್ಯ’ ಎಂದು ಸತ್ಯಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಮೈಸೂರು ನಗರದ ಮಹಾತ್ಮಗಾಂಧಿ ರಸ್ತೆಯ ಜಿಲ್ಲಾ ನ್ಯಾಯಾಲಯದ ಎದುರಿ ನಿಂದ ರಾಷ್ಟ್ರೀಯ ಹೆದ್ದಾರಿ 212 ಸೇರುವ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ 50 ಕೋಟಿ ರೂ. ಎಸ್‍ಎಫ್‍ಸಿ ವಿಶೇಷ ಅನುದಾನದಡಿ 4 ಕೋಟಿ ರೂ. ಕಾಮಗಾರಿಯ 3ನೇ ಬಿಲ್‍ನಲ್ಲಿ 1.40 ಕೋಟಿ ರೂ. ದುರುಪಯೋಗವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ. ಮಂಜುನಾಥ್, ಜನವರಿ 29 ರಂದು ಕೌನ್ಸಿಲ್ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದ ಹಿನ್ನೆಲೆ ಯಲ್ಲಿ ಭಾರೀ ಪ್ರಮಾಣದ ಈ ಹಗರಣ ಬೆಳಕಿಗೆ ಬಂದಿತ್ತು. ಆರೋಪದ ಸತ್ಯಾಸತ್ಯತೆ ಅರಿಯಲು ಮೇಯರ್ ಪುಷ್ಪಲತಾ ಜಗ ನ್ನಾಥ್ ನೇತೃತ್ವದಲ್ಲಿ ರಚಿಸಿದ್ದ 10 ಮಂದಿ ಸದಸ್ಯರ ಸತ್ಯ ಶೋಧನಾ ಸಮಿತಿಯು ತೀವ್ರ ವಿಚಾರಣೆ ನಡೆಸಿ, ದಾಖಲಾತಿ ಗಳನ್ನು ಪರಿಶೀಲಿಸಿದ್ದಲ್ಲದೆ, ಮೂರು ಬಾರಿ ಕಾಮಗಾರಿ ನಡೆದಿರುವ ರಸ್ತೆಯನ್ನು ಪರಿಶೀಲಿಸಿದ ನಂತರ ಮಾರ್ಚ್ 8 ರಂದು ಸರ್ಕಾರಕ್ಕೆ 28 ಪುಟಗಳ ಸಮಗ್ರ ವರದಿ ಸಲ್ಲಿಸಿದೆ. ಸದರಿ ಕಾಮಗಾರಿಯನ್ನು ನಡೆಸದೆ ಗುತ್ತಿಗೆದಾರ ಕರೀಗೌಡನಿಗೆ 1,33,57,353 ರೂ. ಬಿಲ್ ಅನ್ನು ಅನುಮೋದಿಸಿ ಪಾಲಿಕೆ ಅಧಿಕಾರಿಗಳಾದ ಮೋಹನಕುಮಾರಿ ಮತ್ತು ಸುನಿಲ್ ಬಾಬು ಅಕ್ರಮ ಎಸಗಿದ್ದಾರೆ ಎಂದು ಅಭಿಪ್ರಾಯಿಸಿರುವ ಸಮಿತಿಯು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿ ತಪ್ಪಿ ತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ಸಮಿತಿ ಶಿಫಾರಸ್ಸು ಮಾಡಿದೆ. ಸೂಪ ರಿಂಟೆಂಡಿಂಗ್ ಇಂಜಿನಿಯರ್ ಅವರು ಕಡತವನ್ನು ಪರಿಶೀಲನೆಗೆ ತೆಗೆದುಕೊಂಡಾಗ ಅದರಲ್ಲಿ ನೋಟ್ ಶೀಟ್ ಕಳಚಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಅದರಂತೆ ಸದರಿ ನೋಟ್ ಮಾಯವಾಗಿರುವುದು ಕಂಡು ಬಂದಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳು ಪ್ರಯತ್ನಿಸಿರುವುದರಿಂದ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು ಎಂದು ಸಮಿತಿ ತಿಳಿಸಿದೆ. ಟಿಪ್ಪಣಿ ಪುಟದಲ್ಲಿ ಒಂದೇ ದಿನ ಲೆಕ್ಕ ಪರಿಶೋಧಕರು, ಲೆಕ್ಕಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು ಅನುಮೋದಿಸಿದ್ದು, ಫೆಬ್ರವರಿ 12 ರಂದು ಸಮಿತಿ ಸಭೆಯಲ್ಲಿ ಪರಿಶೀಲಿಸಿದಾಗ ಟಿಪ್ಪಣಿ ಪುಟವನ್ನೇ ಕಡತದಿಂದ ತೆಗೆದಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿರ್ವಹಿಸಿರುವ ಕಾಮಗಾರಿಗೆ ಮತ್ತೊಮ್ಮೆ ಬಿಲ್ ತಯಾರಿಸಿ ಅನುಮೋದನೆ ಪಡೆದುಕೊಂಡಿದ್ದರೂ ಈ ಅವ್ಯವಹಾರದ ಸುಳಿವು ಯಾವ ಮೇಲಧಿಕಾರಿ ಗಮನಕ್ಕೂ ಬಾರಲಿಲ್ಲ ಎನ್ನುವುದು, ಇಷ್ಟು ದೊಡ್ಡ ಮೊತ್ತದ ಕಾಮಗಾರಿಯನ್ನು ಅಂದಿನ ಉಪ ಆಯುಕ್ತ (ಅಭಿವೃದ್ಧಿ) ಜಿ.ಆರ್. ಸುರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಿರುವುದು ಸಂಶಯ ಮೂಡಿಸಿದೆ ಎಂದು ಸಮಿತಿ ತಿಳಿಸಿದೆ.

ಪ್ರಥಮ ದರ್ಜೆ ಗುತ್ತಿಗೆದಾರ ಸಿ. ಕರೀಗೌಡ ರಸ್ತೆ ಕಾಮಗಾರಿ ನಡೆಸದೇ ಈಗಾಗಲೇ ಒಂದು ಮತ್ತು ಎರಡನೇ ಬಿಲ್‍ನಲ್ಲಿ ನಡೆದಿರುವ ಕೆಲ ಕಾಮಗಾರಿಗಳು ಮತ್ತು ಬೇರೆ ಅನುದಾನದಲ್ಲಿ ನಡೆದಿರುವ ಕೆಲಸಗಳನ್ನೂ 3ನೇ ಬಿಲ್‍ನಲ್ಲಿ ಸೇರಿಸಿ 1.40 ಕೋಟಿ ರೂ. ಪೈಕಿ 1 ಕೋಟಿ ರೂ. ಹಣವನ್ನು ಪಡೆದುಕೊಂಡಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಡೆದಿರುವ ಹಣವನ್ನು ವಸೂಲಿ ಮಾಡಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಪ್ರಕರಣ ಇತ್ಯರ್ಥವಾಗುವವರೆಗೆ ಇತರೆ ಬಿಲ್ ಹಣ ಪಾವತಿಸಬಾರದೆಂದು ಸಮಿತಿಯು ಶಿಫಾರಸು ಮಾಡಿದೆ.

ಕಾಮಗಾರಿ ಗುಣಮಟ್ಟದ ಜವಾಬ್ದಾರಿ ಹೊಣೆ ಹೊತ್ತಿರುವ ಮೈಸೂರಿನ ಮೆ. ಕ್ಯಾಡ್ ಸ್ಟೇಷನ್ ಟೆಕ್ನಾಲಜೀಸ್ ಪ್ರೈ. ಲಿ. ಸಂಸ್ಥೆಯ ನಿರ್ಲಕ್ಷತೆಯೂ ಈ ಪ್ರಕರಣದಲ್ಲಿ ಕಂಡು ಬರುತ್ತದೆ. ಕಾಮಗಾರಿಗೆ ಇಂಟರ್‍ಲಾಕ್ ಟೈಲ್ಸ್, ಕರ್ಬ್ ಸ್ಟೋನ್‍ಗಳನ್ನು ಬಳಸಿರುವುದು ಪರಿಶೀಲನೆಯಲ್ಲಿ ಕಂಡು ಬಂದಿಲ್ಲ. 47ನೇ ವಾರ್ಡಿನಲ್ಲಿ ನಡೆದ ಕಾಮಗಾರಿಯನ್ನು ಕಾರ್ಪೊರೇಟರ್ ಶಿವಕುಮಾರ್ ಇರುವ ಛಾಯಾಚಿತ್ರವನ್ನು ಎಂಜಿ ರಸ್ತೆ ಕೆಲಸಕ್ಕೆ ಬಳಸಿಕೊಂಡು ವರದಿಯನ್ನು ದೃಢೀಕರಿಸಿರುವುದರಿಂದ ಟೆಂಡರ್ ರದ್ದುಪಡಿಸಿ ಅವರನ್ನು ಬ್ಲಾಕ್ ಲಿಸ್ಟ್‍ಗೆ ಸೇರಿಸಬೇಕೆಂದು ಅಭಿಪ್ರಾಯಪಡಲಾಗಿದೆ.

ಬಿಲ್‍ನೊಂದಿಗಿನ ಚೆಕ್‍ಲಿಸ್ಟ್‍ಗೆ ಕಿರಿಯ ಇಂಜಿನಿಯರ್, ಅಭಿವೃದ್ಧಿ ಅಧಿಕಾರಿ, ವಲಯ ಆಯುಕ್ತರು, ಕಾರ್ಯಪಾಲಕ ಇಂಜಿನಿಯರ್ (ಸಿವಿಲ್-ಪಶ್ಚಿಮ), ಉಪ ಆಯುಕ್ತರು (ಅಭಿವೃದ್ಧಿ), ಲೆಕ್ಕಪರಿಶೋಧಕರು, ಲೆಕ್ಕಾಧೀಕ್ಷಕರು, ಲೆಕ್ಕಾಧಿಕಾರಿ ಹಾಗೂ ಮುಖ್ಯ ಲೆಕ್ಕಾಧಿಕಾರಿಯವರ ಸಹಿಗಳಿವೆಯಾದರೂ ದಿನಾಂಕ ನಮೂದಿಸದಿರುವುದು ಸಾಕಷ್ಟು ಸಂಶಯ ಮೂಡಿಸಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವಾಗ ನೀಡಿದ್ದ ಬ್ಯಾಂಕ್ ಗ್ಯಾರಂಟಿ ರಿನೀವಲ್ ಆಗದಿದ್ದರೂ, ಬಿಲ್ ಅನುಮೋದಿಸಲಾಗಿದೆ. 50 ಕೋಟಿ ರೂ. ಎಸ್‍ಎಫ್‍ಸಿ ವಿಶೇಷ ಅನುದಾನದ ಭಾಗವಾದ 4 ಕೋಟಿ ರೂ. ಕಾಮಗಾರಿಯಲ್ಲಿ ಅವ್ಯವಹಾರ ಆರೋಪವಿರುವುದರಿಂದ ಉಳಿದ 46 ಕೋಟಿ ರೂ. ಬಗ್ಗೆಯೂ ಅನುಮಾನ ಬಂದಿರುವುದರಿಂದ ಸ್ವತಂತ್ರ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕೆಂದು ಸತ್ಯ ಶೋಧನಾ ಸಮಿತಿ ತಾನು ನೀಡಿರುವ ವರದಿಯಲ್ಲಿ ತಿಳಿಸಿದೆ.

ಎಸ್.ಟಿ. ರವಿಕುಮಾರ್

Translate »