ಬೇಲೂರಲ್ಲಿ ಸಸಿ ನೆಟ್ಟ ಸಾಲು ಮರದ ತಿಮ್ಮಕ್ಕ
ಹಾಸನ

ಬೇಲೂರಲ್ಲಿ ಸಸಿ ನೆಟ್ಟ ಸಾಲು ಮರದ ತಿಮ್ಮಕ್ಕ

June 16, 2019

ಬೇಲೂರು: ನಾನು ಅಂದು ನೆಟ್ಟ ಸಸಿಗಳು ಇಂದು ದೊಡ್ಡ ಮರ ಗಳಾಗಿ ಬೆಳೆದಿರುವಂತೆ ಇಂದಿನ ಯುವ ಪೀಳಿಗೆ ಮತ್ತು ರೈತ ಮಕ್ಕಳು ಗಿಡ ಮರ ಗಳನ್ನು ಬೆಳೆಸುವ ಮೂಲಕ ನಾಡಿನ ಪರಿಸರಕ್ಕೆ ನೆರಳಾಗಲಿ ಎಂದು ಸಾಲು ಮರದ ತಿಮ್ಮಕ್ಕ ಹಾರೈಸಿದರು.
ಬೇಲೂರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಸಸಿ ನೆಡುವ ಮೂಲಕವೇ ಆ ಹಿರಿಯ ಜೀವ ನೆರೆದಿದ್ದ ವರಿಗೆ ಪರಿಸರದ ಪಾಠ ಹೇಳಿದರು.

ದೇಶಾದ್ಯಂತ ಮಳೆ-ಬೆಳೆ ಸಾಕಷ್ಟು ಪ್ರಮಾಣದಲ್ಲಾಗಲಿ. ರೈತರ ಜೀವನ ಹಸನಾಗಲಿ. ಕನ್ನಡ ನಾಡಿನ ಉನ್ನತೀ ಕರಣವಾಗಲಿ ಎಂದು ಆಶಿಸಿದರು.

ನಾನು ಹೋದೆಡೆಯೆಲ್ಲಾ ಸಹಸ್ರಾರು ಸಸಿಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿದ್ದೇನೆ. ಇಂದು ಅವು ದೊಡ್ಡ ಮರ ಗಳಾಗಿ ನಾಡಿಗೆ ನೆರಳಾಗಿವೆ. ಅದೇ ರೀತಿ ಇಂದಿನ ಮತ್ತು ಮುಂದಿನ ಯುವ ಪೀಳಿಗೆ, ಭೂಮಿ ತಾಯಿಯ ಮಕ್ಕಳಂತೆ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಕಾರಣವಾಗಲಿ ಎಂದರು.

ಇದೇ ಸಂದರ್ಭ ಸಾಲು ಮರದ ತಿಮ್ಮಕ್ಕ ಅವರಿಗೆ ತಹಸೀಲ್ದಾರ್ ಮೇಘನಾ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್, ನಮ್ಮ ಕಚೇರಿ ಆವರಣದಲ್ಲಿ ಸಾಲು ಮರದ ತಿಮ್ಮಕ್ಕ ಅವರೇ ಇಂದು ಸಸಿ ನೆಡುತ್ತಿರು ವುದು ನಮ್ಮೆಲ್ಲರ ಭಾಗ್ಯ. ಇಳಿವಯಸ್ಸಿ ನಲ್ಲೂ ಅವರು ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡಿರುವುದನ್ನು ನೋಡಿದರೆ ಎಂತಹವರಿಗೂ ಪ್ರೇರಣೆ ನೀಡುತ್ತದೆ. ತಾಲೂಕಿನ ಪ್ರತಿ ರೈತರು ಹಾಗೂ ಪರಿಸರ ಪ್ರೇಮಿಗಳು ತಿಮ್ಮಕ್ಕ ಅವರ ಆದರ್ಶವನ್ನು ಪರಿಪಾಲಿಸಬೇಕಿದೆ ಎಂದರು.

ತಾಲೂಕಿನೆಲ್ಲೆಡೆ ಒಟ್ಟು 8 ಸಾವಿರ ಗಿಡ ಗಳನ್ನು ನೆಡುವ ಬಗ್ಗೆ ನಾನು ಕಳೆದ ವಾರ ಆಲೋಚಿಸಿದ್ದೆ. ಆದರೆ ಈ ಪರಿಸರ ಪ್ರಿಯ ಅಜ್ಜಿಯ ಸ್ಫೂರ್ತಿಯನ್ನು ನೋಡಿ 10 ಸಾವಿ ರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸ ಬೇಕೆಂಬ ಹುಮ್ಮಸ್ಸು ಮೂಡಿದೆ ಎಂದರು.
ಈ ಸಂದರ್ಭ ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ, ವನಸಿರಿ ಟ್ರಸ್ಟ್ ಅಧ್ಯಕ್ಷ ಬಳ್ಳೂರು ಉಮೇಶ್, ಉಪ ತಹಸೀಲ್ದಾರ್ ಮತ್ತಿತರರಿದ್ದರು.

Translate »