ಹುಣಸೂರು: ಗುಡುಗು-ಸಿಡಿಲು, ಬಿರುಗಾಳಿ ಸಹಿತ ಮಂಗಳವಾರ ಸುರಿದ ಭಾರೀ ಮಳೆಗೆ ಹುಣಸೂರು ತಾಲೂಕು ತತ್ತರಿಸಿ ಹೋಗಿದ್ದು, ಮನೆಯೊಂದರ ಮೇಲೆ ಮರ ಉರುಳಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.
ತಾಲೂಕಿನಾದ್ಯಂತ ಇಂದು ಸಂಜೆ 6 ಗಂಟೆ ಯಿಂದ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಭಾರೀ ಬಿರುಗಾಳಿ-ಮಳೆ ಹಾಗೂ ಮಿಂಚು-ಗುಡುಗಿನ ಆರ್ಭಟಕ್ಕೆ ತಾಲೂಕಿನ ಹಲವೆಡೆ ಮನೆಗಳು ಜಖಂಗೊಂಡು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿರುವ
ಪರಿಣಾಮ ಬೆಂಗಳೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಹುಣಸೂರು-ಪಿರಿಯಾಪಟ್ಟಣ ನಡುವೆ ಹಾಗೂ ಆನೆಚೌಕೂರು ರಸ್ತೆಯಲ್ಲಿ ಪಚವಳ್ಳಿ ಬಳಿ 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಹನಗೋಡು ವ್ಯಾಪ್ತಿಯ ಕಲ್ಲಹಳ್ಳಿ, ಹುಣಸೇಗಾಲ, ಆಡಿಗನಹಳ್ಳಿ, ತಟ್ಟೆಕೆರೆ, ಶಿಂಡೇನಹಳ್ಳಿ, ಕಾಳಭೂಚನಹಳ್ಳಿ, ಮುದಗನೂರು, ಬಿಲ್ಲೇನಹೊಸಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿನ ಮನೆಗಳು ಜಖಂಗೊಂಡಿದ್ದು, ಜಮೀನುಗಳು ಜಲಾವೃತವಾಗಿ ಅಪಾರ ಹಾನಿ ಸಂಭವಿಸಿದೆ.
100ಕ್ಕೂ ಹೆಚ್ಚು ಮನೆಗೆ ಹಾನಿ: ಭಾರೀ ಮಳೆ-ಗಾಳಿಗೆ ತಾಲೂಕಿನ ಆಡಿಗನಹಳ್ಳಿ ಗ್ರಾಮದಲ್ಲಿ 10-15 ಮನೆಗಳು ಜಖಂಗೊಂಡರೆ, ತಟ್ಟೆಕೆರೆ ಗ್ರಾಮದಲ್ಲಿ 20-25 ಮನೆಗಳು, ಶಿಂಡೇನಹಳ್ಳಿಯಲ್ಲಿ 15-20, ಕಾಳಬೂಚನಹಳ್ಳಿಯಲ್ಲಿ 30-40, ಮುದಗನೂರು ಗ್ರಾಮದಲ್ಲಿ 15-20, ಬಿಲ್ಲೇನಹೊಸಳ್ಳಿಯಲ್ಲಿ 18 ಮನೆಗಳು ಜಖಂಗೊಂಡಿವೆ. ಹನಗೋಡು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಸಾಕಷ್ಟು ಮನೆಗಳ ಮೇಲ್ಛಾವಣಿಗಳು ಗಾಳಿಗೆ ಹಾರಿ ಹೋಗಿದ್ದಲ್ಲದೆ, ಮರಗಳು ಧರೆಗೆ ಉರುಳಿದ ಕಾರಣ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಕಲ್ಲಹಳ್ಳಿ ಗ್ರಾಮದಲ್ಲೂ ಸಹ ಸಾಕಷ್ಟು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಬೆಲೆ ಬಾಳುವ ಉಪಕರಣಗಳು ಹಾನಿಗೀಡಾಗಿದ್ದು, ಹಲವು ಕುಟುಂಬಗಳು ಸೂರು ಕಳೆದುಕೊಂಡಿವೆ.
ಕಗ್ಗತ್ತಲಲ್ಲಿ ಮುಳುಗಿದ ಗ್ರಾಮಗಳು: ನೂರಾರು ವಿದ್ಯುತ್ ಕಂಬಗಳು ಮಳೆ-ಗಾಳಿಗೆ ಧರೆಗೆ ಉರುಳಿದ್ದರಿಂದ ಸಂಜೆಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬಹುತೇಕ ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿವೆ. ತಾಲೂಕಿನ ಹುನಸೇಗಾಲ, ಆಡಿಗನಹಳ್ಳಿ, ತಟ್ಟೆಕೆರೆ, ಶಿಂಡೇನಹಳ್ಳೀ, ಕಾಳಭೂಚನಹಳ್ಳಿ, ಬಿಲ್ಲೇನಹೊಸಳ್ಳಿ ಹಾಗೂ ಮುದಗನೂರು ಹಾಗೂ ಹನಗೂಡು ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಜಮೀನು ಜಲಾವೃತ, ಬೆಳೆ ನಾಶ: ತಾಲೂಕಿನ ಬಿಲ್ಲೇನಹೊಸಳ್ಳಿ ರಾಮಚಂದ್ರ ಅವರಿಗೆ ಸೇರಿದ ಜಮೀನು ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿನ ಬಾಳೆ ಬೆಳೆ ಮಳೆ-ಬಿರುಗಾಳಿಗೆ ಸಂಪೂರ್ಣ ನೆಲ ಕಚ್ಚಿದೆ. ತಟ್ಟೆಕೆರೆಯಲ್ಲಿ ತಾಪಂ ಸದಸ್ಯ ಶ್ರೀನಿವಾಸರಿಗೆ ಸೇರಿದ ಫಲಕ್ಕೆ ಬಂದಿದ್ದ ಎಂಟು ಎಕರೆ ಬಾಳೆ ಬೆಳೆ ಸಹ ನೆಲಕಚ್ಚಿದ್ದರೆ, ಇದಲ್ಲದೆ ಹಲವೆಡೆ ತೆಂಗು-ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೂ ಹಾನಿಯಾಗಿ, ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
ತಾಲೂಕು ಆಡಳಿತ ಪರಿಶೀಲನೆ: ಮಳೆ ಹಾನಿಯಿಂದ ನಲುಗಿರುವ ಗ್ರಾಮಗಳಿಗೆ ತಹಶೀಲ್ದಾರ್ ಬಸವರಾಜ್, ಸೆಸ್ಕ್ ಎಇಇ, ಅಗ್ನಿ ಶಾಮಕ ದಳದ ತಂಡಗಳು ಧಾವಿಸಿ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದೆಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮನೆ ಮೇಲೆ ಮರ ಉರುಳಿ ವೃದ್ಧೆ ಸಾವು: ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮನೆ ಮೇಲೆ ಮರ ಉರುಳಿದ ಪರಿಣಾಮ ವೃದ್ಧೆಯೊಬ್ಬರು ಸ್ಥಾಳದಲ್ಲೇ ಅಸು ನೀಗಿದ್ದಾರೆ.
ಗ್ರಾಮದ ದಿವಂಗತ ಮಾಜಿ ಸಿಎಂ ದೇವರಾಜ ಅರಸರ ತೋಟದಲ್ಲಿ ಶೀಟ್ ಮನೆಯಲ್ಲಿ ವಾಸವಿದ್ದ ಗ್ರಾಮದ ಲೇ. ಕಳಸಯ್ಯ ಪತ್ನಿ ದೊಡ್ಡತಾಯಮ್ಮ(70) ಮೃತರು.ಇವರು ವಾಸವಿದ್ದ ಶೀಟ್ ಮನೆಯ ಮೇಲೆ ಭಾರೀ ಗಾಳಿಗೆ ಮರ ಉರುಳಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
10 ಕಿ.ಮೀ. ವರೆಗೆ ಸರತಿಯಲ್ಲಿ ವಾಹನಗಳು
ಬೆಂಗಳೂರು- ಬಂಟ್ವಾಳ ಹೆದ್ದಾರಿಯ ಹುಣಸೂರು-ಪಿರಿಯಾಪಟ್ಟಣ ನಡುವೆ ಹಲವಾರು ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ದ್ವಿಚಕ್ರ ವಾಹನ ಸೇರಿದಂತೆ ಭಾರೀ ವಾಹನಗಳು ಸುಮಾರು 10 ಕಿ.ಮೀ. ವ್ಯಾಪ್ತಿ ವರೆಗೂ ಸಾಲುಗಟ್ಟಿ ಗಂಟೆಗಟ್ಟಲೇ ನಿಲ್ಲಬೇಕಾಯಿತು.
ವಿಷಯ ತಿಳಿದು ಸಿಬ್ಬಂದಿಯೊಡನೆ ತಹಶೀಲ್ದಾರ್ ಬಸವರಾಜ್, ಸೆಸ್ಕ್ ಅಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೆಸಿಬಿ, ಕಟ್ಟರ್‍ಗಳ ಮೂಲಕ ರಸ್ತೆಗೆ ಉರುಳಿರುವ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಿಂದ ಹುಣಸೂರು-ಪಿರಿಯಾಪಟ್ಟಣ ರಸ್ತೆಯಲ್ಲಿ 2 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು.
ಶಾಸಕರ ಸಾಂತ್ವನ: ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಹೆಚ್.ವಿಶ್ವನಾಥ್ ದೂರವಾಣಿಯಲ್ಲಿ ಸಂರ್ಪಕಿಸಿ ತಾಲೂಕಿನ ಕಲ್ಲಹಳ್ಳಿ ಮನೆ ಮೇಲೆ ಮರ ಬಿದ್ದು ಮೃತಪಟ್ಟ ದೊಡ್ಡತಾಯಮ್ಮ ನಿಧನಕ್ಕೆ ಸಂತಾಪ ಸೂಚಿಸಿ, ನಾಳೆ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರಿಗೂ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಚುನಾವಣೆ ನಿಮಿತ್ತ ತಾವು ಹೊರಗಿದ್ದು, ವಿಷಯ ತಿಳಿದಿದೆ. ಇಂದು ರಾತ್ರಿಯೇ ಹೊರಟು. ನಾಳೆ ಬೆಳಿಗ್ಗೆಯೇ ಮಳೆಯಿಂದ ಹಾನಿಗೊಳಗಾಗಿರುವ ಎಲ್ಲಾ ಗ್ರಾಮಗಳಿಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಕ್ಷಣಾ ಕಾರ್ಯ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.