ಶ್ರೀಲಂಕಾ ಸ್ಫೋಟ ಹೊಣೆ ಹೊತ್ತ ಇಸಿಸ್
ಮೈಸೂರು

ಶ್ರೀಲಂಕಾ ಸ್ಫೋಟ ಹೊಣೆ ಹೊತ್ತ ಇಸಿಸ್

April 24, 2019

ಬ್ರಿಟನ್: ನೆರೆಯ ಶ್ರೀಲಂಕಾದಲ್ಲಿ 321ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟ ನಡೆಸಿದ್ದು ನಾವೇ ಎಂದು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಇಸಿಸ್) ಹೊಣೆ ಹೊತ್ತುಕೊಂಡಿದೆ.

ಕಳೆದ ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋದ 3 ಚರ್ಚ್‍ಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ನೂರಾರು ಅಮಾಯಕ ಕ್ರಿಶ್ಚಿಯನ್ನರು ಹಾಗೂ ಐಷಾರಾಮಿ ಹೋಟೆಲ್‍ಗಳಲ್ಲಿ ತಂಗಿದ್ದ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈವರೆಗೂ ಸುಮಾರು 321ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ವಿದೇಶಿಯರೂ ಸಾವನ್ನಪ್ಪಿದ್ದು, ಇವರಲ್ಲಿ ಕರ್ನಾಟಕದ 8 ಮಂದಿ ಸೇರಿ 10 ಮಂದಿ ಭಾರತೀಯರೂ ಇದ್ದಾರೆ.

ಈ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಇಡೀ ವಿಶ್ವವನ್ನೇ ಬೆಚ್ಟಿ ಬೀಳಿಸಿರುವಂತೆಯೇ ಈ ದಾಳಿ ನಡೆಸಿದ್ದು ನಾನೇ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ತನ್ನ ಮುಖವಾಣಿ ಅಮಾಖ್‍ನಲ್ಲಿ ಇಸಿಸ್ ಹೇಳಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ ಹೇಳಿದೆ. ಅಂತೆಯೇ ದಾಳಿ ಹೊಣೆ ಹೊತ್ತಿರುವ ಇಸಿಸ್ ಈ ಬಗ್ಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನೂ ಬಿಡುಗಡೆ ಮಾಡಿಲ್ಲ ಎಂದು ವರದಿ ಹೇಳಿದೆ.

ಕ್ರೈಸ್ಟ್ ಚರ್ಚ್ ದಾಳಿಗೆ ಪ್ರತಿಕಾರ: ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್‍ನ ಮಸೀದಿಯಲ್ಲಿ ಕಳೆದ ಮಾರ್ಚ್‍ನಲ್ಲಿ ನಡೆದಿದ್ದ ಸಾಮೂಹಿಕ ಹತ್ಯೆಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಶ್ರೀಲಂಕಾದ ರಕ್ಷಣಾ ಉಪ ಸಚಿವ ರುವಾನ್ ವಿಜೆವರ್ದನೆ ಇಂದು ಶ್ರೀಲಂಕಾ ಸಂಸತ್ತಿಗೆ ಮಾಹಿತಿ ನೀಡಿದ್ದು, ‘ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್‍ನಲ್ಲಿ ಮುಸ್ಲಿಮರ ಮಸೀದಿಗಳ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಈಸ್ಟರ್ ಭಾನುವಾರದಂದು ನ್ಯಾಷನಲ್ ಥೌವೀತ್ ಜಮಾಥ್ (ಎನ್‍ಟಿಜೆ) ಹೆಸರಿನ ಇಸ್ಲಾಮಿಕ್ ತೀವ್ರವಾದಿ ಗುಂಪು ಸರಣಿ ಬಾಂಬ್ ದಾಳಿಗಳನ್ನು ನಡೆಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ವಿಶೇಷ ಹೇಳಿಕೆ ನೀಡಿರುವ ಸಚಿವ ವಿಜೆವರ್ದನೆ, ದಾಳಿ ನಡೆಸಿರುವ ತೀವ್ರವಾದಿಗಳ ಗುಂಪು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಜೆಎಮ್‍ಐನೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯ ಮೂಲಕ ಬಹಿರಂಗವಾಗಿದ್ದು, ಈ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ಗುಂಪಿನ ಪೂರ್ಣ ಮಾಹಿತಿ ನೀಡಲು ನಿರಾಕರಿಸಿದ ಅವರು, ಇಂತಹ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳ ಸದಸ್ಯರನ್ನು ನ್ಯಾಯದ ಕಕ್ಷೆಗೆ ಒಳಪಡುವುದನ್ನು ಖಾತರಿಪಡಿಸಲಾಗುವುದು. ದಾಳಿಗಳ ಹಿಂದಿರುವ ವ್ಯಕ್ತಿಗಳ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.

ಈಸ್ಟರ್ ಭಾನುವಾರದಂದು ಶ್ರೀಲಂಕಾದ ಚರ್ಚ್‍ಗಳು ಹಾಗೂ ಪಂಚತಾರಾ ಹೋಟೆಲ್‍ಗಳ ಮೇಲೆ ಸ್ಥಳೀಯ ಇಸ್ಲಾಮಿಸ್ಟ್ ತೀವ್ರವಾದಿ ಗುಂಪು, ನ್ಯೂಜಿಲೆಂಡ್ ಮಸೀದಿಗಳ ಮೇಲೆ ನಡೆದ ದಾಳಿಗಳಿಗೆ ಪ್ರತಿಕಾರವಾಗಿ ಭೀಕರ ಬಾಂಬ್ ದಾಳಿ ನಡೆಸಿದ್ದವು ಎಂದು ಪ್ರಾಥಮಿಕ ತನಿಖಾ ಅಂಶಗಳನ್ನು ಉಲೇಖಿಸಿ ಹಿರಿಯ ಸಚಿವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಮೂರು ಚರ್ಚ್‍ಗಳು ಹಾಗೂ ಹಲವು ವೈಭೋಪೇತ ಹೋಟೆಲ್‍ಗಳ ಮೇಲೆ ಭಾನುವಾರ ಬೆಳಿಗ್ಗೆ ನಡೆಸಲಾದ ಸರಣಿ ಭೀಕರ ಬಾಂಬ್ ದಾಳಿಗಳಲ್ಲಿ ಈವರೆಗೂ 321 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಎಲ್‍ಟಿಟಿಇ ನೊಂದಿಗಿನ ಅಮಾನವೀಯ ನಾಗರಿಕ ಸಮರ ಅಂತ್ಯಗೊಂಡ 10ವರ್ಷಗಳ ನಂತರ ನಡೆದ ಈ ದಾಳಿಗಳು ದ್ವೀಪರಾಷ್ಟ್ರದ ಶಾಂತಿಯನ್ನೇ ನುಚ್ಚುನೂರು ಮಾಡಿದೆ.

ಭಾರತ ಮೊದಲೇ ಸೂಚನೆ ನೀಡಿತ್ತು: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸುತ್ತದೆ ಎಂದು ಭಾರತ ಮೊದಲ ಸೂಚನೆ ನೀಡಿತ್ತು. ಆದರೆ ನಮ್ಮಲ್ಲಿ ನಿಸ್ಸಂಶಯವಾಗಿ ಲೋಪವಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತ ನಮ್ಮೊಂದಿಗೆ ಕೆಲ ಗುಪ್ತಚರ ಮಾಹಿತಿಗಳನ್ನು ಹಂಚಿಕೊಂಡಿತ್ತು. ಅದನ್ನು ಬಳಸಿಕೊಳ್ಳುವಲ್ಲಿ ನಮ್ಮಿಂದ ಲೋಪವಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ನಮ್ಮ ತನಿಖಾ ಸಂಸ್ಥೆಗಳು ನಿರಂತರ ಸಂಪರ್ಕದಲ್ಲಿವೆ. ದೇಶದ ಹೊರಗಿನ ಮಾಹಿತಿ ಕಲೆ ಹಾಕಲು ಇತರ ದೇಶಗಳ ತನಿಖೆ ಸಂಸ್ಥೆಗಳ ನೆರವನ್ನೂ ನಾವು ಕೇಳಿದ್ದೇವೆ ಎಂದರು. ಕ್ರೈಸ್ಟ್ ಚರ್ಚ್ ಮೇಲಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆದಿರುವ ಸಾಧ್ಯತೆಗಳಿವೆ. ಆದರೆ ಅದೇ ನಿಖರ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇನ್ನು ತನಿಖೆ ನಡೆಸುತ್ತಿರುವ ಪೆÇಲೀಸರಷ್ಟೇ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದರು.

Translate »